ಬೆಂಗಳೂರು: ಶಿಸ್ತಿನ ಪಕ್ಷವಾದ ಬಿಜೆಪಿಯಲ್ಲಿ ವರಿಷ್ಠರು ಸೂಕ್ತ ಅಭ್ಯರ್ಥಿಗಳನ್ನು ಆರಿಸಿಯೇ ಪಟ್ಟಿಯನ್ನು ಬಿಡುಗಡೆ ಮಾಡುತ್ತಾರೆ. ಬೇರೆ ಪಕ್ಷಗಳಂತೆ ಇಲ್ಲಿ ಅವ್ಯವಸ್ಥಿತವಾಗಿ ಏನೂ ನಡೆಯುವುದಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಏಪ್ರಿಲ್ 13 ರ ತನಕ ಸಮಯ ಇದೆ. ಚುನಾವಣೆಯಲ್ಲಿ ರಣತಂತ್ರ ಮಾಡಬೇಕಾಗುತ್ತದೆ. ಎಲ್ಲರಿಗಿಂತ ಮೊದಲು ಪಟ್ಟಿ ಬಿಡುಗಡೆ ಮಾಡಿದಾಕ್ಷಣ ಗೆಲ್ಲುತ್ತೇವೆ ಎಂದರ್ಥವಲ್ಲ. ಬಿಜೆಪಿಗೆ ತನ್ನದೇ ಆದ ತಂತ್ರವಿದೆ. ಅಭ್ಯರ್ಥಿಗಳ ನಡುವೆ ಜಗಳ, ಚೇರ್‌ಗಳು ಮುರಿದುಹೋಗುವಂತಹ ಘಟನೆಗಳು ಬೇರೆ ಪಕ್ಷಗಳಲ್ಲಿ ನಡೆಯುತ್ತಿದೆ. ಶಿಸ್ತಿನ ಪಕ್ಷವಾದ ಬಿಜೆಪಿಯಲ್ಲಿ ಎಲ್ಲವೂ ಶಿಸ್ತುಬದ್ಧವಾಗಿ ನಡೆಯುತ್ತದೆ ಎಂದರು.
ಕಾಂಗ್ರೆಸ್ ನಲ್ಲಿ ಯಾರೋ ಪ್ರಣಾಳಿಕೆಯನ್ನು ಬರೆದುಕೊಟ್ಟು, ಅದನ್ನು ಒಂದನೇ ಗ್ಯಾರಂಟಿ, ಎರಡನೇ ಗ್ಯಾರಂಟಿ ಎಂದು ಓದುತ್ತಾ ಹೋದರು. ಬಿಜೆಪಿ ಈ ರೀತಿ ಮಾಡಿಲ್ಲ. ಪ್ರಣಾಳಿಕೆ ರೂಪಿಸಲು ಬಿಜೆಪಿ ಜನರ ಮುಂದೆ ಹೋಗಿದೆ. ರೈತರು, ಸಣ್ಣ ಕೈಗಾರಿಕಾ ಉದ್ಯಮಿಗಳು, ಕಾರ್ಮಿಕರು ಮೊದಲಾದ ವರ್ಗದ ಜನರ ಕಷ್ಟಗಳನ್ನು ಆಲಿಸಿ, ಅದಕ್ಕೆ ಪೂರಕವಾಗಿ ಪ್ರಣಾಳಿಕೆ ರಚಿಸಲಾಗುತ್ತಿದೆ. ಬಿಜೆಪಿಗೂ ಕಾಂಗ್ರೆಸ್ ಗೂ ಅಜಗಜಾಂತರ ವ್ಯತ್ಯಾಸವಿದೆ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಚುನಾವಣೆಯಲ್ಲಿ ಎಂದೂ ಸೋತಿಲ್ಲ. ಅವರು ಎಲ್ಲಿ ನಿಂತರೂ ಗೆಲ್ಲುತ್ತಾರೆ. ಶಿಗ್ಗಾಂವದಲ್ಲಿ ಪೂರಕವಾದ ವಾತಾವರಣ ಇದೆಯೇ, ಇಲ್ಲವೇ ಎಂದು ಯಾರೂ ಹೇಳಿಲ್ಲ. ಶಿಗ್ಗಾಂವದಲ್ಲಿ ಸ್ಪರ್ಧಿಸಿದರೆ ಅತಿ ಹೆಚ್ಚು ಮತಗಳು ಬೊಮ್ಮಾಯಿಯವರಿಗೆ ದೊರೆಯುತ್ತದೆ. ಬೊಮ್ಮಾಯಿಯವರ ವಿರುದ್ಧ ನಿಂತುಕೊಂಡರೆ, ವಿನಯ್ ಕುಲಕರ್ಣಿಯವರು ದೊಡ್ಡ ಅಂತರದಲ್ಲೇ ಸೋಲುತ್ತಾರೆ ಎಂದರು.
ಕಾಂಗ್ರೆಸ್ ನಾಯಕ ಸಿದ್ದರಾಮಯ್ಯನವರು ವರುಣಾದಲ್ಲಿ ಸ್ಪರ್ಧಿಸಲು ತೀರ್ಮಾನಿಸಿದ್ದಾರೆ. ಅವರು ಕೋಲಾರದಲ್ಲಿ ಸ್ಪರ್ಧಿಸುತ್ತಾರೆ ಎಂದು ಕಾಂಗ್ರೆಸ್ ಹೈಕಮಾಂಡ್ ಪಟ್ಟಿಯೇನೂ ಬಿಡುಗಡೆ ಮಾಡಿಲ್ಲ. ಎರಡನೇ ಪಟ್ಟಿ ಬಿಡುಗಡೆ ಮಾಡಲು ಬಹಳ ತಡವಾಗುತ್ತಿದೆ ಎಂದರು.
ಬಿಜೆಪಿಯೇ ಮತ್ತೆ ಅಧಿಕಾರಕ್ಕೆ
ಈ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಸರ್ಕಾರವೇ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್‌ನಲ್ಲಿ ಯಾವುದೇ ಚಟುವಟಿಕೆ ನಡೆಯುತ್ತಿಲ್ಲ. ಬಿಜೆಪಿಯ ಕಾರ್ಯಕರ್ತರು ಬಹಳ ಉತ್ಸಾಹದಲ್ಲಿದ್ದಾರೆ. ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಯಾವಾಗಲೂ ಆಡಳಿತ ವಿರೋಧಿ ಅಲೆ ಇರುತ್ತದೆ. ಆದರೆ ಈ ಬಾರಿ ಅದನ್ನು ಮೀರಿ ಪಕ್ಷಕ್ಕೆ ಬೆಂಬಲ ದೊರೆಯಲಿದೆ ಎಂದರು.