ಮನೆ ಕಾನೂನು ಶಾಸಕ ಗೌರಿಶಂಕರ್ ಆಯ್ಕೆ ಅಸಿಂಧು: ಒಂದು ತಿಂಗಳು ಆದೇಶ ಅಮಾನತಿನಲ್ಲಿರಿಸಿದ ಹೈಕೋರ್ಟ್‌

ಶಾಸಕ ಗೌರಿಶಂಕರ್ ಆಯ್ಕೆ ಅಸಿಂಧು: ಒಂದು ತಿಂಗಳು ಆದೇಶ ಅಮಾನತಿನಲ್ಲಿರಿಸಿದ ಹೈಕೋರ್ಟ್‌

0

ಚುನಾವಣಾ ಅಕ್ರಮದ ಆರೋಪದ ಹಿನ್ನೆಲೆಯಲ್ಲಿ ತುಮಕೂರು ಗ್ರಾಮಾಂತರ ಜೆಡಿಎಸ್‌ ಶಾಸಕ ಗೌರಿಶಂಕರ್‌ ಸ್ವಾಮಿ ಆಯ್ಕೆಯನ್ನು ಅನೂರ್ಜಿತಗೊಳಿಸಿ ಕರ್ನಾಟಕ ಹೈಕೋರ್ಟ್‌ ಗುರುವಾರ ಮಹತ್ವದ ಆದೇಶ ಮಾಡಿದೆ. ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಲು ಅವಕಾಶ ನೀಡಬೇಕು ಎಂಬ ಗೌರಿ ಶಂಕರ್‌ ಅವರ ಮಧ್ಯಂತರ ಮನವಿಯನ್ನು ಇದೇ ಸಂದರ್ಭದಲ್ಲಿ ಪುರಸ್ಕರಿಸಿದ ಹೈಕೋರ್ಟ್‌ ಆದೇಶವನ್ನು ಒಂದು ತಿಂಗಳು ಅಮಾನತಿನಲ್ಲಿರಿಸಿದೆ.

ಬಿಜೆಪಿಯ ಪರಾಜಿತ ಅಭ್ಯರ್ಥಿ ಬಿ ಸುರೇಶ್‌ ಗೌಡ ಸಲ್ಲಿಸಿದ್ದ ಚುನಾವಣಾ ಅರ್ಜಿಯ ವಾದ-ಪ್ರತಿವಾದವನ್ನು ಸುದೀರ್ಘವಾಗಿ ಆಲಿಸಿ ಫೆಬ್ರವರಿ 17ರಂದು ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಎಸ್‌ ಸುನಿಲ್‌ ದತ್‌ ಯಾದವ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಇಂದು ಪ್ರಕಟಿಸಿದ್ದು, ಅರ್ಜಿಯನ್ನು ಭಾಗಶಃ ಮಾನ್ಯ ಮಾಡಿದೆ.

“ಗೌರಿ ಶಂಕರ್‌ ಆಯ್ಕೆಯನ್ನು ಪ್ರಜಾಪ್ರತಿನಿಧಿ ಕಾಯಿದೆಯ ಸೆಕ್ಷನ್‌ 101 (ಡಿ) ಅಡಿ ಅನೂರ್ಜಿತಗೊಳಿಸಲಾಗಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಗೌರಿಶಂಕರ್‌ ಪರ ವಕೀಲ ಹೇಮಂತ್‌ ರಾಜ್‌ ಅವರು “ಕರ್ನಾಟಕ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿರುವುದರಿಂದ ಹೈಕೋರ್ಟ್‌ನ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ. ಪ್ರಜಾಪ್ರತಿನಿಧಿ ಕಾಯಿದೆಯ ಸೆಕ್ಷನ್ 116 (ಬಿ) ‌ಅಡಿ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್‌ಗೆ ಅಧಿಕಾರವಿದೆ” ಎಂದು ಕೋರಿದರು.

