ಮನೆ ರಾಜಕೀಯ 2008ರಲ್ಲೇ ನಂದಿನಿಯ ಕತ್ತು ಹಿಸುಕುವ ಕರಾಳ ಪ್ರಯತ್ನ ನಡೆದಿತ್ತು: ಹೆಚ್.ಡಿ.ಕುಮಾರಸ್ವಾಮಿ

2008ರಲ್ಲೇ ನಂದಿನಿಯ ಕತ್ತು ಹಿಸುಕುವ ಕರಾಳ ಪ್ರಯತ್ನ ನಡೆದಿತ್ತು: ಹೆಚ್.ಡಿ.ಕುಮಾರಸ್ವಾಮಿ

0
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗಲೇ ಕೆಎಂಎಫ್ ಅನ್ನು ಮುಗಿಸಲು ಸುಪಾರಿ ಕೊಡಲಾಗಿತ್ತು. ಅಂದರೆ 2008ರಲ್ಲೇ ಕನ್ನಡಿಗರ ಮೇಲೆ ಅಮುಲ್ ಅನ್ನು ಹೇರಿ, ನಂದಿನಿಯ ಕತ್ತು ಹಿಸುಕುವ ಕರಾಳ ಪ್ರಯತ್ನ ನಡೆದಿತ್ತು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ. 

Join Our Whatsapp Group

ಈ ಕುರಿತು 'ಬಿಜೆಪಿಯ ವರಸೆ' ಎಂಬ ಹ್ಯಾಶ್‌ ಟ್ಯಾಗ್ ಬಳಸಿ ಸರಣಿ ಟ್ವೀಟ್ ಮಾಡಿರುವ ಅವರು, ಸ್ವಯಂ ಘೋಷಿತ ದೇಶೋದ್ಧಾರಕ ಪಕ್ಷ ಬಿಜೆಪಿಯ ರಾಜಕಾರಣವೇ ಅನುಮಾನಾಸ್ಪದ. ಒಂದೆಡೆ ಉದ್ಧರಿಸುವ ಮಾತು, ಇನ್ನೊಂದೆಡೆ ಕತ್ತರಿಸುವ ಕೆಲಸ. ಮಾತು ಒಂದು, ಕೃತಿ ಇನ್ನೊಂದು!! ಇದು ಬಿಜೆಪಿಯ (ಭರ)ವರಸೆ!! ಎಂದು ವಾಗ್ದಾಳಿ ನಡೆಸಿದ್ದಾರೆ. 
ಅಂದು ಅಮುಲ್‌ ಘಟಕದ ಬಗ್ಗೆ ಜಾತ್ಯತೀತ ಜನತಾ ದಳ ಪಕ್ಷವು ಭಾರೀ ವಿರೋಧ ವ್ಯಕ್ತಪಡಿಸಿತ್ತು. ಕೆಎಂಎಫ್ʼನ ಅಂದಿನ ಅಧ್ಯಕ್ಷರಾಗಿದ್ದ ಎಚ್.ಡಿ. ರೇವಣ್ಣ ಅವರು, "ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಅಮುಲ್ ಹಾಲು ಮಾರಾಟಕ್ಕೆ ಅವಕಾಶ ಕೊಡುವುದಿಲ್ಲ" ಎಂದು ಕಡ್ಡಿತುಂಡು ಮಾಡಿದಂತೆ ಹೇಳಿದ್ದರು ಎಂದು 'ಬೆಂಗಳೂರು ಮಿರರ್' ವರದಿಯೊಂದಿಗೆ ಟ್ವೀಟ್‌’ನಲ್ಲಿ ಉಲ್ಲೇಖ ಮಾಡಿದ್ದಾರೆ.
