ಮನೆ ಕಾನೂನು ʼವ್ಯಾಜ್ಯ ಬೇಡ, ಮಧ್ಯಸ್ಥಿಕೆ ಇರಲಿʼ ಎಂಬುದು ಕೇಂದ್ರ ಸರ್ಕಾರದ ಧ್ಯೇಯವಾಗಲಿ: ಸಿಜೆಐ ಡಿ ವೈ ಚಂದ್ರಚೂಡ್

ʼವ್ಯಾಜ್ಯ ಬೇಡ, ಮಧ್ಯಸ್ಥಿಕೆ ಇರಲಿʼ ಎಂಬುದು ಕೇಂದ್ರ ಸರ್ಕಾರದ ಧ್ಯೇಯವಾಗಲಿ: ಸಿಜೆಐ ಡಿ ವೈ ಚಂದ್ರಚೂಡ್

0

ಕಾನೂನು ವಿವಾದಗಳನ್ನು ಬಗೆಹರಿಸಲು ಮೊಕದ್ದಮೆ ಹೂಡಿಕೆಯನ್ನು ಆಶ್ರಯಿಸುವ ಬದಲು ಕೇಂದ್ರ ಸರ್ಕಾರ ದೊಡ್ಡ ಮಟ್ಟದಲ್ಲಿ ಮಧ್ಯಸ್ಥಿಕೆ ಅಳವಡಿಸಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಹೇಳಿದ್ದಾರೆ.

Join Our Whatsapp Group

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಮಧ್ಯಸ್ಥಿಕೆ ಹಾಗೂ ಸಂಧಾನ ಯೋಜನಾ ಸಮಿತಿಯ ಆಶ್ರಯದಲ್ಲಿ ದೆಹಲಿ ಹೈಕೋರ್ಟ್ ಮಧ್ಯಸ್ಥಿಕೆ ಮತ್ತು ಸಂಧಾನ ಕೇಂದ್ರ, ʼಸಮಾಧಾನ್ʼ  ಶುಕ್ರವಾರ ಆಯೋಜಿಸಿದ್ದ ‘ಮಧ್ಯಸ್ಥಿಕೆ: ಸುವರ್ಣಯುಗದ ಉದಯ ಕಾಲದಲ್ಲಿ’ ಎಂಬ ವಿಷಯ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಮಧ್ಯಸ್ಥಿಕೆ ಎಂಬುದು ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸುವುದು, ವಿವಿಧ ಭಾಗೀದಾರರನ್ನು ಒಟ್ಟುಗೂಡಿಸುವುದು ಹಾಗೂ ಸಾಮಾನ್ಯ ನೆಲೆಯನ್ನು ಕಂಡುಕೊಳ್ಳುವ ಪ್ರಕ್ರಿಯೆಯಾಗಿದೆ ಎಂದು ಅವರು ಹೇಳಿದರು.

ʼವ್ಯಾಜ್ಯ ಬೇಡ, ಮಧ್ಯಸ್ಥಿಕೆ ಇರಲಿʼ ಎಂಬುದು ಕೇಂದ್ರ ಸರ್ಕಾರದ ಧ್ಯೇಯವಾಗಲಿʼ ಎಂದ ಅವರು ದೇಶದ ಅತಿದೊಡ್ಡ ದಾವೆದಾರನಾಗಿರುವ ಸರ್ಕಾರ ಮಧ್ಯಸ್ಥಿಕೆ ಅಳವಡಿಸಿಕೊಂಡಾಗ ಕಾನೂನಿನ ಚೌಕಟ್ಟಿನಲ್ಲಿ ಸರ್ಕಾರ ತನ್ನ ಪ್ರಜೆಗಳಿಗೆ ಎದುರಾಳಿಯಲ್ಲ ಎಂಬ ಸಂದೇಶ ನೀಡಿದಂತಾಗುತ್ತದೆ. ಸರ್ಕಾರ ಸ್ನೇಹಿತ, ಪಾಲುದಾರ ಹಾಗೂ ಸಮಸ್ಯೆ ಪರಿಹರಿಸುವವರ ಪಾತ್ರ ವಹಿಸಬೇಕು ಎಂದರು.

ದೇಶದ  ಸಂವಿಧಾನ ಹೇಗೆ ಮಧ್ಯಸ್ಥಿಕೆ ಪ್ರಕ್ರಿಯೆಯಿಂದ ಹುಟ್ಟಿದ ದಾಖಲೆಯಾಗಿದೆ ಎಂಬುದನ್ನು ಎತ್ತಿ ತೋರಿಸಿದ ಸಿಜೆಐ, ಇದರಲ್ಲಿ ಅನೇಕ ಭಿನ್ನಾಭಿಪ್ರಾಯಗಳನ್ನು ಪರಿಹರಿಸುವ ಚೌಕಟ್ಟನ್ನು ರಚಿಸಬೇಕಾಯಿತು ಎಂದರು.

ಇಂದಿನ ಸಂಕಷ್ಟದ ಸಮಯದಲ್ಲಿ, ಮಧ್ಯಸ್ಥಿಕೆಯು ನಾಗರಿಕರಾದ ನಮಗೆ ಒಂದು ಪ್ರಮುಖ ಸಂದೇಶ ನೀಡುತ್ತಿದೆ. ಶ್ರೇಣೀಕೃತ ಸಮಾಜದ ವಿರುದ್ಧ ತುದಿಗಳಲ್ಲಿರುವ ಜನರೊಂದಿಗೆ ಮಾತನಾಡುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿದ್ದೇವೆಯೇ? ತರ್ಕಬದ್ಧ ಸಂವಾದದಲ್ಲಿ ತೊಡಗಿಸಿಕೊಳ್ಳುವ ಸಾಮರ್ಥ್ಯವನ್ನು ನಾವು ಕಳೆದುಕೊಳ್ಳುತ್ತಿದ್ದೇವೆಯೇ? ಎಂಬ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದರು.

ಇದಲ್ಲದೆ, ಇತರರ ದೃಷ್ಟಿಕೋನವನ್ನು ಕೇಳಲು ಮಧ್ಯಸ್ಥಿಕೆ ಎಂಬುದು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಅವರು ವಿವರಿಸಿದರು.