ಇದಕ್ಕೆ ಆಕ್ಷೇಪಿಸಿದ ಸುರೇಶ್‌ ಗೌಡ ಪರ ಹಿರಿಯ ವಕೀಲೆ ನಳಿನಾ ಮಾಯೇಗೌಡ ಅವರು “ಅನರ್ಹತೆಯು ತಕ್ಷಣೆಗೆ ಜಾರಿಗೆ ಬರದಿರುವುದರಿಂದ ಗೌರಿ ಶಂಕರ್‌ ಚುನಾವಣೆಯಲ್ಲಿ ಸ್ಪರ್ಧಿಸಲು ಯಾವುದೇ ಸಮಸ್ಯೆಯಾಗುವುದಿಲ್ಲ. ಹೀಗಾಗಿ, ಅವರ ಕೋರಿಕೆಯನ್ನು ಪರಿಗಣಿಸಬಾರದು” ಎಂದು ಮನವಿ ಮಾಡಿದರು.

ವಾದ-ಪ್ರತಿವಾದ ಆಲಿಸಿ ನ್ಯಾಯಾಲಯವು “ರಾಜ್ಯ ವಿಧಾನಸಭೆ ಚುನಾವಣೆ ಘೋಷಣೆಯಾಗಿದ್ದು, ಪ್ರತಿವಾದಿ ಗೌರಿ ಶಂಕರ್‌ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದಾರೆ. ಹೀಗಾಗಿ, ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಉದ್ದೇಶಿಸಿರುವುದರಿಂದ ಆದೇಶವನ್ನು ಅಮಾನತಿನಲ್ಲಿರಿಸಬೇಕು ಎಂದು ಕೋರಿ ಗೌರಿ ಶಂಕರ್‌ ಪರ ವಕೀಲ ಹೇಮಂತ್‌ ರಾಜ್‌ ಅವರು ಸಲ್ಲಿಸಿದ ಮಧ್ಯಂತರ ಅರ್ಜಿಯನ್ನು ಮಾನ್ಯ ಮಾಡಿ, ಆದೇಶವನ್ನು ಒಂದು ತಿಂಗಳು ಅಮಾನತಿನಲ್ಲಿರಿಸಲಾಗಿದೆ” ಎಂದು ನ್ಯಾಯಾಲಯವು ಆದೇಶಿಸಿತು.

ಪ್ರಜಾ ಪ್ರತಿನಿಧಿ ಕಾಯಿದೆ ಸೆಕ್ಷನ್‌ 99 (1)(ಎ) ii ಅಡಿ ಪ್ರಕರಣದಲ್ಲಿ ಇತರೆ ಪ್ರತಿವಾದಿಗಳಾದ ಬಾಲನೇತ್ರಯ್ಯ, ಅರೇಹಳ್ಳಿ ಮಂಜುನಾಥ್‌, ಕೃಷ್ಣೇಗೌಡ, ರೇಣುಕಮ್ಮ, ಸುನಂದಾ ಅವರು ಭ್ರಷ್ಟಾಚಾರ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ಪೀಠವು ಆದೇಶದಲ್ಲಿ ಹೇಳಿದೆ. ಹೈಕೋರ್ಟ್‌ ಆದೇಶ ಅಮಾನತಿನಲ್ಲಿರಿಸಿರುವುದು ಗೌರಿ ಶಂಕರ್‌ ಅವರಿಗೆ ಮಾತ್ರ ಅನ್ವಯಿಸಲಿದೆ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ.

2018ರ ವಿಧಾನಸಭೆ ಚುನಾವಣೆಯಲ್ಲಿ ಗೌರಿ ಶಂಕರ್‌ ಅವರು 32 ಸಾವಿರ ವಯಸ್ಕರು ಮತ್ತು 16 ಸಾವಿರ ಮಕ್ಕಳಿಗೆ ನಕಲಿ ವಿಮಾ ಪಾಲಿಸಿಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿ ಜಯ ಸಾಧಿಸಿದ್ದಾರೆ. ಇದು ಪ್ರಜಾ ಪ್ರತಿನಿಧಿ ಕಾಯಿದೆ ಸೆಕ್ಷನ್‌ 123ರ ಅಡಿ ಅಪರಾಧವಾಗಿದೆ. ಹೀಗಾಗಿ, ಗೌರಿ ಶಂಕರ್‌ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಕೋರಿ ಸುರೇಶ್‌ಗೌಡ ಅವರು 2018ರ ಜುಲೈನಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.