ಅಂದು ಬಿಜೆಪಿಗರು ಮೋದಿ ಅವರನ್ನು ಮೆಚ್ಚಿಸಲು ಅಮುಲ್ ಪರ ವಕಾಲತ್ತು ವಹಿಸಿ,ನಂದಿನಿಯನ್ನು ಮುಗಿಸಲು ಹೊರಟಿದ್ದರು. ಅಂದಿನ ಮುಖ್ಯಮಂತ್ರಿಗಳೂ ಸೇರಿ ಬಿಜೆಪಿ ಮುಂಚೂಣಿ ನಾಯಕರು ಅಮುಲ್ ಪರ ಬ್ಯಾಟ್ ಬೀಸಿದ್ದರು. ಈಗ ಪಾತ್ರಗಳು ಬದಲಾಗಿವೆ. ಸಿ.ಟಿ. ರವಿ, ಡಾ.ಕೆ.ಸುಧಾಕರ್‌, ಡಾ.ಸಿ.ಎನ್. ಅಶ್ವತ್ಥನಾರಾಯಣ ಇತರರು ರಂಗದ ಮೇಲಿದ್ದಾರಷ್ಟೇ ಎಂದು ಹೇಳಿದರು. ಕರ್ನಾಟಕವನ್ನು ಗುಜರಾತಿನ ವಸಾಹತು ಮಾಡುವ ಬಿಜೆಪಿಯ ಹುನ್ನಾರ ಇಂದು ನಿನ್ನೆಯದಲ್ಲ. ವೈಬ್ರೆಂಟ್ ಗುಜರಾತಿನ ಮಹತ್ವಾಕಾಂಕ್ಷೆಯ ಹಿಂದೆಯೇ ಕರ್ನಾಟಕವನ್ನು ಕೆಳಕ್ಕೆ ಕೆಡಹುವ ಬಿಜೆಪಿಯ ಧೂರ್ತ ಅಜೆಂಡಾ ಈ ಚುನಾವಣೆ ಹೊತ್ತಿನಲ್ಲಿ ಬಟಾ ಬಯಲಾಗಿದೆ. 15 ವರ್ಷಗಳ ಹಳೆಯ ಸಂಚಿಗೆ ಮತ್ತೆ ಜೀವ ನೀಡಲಾಗಿದೆ ಎಂದು ಆರೋಪಿಸಿದರು. 
ಕರ್ನಾಟಕದ ಬ್ಯಾಂಕುಗಳು ಹೋದವು, ಭದ್ರಾವತಿಯ ವಿಎಸ್ ಎನ್ ಎಲ್ ಇನ್ನೇನು ಯಾರೋ ಗುಜರಾತಿ ಉದ್ದಿಮೆದಾರನ ಪಾಲಾಗುವ ಹಂತದಲ್ಲಿದೆ. ಈಗ ನಂದಿನಿ... ಲಾಭದಾಯಕವಾಗಿರುವ ರಾಜ್ಯದ ಒಂದೊಂದೇ ಉದ್ಯಮವನ್ನು ಮುಗಿಸಲು ಬಿಜೆಪಿ ಹೊಂಚು ಹಾಕಿರುವುದು ಸ್ಪಷ್ಟ ಎಂದು ಹೇಳಿದ್ದಾರೆ. 
ಕೈಗಾರಿಕೆ, ಐಟಿಬಿಟಿ, ವಿಜ್ಞಾನ, ಆವಿಷ್ಕಾರ, ಉದ್ಯೋಗ ಸೃಷ್ಟಿ ಸೇರಿ ಜಿಎಸ್ ಟಿ ಕಟ್ಟುವುದರಲ್ಲಿಯೂ ಮುಂಚೂಣಿಯಲ್ಲಿರುವ ಕರ್ನಾಟಕವು, ಭಾರತವೇ ಹೆಮ್ಮೆಪಡುವ ರಾಜ್ಯ. ಇಂಥ ರಾಜ್ಯವನ್ನು ಆರ್ಥಿಕವಾಗಿ ದಿವಾಳಿಯೆಬ್ಬಿಸಿ ಶಾಶ್ವತವಾಗಿ ದಿಲ್ಲಿಯ ಮುಂದೆ ಭಿಕ್ಷಾಪಾತ್ರೆ ಹಿಡಿದು ನಿಲ್ಲುವಂತೆ ಮಾಡುವುದೇ ಬಿಜೆಪಿಯ ಕುಟಿಲ ನೀತಿ ಎಂದು ವಾಗ್ದಾಳಿ ನಡೆಸಿದ್ದಾರೆ. 
ಉತ್ತರಕ್ಕೆ ಬೆಣ್ಣೆ, ದಕ್ಷಿಣಕ್ಕೆ ಸುಣ್ಣ; ಡಬಲ್ ಎಂಜಿನ್ ಸರ್ಕಾರದಿಂದ ಡಬಲ್ ಗೇಮ್...ಪ್ರತಿಯೊಂದನ್ನೂ ಪ್ರಶ್ನಿಸುವ, ನ್ಯಾಯ ಕೇಳುವ ಕನ್ನಡಿಗರನ್ನು ದುರ್ಬಲಗೊಳಿಸುವುದೂ ಎಂದರೆ, ಆರ್ಥಿಕವಾಗಿ ಕರ್ನಾಟಕದ ಬೆನ್ನುಮೂಳೆ ಮುರಿಯುವುದು. ಉತ್ತರಕ್ಕೆ ಬೆಣ್ಣೆ, ದಕ್ಷಿಣಕ್ಕೆ ಸುಣ್ಣ ಎಂಬ ನೀತಿ ಅನುಸರಿಸುವ ಬಿಜೆಪಿ ಡಬಲ್ ಎಂಜಿನ್ ಸರಕಾರವು, ದಕ್ಷಿಣದ ರಾಜ್ಯಗಳ ಜತೆ ಡಬಲ್ ಗೇಮ್ ಆಡುತ್ತಿದೆ ಎಂದು ಕುಟುಕಿದರು.
