ಮನೆ ರಾಜಕೀಯ ಬಿಜೆಪಿಯಲ್ಲಿ ಎಲ್ಲಾ ಕಾರ್ಯಕರ್ತರಿಗೂ ಒಂದೇ ಗೌರವ, ಒಂದೇ ಸ್ಥಾನಮಾನ: ಡಾ.ಕೆ.ಸುಧಾಕರ್‌

ಬಿಜೆಪಿಯಲ್ಲಿ ಎಲ್ಲಾ ಕಾರ್ಯಕರ್ತರಿಗೂ ಒಂದೇ ಗೌರವ, ಒಂದೇ ಸ್ಥಾನಮಾನ: ಡಾ.ಕೆ.ಸುಧಾಕರ್‌

0

ದೊಡ್ಡಬಳ್ಳಾಪುರ: ಭಾರತೀಯ ಜನತಾ ಪಕ್ಷದಲ್ಲಿ ರಾಷ್ಟ್ರವಾದವೇ ನಮ್ಮ ಪಕ್ಷದ ಸಿದ್ಧಾಂತ ಸಿದ್ಧಾಂತ. ದೇಶ ಮೊದಲು, ನಂತರ ಪಕ್ಷ, ಕೊನೆಯಲ್ಲಿ ನಾನು ಎಂಬುದು ಬಿಜೆಪಿ ಸಂಸ್ಕೃತಿ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಹೇಳಿದ್ದಾರೆ.

Join Our Whatsapp Group

ದೊಡ್ಡಬಳ್ಳಾಪುರ ಬಿಜೆಪಿ ಕಚೇರಿಯಲ್ಲಿ ಹಲವು ಮುಖಂಡರ ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ಅವರು, ಇಡೀ ವಿಶ್ವದಲ್ಲಿ ದೇಶವನ್ನು ಸಮರ್ಥವಾಗಿ ಬೆಳೆಸುವ ಪಾಲು ನಮ್ಮೆಲ್ಲಾ ನಾಗರೀಕರಿಗೂ ಇದೆ. ಇದಕ್ಕೆ ಪೂರಕವಾಗಿ ಬಿಜೆಪಿ ಕೆಲಸ ಮಾಡುತ್ತಿದೆ. ದೇಶದ ಏಳ್ಗೆ ಮೊದಲ ಆದ್ಯತೆ ಯಾಗಿದೆ. ಪಕ್ಷದ ಏಳ್ಗೆಯಲ್ಲಿ ನಮ್ಮ ಪಾಲು ಇರಬೇಕು. ಅಂತಿಮವಾಗಿ ನಾನು ಅನ್ನುವುದು ಇರಬೇಕು ಎಂದು ಹೇಳಿದರು.

ದೊಡ್ಡಬಳ್ಳಾಪುರದಲ್ಲಿ  ಬಮುಲ್‌ ಹಾಗೂ ಕೆಎಂಎಫ್‌ ನಿರ್ದೇಶಕರಾಗಿರುವ ಬಿ.ಸಿ. ಆನಂದ್‌,  ಕಾಂಗ್ರೆಸ್‌ ಪಕ್ಷವನ್ನು ದೊಡ್ಡಬಳ್ಳಾಪುರದಲ್ಲಿ ಹಂತಹಂತವಾಗಿ ಕಟ್ಟಿದ ರಂಗರಾಜು, ನಗರಸಭಾ ಸದಸ್ಯರಾಗಿರುವ ಎಂಜಿ ಶ್ರೀನಿವಾಸ್‌, ಹಿರಿಯ ನಾಯಕ ಕೆಂಪಣ್ಣ, ಪ್ರಕಾಶ್‌ ಮಧುರೆ, ಕೆ.ವಿ ಪ್ರಕಾಶ್‌ ಸೇರಿದಂತೆ ಹಲವು ನಾಯಕರು ಬಿಜೆಪಿ ಪಕ್ಷ ಸೇರ್ಪಡೆಯಾದರು.  ಬಿಜೆಪಿ ಸಂಸ್ಥಾಪನಾ ದಿನದಂದೇ ಪಕ್ಷಕ್ಕೆ ಸೇರ್ಪಡೆಯಾದ ನಾಯಕರನ್ನು ಸ್ವಾಗತಿಸಿ, ಇದೊಂದು ಐತಿಹಾಸಿಕ ದಿನವೆಂದು ಬಣ್ಣಿಸಿದರು.

ದೊಡ್ಡಬಳ್ಳಾಪುರದಲ್ಲಿ ಇಂದಿನಿಂದ ಬದಲಾವಣೆಯ ಗಾಳಿ ಬೀಸುತ್ತಿದೆ. ಈ ಬಾರೀ ಕೇವಲ ದೊಡ್ಡಬಳ್ಳಾಪುರದಲ್ಲಿ ಮಾತ್ರವಲ್ಲ, ಬೆಂಗಳೂರು ಗ್ರಾಮಾಂತರದಲ್ಲೇ ಬಿಜೆಪಿ ಐತಿಹಾಸಿಕ ಸಾಧನೆ ಮಾಡಲಿದೆ.  ಬಿಜೆಪಿಯಲ್ಲಿ ಕೇವಲ ತತ್ವ ಸಿದ್ಧಾಂತಕ್ಕೆ ಮಾತ್ರ ಬೆಲೆಯಿದೆ. ಇಲ್ಲಿ ನಾನು ಅನ್ನುವುದು ಕೊನೆಯಲ್ಲಿ ಬರುತ್ತದೆ. ಒಂದು ಬಾರಿ ಪಕ್ಷಕ್ಕೆ ಬಂದಮೇಲೆ ನಮ್ಮಲ್ಲಿ ಹೊಸತು ಹಳೆಯದು ಅನ್ನುವುದು ಇಲ್ಲ. ಯಾರು ಬದ್ಧತೆ, ಕ್ರಿಯಾಶೀಲತೆ, ಪಕ್ಷ ಸಂಘಟನೆ ತೊಡಗಿಕೊಳ್ಳುತ್ತಾರೋ ಪಕ್ಷ ಅಂತಹವರನ್ನು ಎಂದೂ ಕೈ ಬಿಡುವುದಿಲ್ಲ ಎಂದರು.

ಕಾಂಗ್ರೆಸ್‌ ಸೇರಿದಂತೆ ಎಲ್ಲಾ ಪಕ್ಷಗಳನ್ನು ಜನರು ತಿರಸ್ಕಾರ ಮಾಡಿದ್ದಾರೆ  ಬಿಜೆಪಿ ಪ್ರತಿಯೊಬ್ಬ ಭಾರತೀಯನ ವಿಶ್ವಾಸಕ್ಕೆ ಪಾತ್ರವಾಗಿರುವ ಪಕ್ಷವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ವಿಶ್ವದಲ್ಲೇ ಶ್ರೇಷ್ಠ ನಾಯಕ ಅನ್ನುವುದನ್ನು ಹಲವು ಸರ್ವೇಗಳು ಪದೇ ಪದೇ ಸಾಬೀತು ಮಾಡಿವೆ. ಇಂತಹವರ ನಾಯಕತ್ವ ಪ್ರತಿಯೊಬ್ಬ ಕಾರ್ಯಕರ್ತನಿಗೂ ಆತ್ಮವಿಶ್ವಾಸ ತುಂಬಿದೆ. ಹೀಗಾಗಿ ಪಕ್ಷ ಈ ಬಾರಿ ದೊಡ್ಡಬಳ್ಳಾಪುರ ಸೇರಿದಂತೆ ರಾಜ್ಯದೆಲ್ಲೆಡೆ ದಿಗ್ವಿಜಯ ಸಾಧಿಸಲಿದೆ ಎಂದರು.

ಸೋಲಿನ ಭಯಕ್ಕೆ ಕಾರಣ ಹುಡುಕುತ್ತಿದ್ದಾರೆ

ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಸುರ್ಜೇವಾಲಾ,  ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತುರ್ತು ಸುದ್ದಿಗೋಷ್ಠಿ ಕರೆದು ಸಾವಿರಾರು ಜನ, ಐಟಿ, ಇಡಿ, ಸಿಬಿಐ ಅಧಿಕಾರಿಗಳು ರಾಜ್ಯಕ್ಕೆ ಬಂದಿದ್ದಾರೆ.  ಕಾಂಗ್ರೆಸ್‌ ಮುಖಂಡರು, ಅಭ್ಯರ್ಥಿಗಳು, ಸ್ನೇಹಿತರ ಮೇಲೆ ದಾಳಿ ಮಾಡ್ತಾರೆ ಅಂತ  ಸುದ್ದಿ ಹಬ್ಬಿಸಿದ್ದಾರೆ. ಆದರೆ ಕಳೆದ ಒಂದೂವರೆ ವರ್ಷಗಳಿಂದ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ವಿರುದ್ಧ ನಿರಂತರ ಸುಳ್ಳಿನ ಕಂತೆಯನ್ನು  ಹಬ್ಬುತ್ತಿರುವ ಇವರು ಯಾಕೆ ಈ ದಾಳಿಗೆ ಹೆದರುತ್ತಿದ್ದಾರೆ. ಸತ್ಯ ಹರಿಶ್ಚಂದ್ರರಂತೆ ಮಾತನಾಡುವ ಇವರಿಗೆ ಈ ದಾಳಿ ಬಗ್ಗೆ ಯಾಕೆ ಹೆದರಿಕೆ ಅನ್ನುವುದೇ ಅರ್ಥವಾಗುತ್ತಿಲ್ಲ ಎಂದರು.

