ಮನೆ ರಾಜ್ಯ 16 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾತ್ರ ಬಾಕಿ: ಸಿಎಂ ಬೊಮ್ಮಾಯಿ

16 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾತ್ರ ಬಾಕಿ: ಸಿಎಂ ಬೊಮ್ಮಾಯಿ

0

ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಬಹುತೇಕ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಇನ್ನು 16 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾತ್ರ ಬಾಕಿ ಇದೆ ಎಂದರು.

Join Our Whatsapp Group

ಸುದ್ದಿಗಾರರ ಜೊತೆ ಗುರುವಾರ ಲಕ್ಷ್ಮಣ ಸವದಿ ಅಸಮಾಧಾನಗೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿ.ಎಂ, ಅವರು ಹಿರಿಯರು. ಅವರಿಗೂ ಭಾವನೆಗಳಿವೆ. ಸುದೀರ್ಘ ಕಾಲ ಸಾರ್ವಜನಿಕ ಜೀವನದಲ್ಲಿದ್ದಾರೆ. ಆದ್ದರಿಂದ ಕ್ಷೇತ್ರದ ಜನರ ವಿಶ್ವಾಸವನ್ನು ಅವರು ಉಳಿಸಬೇಕಾಗಿದ್ದು, ಆ ಕಡೆಯಿಂದಲೂ ಒತ್ತಡವಿದೆ. ಹೀಗಾಗಿ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಎಲ್ಲ ಸರಿಯಾಗುತ್ತದೆ ಎಂದರು.

ಸವದಿಯವರು ಕಾಂಗ್ರೆಸ್ ಮುಖಂಡರನ್ನು ಸಂಪರ್ಕಿಸಿದ ಬಗ್ಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಅದು ನನಗೆ ಗೊತ್ತಿಲ್ಲ. ನಮ್ಮೊಂದಿಗೆ ಬಹಳ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಕೋಪದಲ್ಲೇನೋ ಹೇಳಿರಬಹುದು. ಎಲ್ಲ ಸರಿಯಾಗುತ್ತದೆ ಎಂಬ ವಿಶ್ವಾಸವಿದೆ ಎಂದರು.

ನೆಹರೂ ಓಲೇಕಾರ್ ತಮ್ಮ ವಿರುದ್ಧ ಮಾಡಿರುವ ₹ 1,500 ಕೋಟಿ ಮೊತ್ತದ ಹಗರಣದ ಆರೋಪಕ್ಕೆ ಇಲ್ಲಿ ಗುರುವಾರ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬರೀ ಹೇಳಿಕೆ ನೀಡಿದ ತಕ್ಷಣ ಹಗರಣ ನಡೆದಿರುವುದು ಸಾಬೀತು ಆಗುವುದಿಲ್ಲ. ಅವರು ಈ ಕುರಿತು ದಾಖಲೆ ಒದಗಿಸಲಿ. ಅದರ ಸತ್ಯಾಸತ್ಯತೆಯ ತನಿಖೆಯಾಗಲಿ ಎಂದರು.

ಕಾಂಗ್ರೆಸ್ ಮುಂದಿನ ಪಟ್ಟಿಯಲ್ಲಿ ಅಚ್ಚರಿಯ ಹೆಸರು ಬರುತ್ತದೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿ.ಎಂ, ಕಾಂಗ್ರೆಸ್ ನಲ್ಲಿ 60-65 ಕಡೆ ಅಭ್ಯರ್ಥಿಗಳೇ ಇರಲಿಲ್ಲ. ಹಾಗಾಗಿ 160 ಕ್ಷೇತ್ರಗಳಿಗಷ್ಟೇ ಅಭ್ಯರ್ಥಿ ಘೋಷಣೆ ಮಾಡಿ ನಿಲ್ಲಿಸಿದ್ದಾರೆ. ಉಳಿದ ಕ್ಷೇತ್ರಗಳಿಗೆ ಇಂದಿನವರೆಗೂ ಪಟ್ಟಿ ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ. ಅದರ ಅರ್ಥ ಆಮದು ಮಾಡುವ ರಾಜನೀತಿ. ಅವರದು ಆರಂಭ ಶೂರತ್ವ. ಅವರಿಗೆ ಸಮರ್ಥವಾದ ಅಭ್ಯರ್ಥಿಗಳೇ ಇಲ್ಲ. ಇನ್ನು ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಕನಸಿನ ಮಾತು ಎಂದರು.

ಚುನಾವಣೆ ಸಂದರ್ಭದಲ್ಲಿ ಈ ಕಡೆಯವರು ಆ ಕಡೆಗೆ, ಆ ಕಡೆಯವರು ಈ ಕಡೆಗೆ ಹೋಗುವುದು ಸರ್ವೇ ಸಾಮಾನ್ಯ. ಅದರಿಂದ ದೊಡ್ಡ ಬದಲಾವಣೆಯೇನೂ ಆಗದು ಎಂದರು.

ಟಿಕೆಟ್ ಕೈತಪ್ಪಿದ ಶಾಸಕರು ಬಂಡಾಯವೇಳುತ್ತಿರುವ ಕುರಿತು ಪ್ರತಿಕ್ರಿಯಿಸಿದ ಬೊಮ್ಮಾಯಿಯವರು, ಅವರನ್ನು ಸಮಾಧಾನಪಡಿಸುತ್ತೇವೆ. ನಮ್ಮ ಕಾರ್ಯಕರ್ತರು ಹಾಗೂ ಪಕ್ಷ ಗಟ್ಟಿಯಾಗಿದೆ. ಆದ್ದರಿಂದ ಯಾವ ತೊಂದರೆಯೂ ಆಗದು ಎಂದು ವಿಶ್ವಾಸ ವ್ಯಕ್ತಪಡಿಸಿದರು.