ಬೆಂಗಳೂರು : ಪ್ರಸಕ್ತ ಸಾಲಿನ ‘ಸಹಕಾರ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭ ಮಾ.20ರಂದು ನಡೆಯಲಿದೆ. ಡಾ. ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ ಸಹಕಾರ ರತ್ನ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ ಎಂದು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ತಿಳಿಸಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಬ್ಬರಿಗೆ ಪ್ರಶಸ್ತಿ ನೀಡುತ್ತೇವೆ. ಒಟ್ಟು 100 ಅರ್ಜಿಗಳು ಬಂದಿವೆ. ಸಿಎಂ ಬಸವರಾಜ್ ಬೊಮ್ಮಾಯಿಯವರು ಆಯ್ಕೆಯನ್ನು ನೀವೇ ಮಾಡಿ ಎಂದಿದ್ದಾರೆ.ಕೆಲ ಡಿಸಿಸಿ ಬ್ಯಾಂಕ್ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವವರ ಜತೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರನ್ನು ನಾವೇ ಹುಡುಕಿದ್ದೇವೆ. ಇದರ ಜತೆ ಸ್ತ್ರೀಶಕ್ತಿ ಸಂಘಗಳಿಗೆ 20 ಕೋಟಿ ಸಹಾಯಧನ ನೀಡುತ್ತೇವೆ.
ನಟ ಪುನಿತ್ ರಾಜ್ ಕುಮಾರ್ ನಮ್ಮ ಉತ್ಪನ್ನ ರಾಯಭಾರಿ ಆಗಿದ್ದರು. ಅವರಿಗೆ ಮರಣೋತ್ತರ ಸಹಕಾರ ರತ್ನ ಪ್ರಶಸ್ತಿ ಪ್ರದಾನ ಮಾಡುತ್ತೇವೆ. ಪುರಸ್ಕೃತರ ಪಟ್ಟಿ ಸಂಜೆ ಅಂತಿಮವಾಗಲಿದೆ ಎಂದು ಸಚಿವ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.
ಪ್ರತಿ ವರ್ಷ ಆರು ಮಂದಿಗೆ ಪ್ರಶಸ್ತಿ ನೀಡುತ್ತಿದ್ದೆವು. ಆದರೆ, ಕಳೆದ ವರ್ಷ ಜಿಲ್ಲೆಗೆ ಒಬ್ಬರು ಅಂತಾ ನಿರ್ಧರಿಸಿದ್ದೇವೆ. 40 ರಿಂದ 50 ಮಂದಿಗೆ ಪ್ರಶಸ್ತಿ ಕೊಡುತ್ತೇವೆ. 15 ಗ್ರಾಂ ಚಿನ್ನದ ಪದಕ, ಪ್ರಮಾಣಪತ್ರ ನೀಡಿ ಗೌರವಿಸುತ್ತೇವೆ. ನಾನು, ಜಿ.ಟಿ. ದೇವೇಗೌಡ ಸೇರಿದಂತೆ ಐವರ ಸಮಿತಿ ಆಯ್ಕೆ ಮಂಡಳಿಯಲ್ಲಿದೆ. ಬೆಂಗಳೂರಿನ ಕೆಂಗೇರಿ ಉಪನಗರದ ಗಣೇಶ ಮೈದಾನದಲ್ಲಿ ಮಾ.20 ರಂದು ಬೆಳಗ್ಗೆ 11 ಗಂಟೆಗೆ ಸಮಾರಂಭ ಹಮ್ಮಿಕೊಂಡಿದ್ದು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಮಾರಂಭ ಉದ್ಘಾಟಿಸಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದರು.














