ಮನೆ ರಾಜಕೀಯ ಹುಕ್ಕಾ ಬಾರ್, ಕ್ಯಾಸಿನೋಗಳ ಮೇಲೆ ವಿಶೇಷ ನಿಗಾ: ಆರಗ ಜ್ಞಾನೇಂದ್ರ

ಹುಕ್ಕಾ ಬಾರ್, ಕ್ಯಾಸಿನೋಗಳ ಮೇಲೆ ವಿಶೇಷ ನಿಗಾ: ಆರಗ ಜ್ಞಾನೇಂದ್ರ

0

ಬೆಂಗಳೂರು: ಹುಕ್ಕಾ ಬಾರ್ ಮತ್ತು ಕ್ಯಾಸಿನೋಗಳ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಅವುಗಳ ಕಾರ್ಯನಿರ್ವಹಣೆಗೆ ಅವಕಾಶ ನೀಡುವುದಿಲ್ಲ. ಅವುಗಳ ಮೇಲೆ ವಿಶೇಷ ನಿಗಾ ಇಡಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್‌ ಸದಸ್ಯ ಪಿ.ಆರ್‌. ರಮೇಶ್‌ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಹುಕ್ಕಾಬಾರ್ ಗಳನ್ನು ನಡೆಸಲು ಪೋಲೀಸ್ ಇಲಾಖೆ ವತಿಯಿಂದ ಲೈಸನ್ಸ್ ನೀಡಲಾಗುವುದಿಲ್ಲ, ಆದರೆ ಅವು ಬಿಬಿಎಂಪಿ ಯಿಂದ ಟ್ರೇಡ್ ಲೈಸನ್ಸ್ ಪಡೆದಿರುತ್ತವೆ. ಅಲ್ಲದೇ ಈ ಬಾರ್ ಗಳನ್ನು ನಡೆಸುವವರು ಕೋರ್ಟ್ ನಿಂದ ಕೆಲವು ಆದೇಶ ಗಳನ್ನು ತಂದಿದ್ದಾರೆ.

ಹುಕ್ಕಾಬಾರ್ ಗಳನ್ನು ಸ್ಮೋಕಿಂಗ್ ಜೋನ್ ಎಂದು ಪರಿಗಣಿಸಿ ನ್ಯಾಯಾಲಯ ಆದೇಶ ನೀಡಿದೆ. ಪದೇಪದೇ ಪೋಲೀಸರು ಈ ಸ್ಥಳಗಳಿಗೆ ತೆರಳಿ ತನಿಖೆ ನೆಪದಲ್ಲಿ ತೊಂದರೆ ಕೊಡಬಾರದೆಂದೂ ನ್ಯಾಯಾಲಯವು ಸೂಚಿಸಿದೆ.  ಹಾಗಾಗಿ ಇವುಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತಿಲ್ಲ, ಅದಾಗ್ಯೂ ಸಿಸಿಬಿಯಿಂದ ಕೆಲವು ಹುಕ್ಕಾಬಾರ್ ಗಳ ಮೇಲೆ ದಾಳಿ ನಡೆಸಿ ಅಲ್ಲಿ ಬಳಸುವ ಕೆಲವು ವಸ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಅವುಗಳಲ್ಲಿ ಇರುವ ಕಂಟೆಂಟ್ ಗಳನ್ನು ಪರಿಶೀಲಿಸಲಾಗ್ತಿದೆ.

ಒಂದು ವೇಳೆ ಶಾಲಾ ಮಕ್ಕಳ ಮೇಲೆ ಪರಿಣಾಮ ಬೀರುವ ಅಂಶಗಳು ಇದ್ದರೆ ಖಂಡಿತಾ ಇವುಗಳ ಮೇಲೆ ಮುಂದಿನ ದಿನಗಳಲ್ಲಿ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ. ಸದ್ಯ ಬೆಂಗಳೂರಿನಲ್ಲಿ 68 ಹುಕ್ಕಾ ಬಾರ್‌ ಮತ್ತು 49 ರಿಕ್ರಿಯೇಷನಲ್‌ ಕ್ಲಬ್‌ ಮಾತ್ರ ನಡೆಯುತ್ತಿವೆ. ಆದರೆ ಹುಕ್ಕಾ ಬಾರ್‌ಗಳನ್ನು ನಿಯಂತ್ರಿಸುವ ವಿಚಾರ ಪೊಲೀಸ್‌ ವ್ಯಾಪ್ತಿಗೆ ಬರುವುದಿಲ್ಲ.

ಸದಸ್ಯ ಸಲೀಂ ಆಹಮದ್‌ ಮಾತನಾಡಿ, ”ಹುಕ್ಕಾ ಪಾರ್ಲರ್‌ಗಳಲ್ಲಿ ಗಾಂಜಾ ಮತ್ತಿತರ ಮಾದಕ ದ್ರವ್ಯಗಳ ಸೇವನೆ ನಡೆಯುತ್ತಿದೆ ಎಂಬ ಮಾಹಿತಿ ಇದೆ. ಆ ರೀತಿ ಇದ್ದರೆ ಕಠಿಣ ಕ್ರಮ ಜರುಗಿಸಬೇಕಾಗುತ್ತೆ ಎಂದು ಒತ್ತಾಯಿಸಿದರು.

ಆದಕ್ಕೆ ಪ್ರತಿಕ್ರಿಯಿಸಿದ ಸಚಿವ ಆರಗ ಜ್ಞಾನೇಂದ್ರ, ಹಾಲಿ ಹುಕ್ಕಾ ಪಾರ್ಲರ್‌ಗಳಿಗೆ ನೋ ಸ್ಮೋಕಿಂಗ್‌ ಝೋನ್‌ಗಳೆಂದು ಪರಿಗಣಿಸಿ ಪಾಲಿಕೆ ಅನುಮತಿ ನೀಡಿದೆ. ಆದರೂ ಬೇರೆ ಮಾದಕ ಪದಾರ್ಥಗಳನ್ನು ಸೇರಿಸುತ್ತಿರುವ ಬಗ್ಗೆ ಮಾಹಿತಿ ಇದ್ದು, ಆ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಎಫ್‌ಎಸ್‌ಎಲ್‌ ವರದಿ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದರು.