ಮನೆ ರಾಜಕೀಯ ಟಿಕೆಟ್ ಕೈ ತಪ್ಪಿದ್ದಕ್ಕೆ ಜಿ.ರಘು ಆಚಾರ್  ಬಂಡಾಯ: ಕಾಂಗ್ರೆಸ್ ನಾಯಕರ ಮನವೊಲಿಕೆ ಯತ್ನ ವಿಫಲ

ಟಿಕೆಟ್ ಕೈ ತಪ್ಪಿದ್ದಕ್ಕೆ ಜಿ.ರಘು ಆಚಾರ್  ಬಂಡಾಯ: ಕಾಂಗ್ರೆಸ್ ನಾಯಕರ ಮನವೊಲಿಕೆ ಯತ್ನ ವಿಫಲ

0

ಚಿತ್ರದುರ್ಗ: ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದರಿಂದ ಕೈ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಬಂಡಾಯ ಎದ್ದಿರುವ ವಿಧಾನಪರಿಷತ್ ಮಾಜಿ ಸದಸ್ಯ ಜಿ.ರಘು ಆಚಾರ್ ಮನವೊಲಿಕೆ ಯತ್ನ ಶುಕ್ರವಾರ ವಿಫಲಗೊಂಡಿತು.

Join Our Whatsapp Group

ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ.ವೀರೇಂದ್ರ ಹಾಗೂ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್ ಪೀರ್ ನೇತೃತ್ವದ ನಿಯೋಗ ಶುಕ್ರವಾರ ಬೆಳಿಗ್ಗೆ ರಘು ಆಚಾರ್ ಮನೆಗೆ ಧಾವಿಸಿ ಅರ್ಧ ಗಂಟೆಗೂ ಹೆಚ್ಚು ಹೊತ್ತು ಮಾತುಕತೆ ನಡೆಸಿತು.

ಮನವೊಲಿಕೆ ಯತ್ನ ವಿಫಲಗೊಂಡಿದ್ದರಿಂದ ಕಾಂಗ್ರೆಸ್ ನಿಯೋಗ ನಿರಾಸೆಯಿಂದ ಹಿಂದಿರುಗಿತು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜಿ.ರಘು ಆಚಾರ್, ಕಾಂಗ್ರೆಸ್ ಟಿಕೆಟ್ ಸಿಗುವ ನಿರೀಕ್ಷೆ ಹುಸಿಯಾಗಿದೆ. ಆದರೂ ಚುನಾವಣೆಗೆ ಸ್ಪರ್ಧಿಸುವುದಾಗಿ ಗುರುವಾರವೇ ಘೋಷಣೆ ಮಾಡಿದ್ದೇನೆ. ಈ ನಿರ್ಧಾರ ಬದಲಿಸಲು ಸಾಧ್ಯವಿಲ್ಲ. ಏ.17ರಂದು ನಾಮಪತ್ರ ಸಲ್ಲಿಕೆಯನ್ನು ತಪ್ಪಿಸಲು ಯಾರಿಂದಲೂ ಆಗುವುದಿಲ್ಲ. ವೀರೇಂದ್ರ ಅವರು ತಡವಾಗಿ ಮನೆಗೆ ಬಂದಿದ್ದಾರೆ. ಅವರಿಗೆ ಒಳಿತಾಗಲಿ ಎಂದರು.

ಪಕ್ಕದಲ್ಲೇ ಇದ್ದ ವೀರೇಂದ್ರ ಹಾಗೂ ತಾಜ್ ಪೀರ್ ಮೌನವಾಗಿದ್ದರು. ರಘು ಆಚಾರ್ ಪ್ರತಿಕ್ರಿಯೆ ಕಂಡು ಮನೆಯ ಅಂಗಳದಿಂದ ಹೊರನಡೆದರು.

ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ.ವೀರೇಂದ್ರ ಮಾತನಾಡಿ, ನಾನು ಹಾಗೂ ರಘು ಆಚಾರ್ ಸ್ನೇಹಿತರು. ಸೌಹಾರ್ದ ಭೇಟಿಗೆ ಇಲ್ಲಿಗೆ ಬಂದಿದ್ದೆ. ಅವರು ರಾಜ್ಯ ನಾಯಕರಾಗಿದ್ದು, ಅವರೊಂದಿಗೆ ಸಂಧಾನ ಮಾಡಲು ನನಗೆ ಸಾಧ್ಯವಿಲ್ಲ. ಚುನಾವಣೆಯಲ್ಲಿ ನಾನು ಹೇಗೆ ಮುಂದುವರಿಯಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಸಲಹೆ ಸೂಚನೆ ಪಡೆದಿದ್ದೇನೆ. ಇಷ್ಟಕ್ಕೂ ಚುನಾವಣೆಯಲ್ಲಿ ಸ್ಪರ್ಧಿಸುವುದು ಅವರ ವೈಯಕ್ತಿಕ ನಿರ್ಧಾರ. ಟಿಕೆಟ್ ಆಕಾಂಕ್ಷಿ ಆಗಿದ್ದ ಎಸ್.ಕೆ.ಬಸವರಾಜನ್ ಮನೆಗೂ ಭೇಟಿ ನೀಡಿ ಮಾತುಕತೆ ನಡೆಸಲಿದ್ದೇನೆ ಎಂದು ಸುದ್ದಿಗಾರರಿಗೆ ತಿಳಿಸಿದರು.