ಚಾಮರಾಜನಗರ: ನಾನು ಯಾವ ಕ್ಷೇತ್ರದಿಂದಲೂ ಟಿಕೆಟ್ ಕೇಳಿಲ್ಲ. ಈ ಬಗ್ಗೆ ವರಿಷ್ಠರು ನಿರ್ಧಾರ ಕೈಗೊಳ್ಳುತ್ತಾರೆ ಎಂದು ವಸತಿ ಮತ್ತು ಮೂಲಸೌಕರ್ಯ ಸಚಿವ ವಿ.ಸೋಮಣ್ಣ ಮಂಗಳವಾರ ಹೇಳಿದರು.
ಚುನಾವಣೆಯಲ್ಲಿ ಎಲ್ಲಿಂದ ಸ್ಪರ್ಧಿಸುತ್ತೀರಿ, ಚಾಮರಾಜನಗರ ಟಿಕೆಟ್ ಖಚಿತವಾಯಿತೇ’ ಎಂದು ಮಾಧ್ಯಮಗಳ ಪ್ರಶ್ನೆಗೆ, ಅದನ್ನು ಪಕ್ಷದ ನಾಯಕರು ತೀರ್ಮಾನ ಮಾಡುತ್ತಾರೆ. 224 ಕ್ಷೇತ್ರಗಳಲ್ಲಿ ಎಲ್ಲಿ ಬೇಕಾದರೂ ಸ್ಪರ್ಧಿಸುವೆ. ಇದೇ ಕ್ಷೇತ್ರ ಬೇಕು ಎಂದು ಕೇಳಿಲ್ಲ. ಸ್ವಲ್ಪ ಕಾಯಿರಿ. ಇನ್ನು ಎರಡು ಗಂಟೆಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ. ಆಗ ಗೊತ್ತಾಗುತ್ತದೆ ಎಂದು ಹೇಳಿದರು.
ಬಿಜೆಪಿ ರೈತ ಮೋರ್ಚಾ ಸಮಾವೇಶದಲ್ಲಿ ಮಾತನಾಡಿದ ಸೋಮಣ್ಣ, ಚಾಮರಾಜನಗರ ಅಭಿವೃದ್ಧಿಯಲ್ಲಿ ಹಿಂದುಳಿದಿರಬಹುದು. ಆದರೆ ಸ್ವಾಭಿಮಾನ, ಸಂಸ್ಕಾರದಲ್ಲಿ ಹಿಂದೆ ಬಿದ್ದಿಲ್ಲ. ಮಹದೇಶ್ವರ ಸ್ವಾಮಿ ಆಶೀರ್ವಾದ ಪಡೆದುಕೊಂಡು ಈ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡುವುದೇ ನನ್ನ ಗುರಿ ಎಂದರು.