ಒಂದು ಕಡೆ ಸಫಾರಿ! ಇನ್ನೊಂದು ಕಡೆ ಸುಪಾರಿ...ಇಂದು ಕರ್ನಾಟಕ; ನಾಳೆ ತಮಿಳುನಾಡು, ನಾಡಿದ್ದು ಆಂಧ್ರ ಪ್ರದೇಶ ಮತ್ತು ತೆಲಂಗಾಣ, ಆಚೆ ನಾಡಿದ್ದು ಕೇರಳ!! ಬಿಜೆಪಿಯ ಸುಪಾರಿ ಆಟ ಶುರುವಾಗಿದೆ ಎಂದು ಎಚ್ಚರಿಸಿದರು. 
ಒಂದು ಕಡೆ ಸಫಾರಿ! ಇನ್ನೊಂದು ಕಡೆ ಸುಪಾರಿ!! ಇದು ಬಿಜೆಪಿಯು ಆದಿಯಿಂದ ನಡೆದುಕೊಂಡು ಬಂದ ದಾರಿ. ಕೆಎಂಎಫ್ ಮತ್ತು ನಂದಿನಿ ವಿಷಯದಲ್ಲೂ ಆ ಪಕ್ಷದ್ದು ಅದೇ ವರಸೆ. ಸ್ಲೋಗನ್ ನಲ್ಲಿ ಮಾತ್ರ 'ಬಿಜೆಪಿಯೇ ಭರವಸೆ', ಇದೇ ನೋಡಿ ಅದರ ಅಸಲಿ ವರಸೆ!! ಎಂದು ಹೇಳಿದರು. 
ಪ್ರಧಾನಿ ಮೋದಿ ಅವರು ಚುನಾವಣೆ ಹೊತ್ತಿನಲ್ಲಿ ತಮ್ಮೆಲ್ಲ ಅಗಾಧ ಕಾರ್ಯಭಾರ ಬದಿಗಿಟ್ಟು ಸಫಾರಿ ಮಾಡಿಹೋಗಿದ್ದಾರೆ. ಸ್ಥಳಕ್ಕೊಂದು ಪೋಷಾಕು ಧರಿಸುವ ಅವರ ಬಗ್ಗೆ ಮಾತಾಡಿದರೆ, ನನಗೆ ಅವರ ಧಿರಿಸಿನ ಬಗ್ಗೆ ಗೊತ್ತೇ ಇಲ್ಲ ಎನ್ನುವುದು ಸಚಿವ ಅಶ್ವತ್ಥನಾರಾಯಣ ಅವರ ಕುಹಕದ ಮಾತು ಎಂದು ಹೇಳಿದರು. ಇನ್ನೊಬ್ಬರು; ಸಿ.ಟಿ. ರವಿ; ಈ ಮಹಾಶಯರು, ಮೋದಿ ಅವರ ಬಗ್ಗೆ ಟೀಕೆ ಮಾಡಿದರೆ ಅವರ ಎತರಕ್ಕೆ ಏರಲು ಸಾಧ್ಯವಿಲ್ಲ ಎಂದು ಆಣಿಮುತ್ತು ಉದುರಿಸಿದ್ದಾರೆ. ನಾವು ಅವರ ಮಟ್ಟಕ್ಕೆ ಏರುವುದೂ ಇಲ್ಲ, ಸಿ.ಟಿ.ರವಿ ಅವರ ಮಟ್ಟಕ್ಕೆ ಇಳಿಯುವುದೂ ಇಲ್ಲ. ಆದರೆ, ಕರ್ನಾಟಕವನ್ನು ಗುಜರಾತಿಗಳಿಗೆ ಒತ್ತೆ ಇಡುವ ಪಾಪದ ಕೆಲಸವನ್ನಂತು ನಾವು ಮಾಡುತ್ತಿಲ್ಲ ಎಂದು ಹೇಳಿದರು.