ಕಾಂಗ್ರೆಸ್‌ ಗೆ ಯಾವುದೇ ಒಂದು ಸ್ವಾಯತ್ತ ಸಂಸ್ಥೆಗಳ ಬಗ್ಗೆ ಗೌರವ ಇಲ್ಲ. ಚುನಾವಣೆ ಸೋತರೆ ಇವಿಎಂ ಸರಿಯಿಲ್ಲ.  ಚುನಾವಣಾ ಆಯುಕ್ತರ ಬಗ್ಗೆ ನಂಬಿಕೆ ಇಲ್ಲ, ಎಲೆಕ್ಷನ್‌ ಕಮಿಷನ್‌ ಮೇಲೆ ವಿ‌ಶ್ವಾಸವಿಲ್ಲ. ಕೋರ್ಟ್‌ ಅವರ ವಿರುದ್ಧ ತೀರ್ಪು ನೀಡಿದರೆ ಅದಕ್ಕೇ ಧಿಕ್ಕಾರ ಹಾಕುವ ಪಕ್ಷ ಅದು.  ಸಿಬಿಐ ಯಾರ ಕಾಲದಲ್ಲಿ ಚೋರ್‌ ಬಚಾವೋ ಇನ್ಸಿಟಿಟ್ಯೂಟ್‌ ಆಗಿತ್ತು, ‘ಪಂಜರದ ಹಕ್ಕಿ’ ಆಗಿತ್ತು ಅನ್ನುವುದು ದೇಶದ ಜನಕ್ಕೆ ಗೊತ್ತಿದೆ. ಮಾಧ್ಯಮ ಸ್ನೇಹಿತರನ್ನೂ ಬಿಡದ ಅವರು,  ಯುಪಿಎ ಸರ್ಕಾರ ಇದ್ದಾಗ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಬೇಕಾದವರನ್ನು ಮೆಂಬರ್‌ ಮಾಡಿ, ಬೇಕಾದ ಸ್ನೇಹಿತರಿಗೆ ಬೇಕಾಬಿಟ್ಟಿ ಲಕ್ಷಾಂತರ ಕೋಟಿ ರೂಪಾಯಿ ಸಾಲ ಕೊಟ್ಟು ಎನ್ ಪಿ ಎ ಹಗರಣ ಮಾಡಿದೆ. ಇದರ ಜೊತೆಗೆ ಕಲ್ಲಿದ್ದಲು ಗಣಿ ಹಗರಣ, 2ಜಿ ಭ್ರಷ್ಟಾಚಾರ ನಡೆದಿದ್ದು ಅವರ ಕಾಲದಲ್ಲೇ.  ಸತ್ಯ ಹರಿಶ್ಚಂದ್ರರಂತೆ ಮಾತನಾಡುತ್ತಿರುವ ಅವರು ಯಾವ ನೈತಿಕತೆಯ ಮೇಲೆ ಬಿಜೆಪಿ ವಿರುದ್ಧ ಆರೋಪ ಮಾಡ್ತಿದ್ದಾರೆ ಎಂದು ಪ್ರಶ್ನಿಸಿದರು.

ಬಿಜೆಪಿಗೆ ಬಹುಮತ

ಸಿನಿಮಾ ನಟ ಕಿಚ್ಚ ಸುದೀಪ್‌ ಬಿಜೆಪಿ ಪರ ಪ್ರಚಾರ ಮಾಡುವುದು ಕಾಂಗ್ರೆಸ್‌ಗೆ ಅರಗಿಸಿಕೊಳ್ಳಲಾಗದ ಸತ್ಯವಾಗಿದೆ. ಈ ಹಿಂದೆ ಕಾಂಗ್ರೆಸ್‌ ಇಬ್ಬರು ನಟಿಯರನ್ನು ಮಂತ್ರಿಯನ್ನಾಗಿ ಮಾಡಿತ್ತು. ಹಾಗಾದರೆ ಅವರ ಮುಖದಲ್ಲೇ ಕಾಂಗ್ರೆಸ್‌ ಚುನಾವಣೆ ಎದುರಿಸಿತ್ತಾ? ಭಾರತದಲ್ಲಿ ಯಾರು ಯಾವ ಪಕ್ಷಕ್ಕೆ ಬೇಕಾದರೂ ಬೆಂಬಲ ನೀಡಬಹುದು. ಅದು ಅವರವರ ವೈಯಕ್ತಿಕ ತೀರ್ಮಾನಕ್ಕೆ ಬಿಟ್ಟಿದ್ದು ಎಂದು ಹೇಳಿದರು.

ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದ ಜನ ಬಿಜೆಪಿ ಹಾಗೂ ಪಿಎಂ ಮೋದಿ ನಾಯಕತ್ವಕ್ಕೆ ಬೆಂಬಲ ಕೊಡಲಿದ್ದಾರೆ. ಕನ್ನಡ ನಾಡಿನ ಜನ ಸಮ್ಮಿಶ್ರ ಸರ್ಕಾರಕ್ಕೆ ಅವಕಾಶ ಕೊಡಲ್ಲ. ಅಭಿವೃದ್ಧಿಗಳ ಬಗ್ಗೆ ಜನರಿಗೆ ಅರ್ಥವಾಗಿದೆ. ಸ್ಪಷ್ಟ ಬಹುಮತ ಸಿಗುವುದು ಖಚಿತ ಎಂದರು.