ಮನೆ ರಾಜಕೀಯ ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ 123 ಕ್ಷೇತ್ರ ಗೆಲ್ಲಲಿದೆ: ಎಚ್.ಡಿ. ಕುಮಾರಸ್ವಾಮಿ

ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ 123 ಕ್ಷೇತ್ರ ಗೆಲ್ಲಲಿದೆ: ಎಚ್.ಡಿ. ಕುಮಾರಸ್ವಾಮಿ

0

ಮೈಸೂರು: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ 123 ಕ್ಷೇತ್ರಗಳಲ್ಲಿ ಖಂಡಿತವಾಗಿಯೂ ಜಯ ಸಾಧಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ 70ರಿಂದ 75 ಸ್ಥಾನಗಳನ್ನು ಮಾತ್ರ ಗೆಲ್ಲಬಹುದು. ಕಾಂಗ್ರೆಸ್ ನ ಒಳಜಗಳದ ಜೊತೆಗೆ ಸಿದ್ದರಾಮಯ್ಯ ಅವರಿಗೆ ಅವರ ಮೇಲೇ ನಂಬಿಕೆಯಿಲ್ಲ. ಹಾಗಾಗಿ ಬೇರೆ ಬೇರೆ ಕ್ಷೇತ್ರಗಳಿಂದ ಸ್ಪರ್ಧಿಸಲು ಪ್ರಯತ್ನಿಸುತ್ತಿದ್ಧಾರೆ ಎಂದರು.

ಅಲ್ಲದೆ, ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯನವರ ಮನೆಯಲ್ಲಿದೆ ಎಂದೂ ಆರೋಪಿಸಿದರು. ನಾವು ಯಾವುದೇ ಶ್ರಮ ಹಾಕದಿದ್ಧರೂ ಕನಿಷ್ಠ 50 ಕ್ಷೇತ್ರಗಳನ್ನು ಗೆಲ್ಲುತ್ತೇವೆ. 123 ಕ್ಷೇತ್ರ ಗೆಲ್ಲಲೇ ಬೇಕೆಂದು ಹೆಚ್ಚಿನ ಶ್ರಮ ಹಾಕುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ಬಿಜೆಪಿಯಂತಹ ಕೆಟ್ಟ ಸರ್ಕಾರ ಬರಲು ಕಾಂಗ್ರೆಸ್ ಪಕ್ಷದವರೇ ಕಾರಣ. ನಾನು ಏನು ಮಹಾಪರಾಧ ಮಾಡಿದ್ದೇ ಅಂತ ಕೆಳಗಿಳಿಸಿದರು? ಸಿದ್ದರಾಮಯ್ಯ ಎರಡು ಕ್ಷೇತ್ರ ಸುರಕ್ಷಿತವಲ್ಲ ಎಂದು ಮೂರು ಕ್ಷೇತ್ರದಿಂದಲೂ ಸ್ಪರ್ಧಸಬಹುದು. ನಾನೇನು ಅವರ ಬಗ್ಗೆ ಸಹಾನುಭೂತಿ ತೋರಿಲ್ಲ. ಯಾಕಪ್ಪ ಇವರಿಗೆ ಇಂತಹ ದೈನೇಸಿ ಪರಿಸ್ಥಿತಿ ಬಂತು ಎಂದು ನಾನು ಹೇಳಿದ್ದೇನೆ ಎಂದರು.

ಮೀಸಲಾತಿ ಹೆಚ್ಚಳ ಘೋಷಣೆ ಮಾಡಿರುವ ವಿಚಾರದಲ್ಲಿ ಮಕ್ಕಳ ಆಟವಾಡಿದ್ದಾರೆ. ಚುನಾವಣೆ ಘೋಷಣೆಗೆ ಕೆಲವೇ ದಿನಗಳಿರುವಾಗ ಮೀಸಲಾತಿ ಹೆಚ್ಚಳ ಮಾಡುವ ಮೂಲಕ ಜನರ ಕಿವಿಗೆ ಹೂವು ಮುಡಿಸಿದ್ದಾರೆ.ಈಗ ಲಿಂಗಾಯತರು, ಒಕ್ಕಲಿಗರ ಕಿವಿಗೆ ಹೂವು ಮುಡಿಸಿದ್ದಾರೆ. ಇವರು ಮಾಡಿರುವ ಮೀಸಲಾತಿ ಬಹುತೇಕ ಕಾರ್ಯರೂಪಕ್ಕೆ ಬರುವುದಿಲ್ಲ. ಸಮಾಜವನ್ನು ಒಡೆಯುವ ಸಲುವಾಗಿ ಮುಸ್ಲಿಮರ ಮೀಸಲಾತಿ ರದ್ದು ಮಾಡಿ ಬೇರೆ ಸಮುದಾಯಕ್ಕೆ ಹಂಚಿದ್ದಾರೆ. ಈ ಮೂಲಕ ಹಿಂದೂ ಮುಸ್ಲಿಮರ ಮಧ್ಯೆ ಸಂಘರ್ಷ ಹುಟ್ಟುಹಾಕಲು, ಬೆಂಕಿ ಹಚ್ಚಲು ಈ ರೀತಿ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಬಿಜೆಪಿಯವರು ಸಂವಿಧಾನವನ್ನು ಸಮಾಧಿ ಮಾಡಲು ಹೊರಟಿದ್ದಾರೆ. ಕನ್ನಡಿಗರು ಕಷ್ಟದಲ್ಲಿದ್ದಾಗ ಸ್ಪಂದಿಸದ ಪ್ರಧಾನಿ ನರೇಂದ್ರ ಮೋದಿ ಇದೀಗ ಚುನಾವಣೆ ಹಿನ್ನೆಲೆಯಲ್ಲಿ ಕನ್ನಡಿಗರ ಮತಕ್ಕೋಸ್ಕರ ಬರುತ್ತಿದ್ದಾರೆ. ಕೃಷ್ಣ ಮೇಲ್ದಂಡೆ ಯೋಜನೆಗೆ 5,300 ಕೋಟಿ ಈಗ ಘೋಷಣೆ ಮಾಡಿದ್ದಾರೆ. ಆದರೆ ಹಣ ಬಿಡುಗಡೆ ಆಗುವ ಅನುಮಾನವಿದೆ. ಸಾಲು ಸಾಲು ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆಯನ್ನು ಯಾವ ಪುರುಷಾರ್ಥಕ್ಕಾಗಿ ಮಾಡುತ್ತಿದ್ದೀರಿ. ಚುನಾವಣೆ ಹಿನ್ನೆಲೆಯಲ್ಲಿ ಎಲ್ಲವನ್ನೂ ಮಾಡುತ್ತಿದ್ದೀರಿ. ಉತ್ತರಪ್ರದೇಶದ ಆಟ ಇಲ್ಲಿ ನಡೆಯುವುದಿಲ್ಲ ಎಂದು ಅವರು ಹೇಳಿದ್ದಾರೆ.