ಮನೆ ಸುದ್ದಿ ಜಾಲ ದೇಶದಲ್ಲಿ ಡಿಜಿಟಲ್ ಪಾವತಿಗಳ ಹೆಚ್ಚಳ: ಎಸ್.ಎ ರಾಮದಾಸ್

ದೇಶದಲ್ಲಿ ಡಿಜಿಟಲ್ ಪಾವತಿಗಳ ಹೆಚ್ಚಳ: ಎಸ್.ಎ ರಾಮದಾಸ್

0

ಮೈಸೂರು: ಭಾರತವು ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಪಾವತಿಗಳ ಬಳಕೆಯನ್ನು ಹೆಚ್ಚಿಸಿಕೊಂಡಿದೆ. ಪ್ರತಿಯೊಬ್ಬ ಬೀದಿ ಬದಿ ವ್ಯಾಪಾರಿಯೂ ಕೂಡ ಬ್ಯಾಂಕ್ ಖಾತೆಗಳನ್ನು ತೆರೆದು ಡಿಜಿಟಲ್ ವ್ಯಾಪಾರವನ್ನು ನಡೆಸುತ್ತಿದ್ದಾರೆ ಎಂದು ಕೃಷ್ಣರಾಜ ಕ್ಷೇತ್ರದ ಶಾಸಕರಾದ ಎಸ್.ಎ ರಾಮ್‌ದಾಸ್  ತಿಳಿಸಿದರು.

ಮೈಸೂರು ಮಹಾನಗರ ಪಾಲಿಕೆ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಬೆಂಗಳೂರು ಹಾಗೂ ಜಿಲ್ಲಾಡಳಿತ ಮೈಸೂರು ಮತ್ತು ಪಟ್ಟಣ ವ್ಯಾಪಾರ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿನ ಕಾಳಿಂಗರಾವ್ ಸಭಾ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ಬೀದಿ-ಬದಿ ವ್ಯಾಪಾರಿಗಳ ಸಂಭ್ರಮಾಚರಣೆ ಹಾಗೂ ಸ್ವ-ನಿಧಿ ಮಹೋತ್ಸವ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸ್ವ-ನಿಧಿ ಮಹೋತ್ಸವವು ಪ್ರತಿಯೊಬ್ಬ ಬೀದಿ-ಬದಿ ವ್ಯಾಪಾರಿಯ ಹಬ್ಬವಾಗಿದೆ. ಕೇಂದ್ರ ಸರ್ಕಾರವು ರಚಿಸಿರುವ ಸೌಲಭ್ಯಗಳನ್ನು ಸಾಮಾನ್ಯರಿಗೆ ಉಪಯೋಗವಾಗುವಂತೆ ಮಾಡಬೇಕು. ಅದಕ್ಕಾಗಿ ಮೈಸೂರು ಮಹಾನಗರ ಪಾಲಿಕೆಯು ಶ್ರಮಿಸಿಸುತ್ತಿದೆ. ಮುಂದಿನ ದಿನಗಳಲ್ಲಿ ಮೈಸೂರಿನಲ್ಲಿರುವ ಪ್ರತಿಯೊಬ್ಬ ಬೀದಿ-ಬದಿ ವ್ಯಾಪಾರಿಗಳಿಗೂ ಕೇಂದ್ರ ಸರ್ಕಾರ ಜಾರಿ ಮಾಡಿರುವ ಪ್ರತಿಯೊಂದು ಯೋಜನೆಗಳನ್ನು ತಲುಪಿಸುವ ಪ್ರಯತ್ನವನ್ನು ಮಾಡುತ್ತೇವೆ ಎಂದರು.

ಕೋವಿಡ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಬೀದಿ-ಬದಿ ವ್ಯಾಪಾರಸ್ಥರು ಜೀವನ ನಡೆಸಲು ಉಪಯೋಗವಾಗುವಂತೆ ಮಾಡುವ ಸಲುವಾಗಿ ಪ್ರಧಾನ ಮಂತ್ರಿ ಸ್ವ-ನಿಧಿ ಯೋಜನೆಯನ್ನು ಜಾರಿಗೆ ತಂದಿದ್ದು, ಪ್ರತಿಯೊಬ್ಬ ವ್ಯಾಪಾರಿಗಳು ಜನ್‌ಧನ್ ಖಾತೆಯನ್ನು ತೆರೆಯುವ ಮೂಲಕ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಉಪಯೋಗವನ್ನು ನೇರವಾಗಿ ಪಡೆದುಕೊಂಡಿದ್ದಾರೆ. ಮೈಸೂರಿನಲ್ಲಿ ಪಿ.ಎಂ ಸ್ವ-ನಿಧಿ ಯೋಜನೆಯಡಿ 17,778 ಅರ್ಜಿಗಳು ಸಲ್ಲಿಕೆಯಾಗಿದ್ದು, 14,744 ಅರ್ಜಿಗಳಿಗೆ ಸಾಲ ಮಂಜೂರಾಗಿದ್ದು,12284 ಅರ್ಜಿಗಳಿಗೆ ವಿವಿಧ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯವನ್ನು ನೀಡಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಆಯುಕ್ತರಾದ ಲಕ್ಷ್ಮೀಕಾಂತ ರೆಡ್ಡಿ, ಉಪ ಮಹಾಪೌರರಾದ ಡಾ ಜಿ ರೂಪ, ನಾಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಶುಭಾ ಬಿ ಹಾಗೂ ಪಟ್ಟಣದ ವ್ಯಾಪಾರ ಸಮಿತಿಯ ಸದಸ್ಯರುಗಳು ಪಾಲ್ಗೊಂಡಿದ್ದರು.