ಬೆಂಗಳೂರು: ಬಿಜೆಪಿಯ ಪ್ರಣಾಳಿಕೆ ರಾಮರಾಜ್ಯದ ಪರಿಕಲ್ಪನೆಯಲ್ಲಿ ಇರಲಿದ್ದು, ರಾಜ್ಯದ ಆರ್ಥಿಕ ಸ್ಥಿತಿ ಮತ್ತು ಶಕ್ತಿಯನ್ನು ಆಧರಿಸಿ ಅಭಿವೃದ್ಧಿಗೆ ಪೂರಕವಾಗಿರಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಪ್ರಣಾಳಿಕೆ ಅಭಿಯಾನ ಸಲಹಾ ಸಮಿತಿ ಸಭೆಯ ಬಳಿಕ ಮಾತನಾಡಿದ ಅವರು, ಪ್ರತಿ ಜಿಲ್ಲೆ, ತಾಲೂಕುಗಳಲ್ಲಿ ಸಲಹಾ ಪೆಟ್ಟಿಗೆಗಳನ್ನು ಇಡಲಾಗಿತ್ತು. ಅದೆಲ್ಲವನ್ನೂ ತರಿಸಿಕೊಂಡು ತಾಲೂಕುವಾರು, ಜಿಲ್ಲಾವಾರು ಸಲಹೆಗಳನ್ನು ತೆಗೆದುಕೊಂಡು ಡಿಜಿಟಲೈಸ್ ಮಾಡಲಾಗಿದೆ. ಪ್ರತಿಯೊಂದು ವರ್ಗದ ಜನರ ಅಭಿವೃದ್ಧಿಗೆ ಏನು ಮಾಡಬಹುದು ಅನ್ನುವುದನ್ನು ಚರ್ಚಿಸಿ ಪ್ರಣಾಳಿಕೆ ಸಿದ್ಧವಾಗಲಿದೆ ಎಂದರು.
ಪ್ರಣಾಳಿಕೆ ಸಮಿತಿಯಲ್ಲಿ ವಿಷಯವಾರು ತಜ್ಞರು ಸೇರಿದಂತೆ 32 ಎಕ್ಸ್‌ಪರ್ಟ್‌ಗಳಿದ್ದಾರೆ. ಇವರ ಜೊತೆ ಸಮಾಲೋಚನೆ ನಡೆಸಿ, ಕರ್ನಾಟಕದ ಪ್ರಣಾಳಿಕೆ ಇಡೀ ದೇಶಕ್ಕೆ ಮಾದರಿಯಾಗಿ, ಸಮಗ್ರವಾಗಿರಲಿದೆ. ಹೊಸತನ ಮತ್ತು ಬದುಕು ಕಟ್ಟಿಕೊಡುವ, ನೈಜತೆಯಿಂದ ಕೂಡಿರುವ ಪ್ರಣಾಳಿಕೆ ಇದಾಗಿರಲಿದೆ ಎಂದು ತಿಳಿಸಿದರು.
ಬಿಜೆಪಿಯ ಪ್ರಣಾಳಿಕೆ ಕೇವಲ ಘೋಷಣೆಗೆ ಸೀಮಿತವಾಗದೆ 5 ವರ್ಷಗಳಲ್ಲಿ ನಮ್ಮ ಸರ್ಕಾರ ಮಾಡಬೇಕಾಗಿರುವ, ಮಾಡಬಹುದಾದ ಅಭಿವೃದ್ಧಿಯ ಬ್ಲೂ ಪ್ರಿಂಟ್ ಆಗಲಿರಲಿದೆ. ಮುಂದಿನ 7 ದಿನಗಳ ಒಳಗೆ ಪ್ರಣಾಳಿಕೆ ಬಿಡುಗಡೆಯಾಗಲಿದ್ದು, ಗ್ರೇಟರ್ ಬೆಂಗಳೂರು, ಕರಾವಳಿ ಪ್ರದೇಶ, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ, ಹಳೆ ಮೈಸೂರು ಹೀಗೆ ವಲಯವಾರು, ಜಿಲ್ಲಾವಾರು ಪ್ರಣಾಳಿಕೆ ಮಾಡಲು ಅವಕಾಶವಿದೆ ಎಂದರು.