ಮನೆ ರಾಜಕೀಯ ಅಧಿಕಾರದ ದಾಹಕ್ಕಾಗಿ ಪಕ್ಷ ತೊರೆದ ಜಗದೀಶ್ ಶೆಟ್ಟರ್: ಅರವಿಂದ ಬೆಲ್ಲದ ಬೇಸರ

ಅಧಿಕಾರದ ದಾಹಕ್ಕಾಗಿ ಪಕ್ಷ ತೊರೆದ ಜಗದೀಶ್ ಶೆಟ್ಟರ್: ಅರವಿಂದ ಬೆಲ್ಲದ ಬೇಸರ

0

ಹುಬ್ಬಳ್ಳಿ: ಅಧಿಕಾರದ ದಾಹಕ್ಕಾಗಿ ಜಗದೀಶ ಶೆಟ್ಟರ್‌ ಅವರು ಆಡಿ–ಬೆಳೆದ ಪಕ್ಷ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗಿದ್ದು ದುಃಖದ ಸಂಗತಿ ಎಂದು ಶಾಸಕ ಅರವಿಂದ ಬೆಲ್ಲದ ಬೇಸರ ವ್ಯಕ್ತಪಡಿಸಿದರು.

Join Our Whatsapp Group

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಗದೀಶ ಶೆಟ್ಟರ್‌ ರಾಜಕಾರಣಕ್ಕೆ ಬರುವಾಗ ಲಿಂಗಾಯತ ನಾಯಕ ಎಂದು ಬಿಂಬಿಸಿರಲಿಲ್ಲ. ರಾಷ್ಟ್ರೀಯತೆಯ ವಿಚಾರಧಾರೆ, ಹಿಂದುತ್ವದ ಆಧಾರದಲ್ಲಿ ಪಕ್ಷ ಅವರನ್ನು ಶಕ್ತಿಯನ್ನಾಗಿ ಮಾಡಿತ್ತು ಎಂದರು.

ಸಾಮಾನ್ಯ ಕಾರ್ಯಕರ್ತರಾಗಿದ್ದ ಶೆಟ್ಟರ್‌ ಅವರಿಗೆ ಪಕ್ಷ ಎಲ್ಲ ಸ್ಥಾನಮಾನಗಳನ್ನು ನೀಡಿ ಗೌರವಿಸಿತ್ತು. ಪಕ್ಷದ ತತ್ವ–ಸಿದ್ಧಾಂತದ ಅಡಿಯಲ್ಲಿ ಕಾರ್ಯಕರ್ತರು ಅವರನ್ನು ದೊಡ್ಡ ವ್ಯಕ್ತಿಯನ್ನಾಗಿ ಮಾಡಿ ಸಂಭ್ರಮಿಸಿದ್ದರು. ಆದರೆ, ಬಿಜೆಪಿ ತದ್ವಿರುದ್ಧ ಸಿದ್ಧಾಂತ ಹೊಂದಿರುವ ಕಾಂಗ್ರೆಸ್‌ ಸೇರ್ಪಡೆಯಾಗಿ, ಶಾಲು ಹಾಕಿಕೊಂಡಿರುವ ದೃಶ್ಯ ಪಕ್ಷದ ಎಲ್ಲ ಕಾರ್ಯಕರ್ತರಿಗೆ ನೋವುಂಟು ಮಾಡಿದೆ ಎಂದು ಹೇಳಿದರು.

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದಾಗ, ನನಗಿಂತ ಚಿಕ್ಕವರ ಸಚಿವ ಸಂಪುಟದಲ್ಲಿ ಇರಲಾರೆ ಎಂದು ಶೆಟ್ಟರ್‌ ಹೇಳಿದ್ದರು. ಮುಂದೆಯೂ ಬೊಮ್ಮಾಯಿ ಅಥವಾ ಇನ್ಯಾರೋ ಮುಖ್ಯಮಂತ್ರಿಯಾಗಬಹುದು. ಆ ವಿಷಯವಾಗಿ ಪಕ್ಷ ಟಿಕೆಟ್ ನೀಡಿರಲಿಲ್ಲ. ಧೀಮಂತ ನಾಯಕರಾಗಿದ್ದರೆ ಕಾಂಗ್ರೆಸ್‌ ಬದಲು ಸ್ವತಂತ್ರ ಅಭ್ಯರ್ಥಿಯಾಗಿ ನಿಲ್ಲಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶೆಟ್ಟರ್‌ ಪಕ್ಷ ತೊರೆಯುತ್ತಿದ್ದಂತೆ ಬಿಜೆಪಿ ಲಿಂಗಾಯತರಿಗೆ ಅನ್ಯಾಯ ಮಾಡುತ್ತಿದೆ ಎಂದು ಕಾಂಗ್ರೆಸ್‌ ಮುಖಂಡರು ಆರೋಪಿಸುತ್ತಿದ್ದಾರೆ. ಅವರು ಎಂದಾದರೂ ಲಿಂಗಾಯತ ಸಮುದಾಯದ ಮುಖಂಡರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ಹೇಳಿದ್ದಾರಾ? ಇಂತಹ ಹೇಳಿಕೆ ನೀಡುವ ಮೂಲಕ ಸಮಾಜವನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಸುರೇಶ ಅಂಗಡಿ, ಬಸವರಾಜ ಬೊಮ್ಮಾಯಿ, ಬಿ.ಎಸ್‌. ಯಡಿಯೂರಪ್ಪ ಸೇರಿದಂತೆ ಅನೇಕರಿಗೆ ಪಕ್ಷ ಉನ್ನತ ಸ್ಥಾನ ನೀಡಿದೆ ಎಂದು ತಿಳಿಸಿದರು.

ಹು–ಧಾ ಸೆಂಟ್ರಲ್‌ ವಿಧಾನಸಭಾ ಕ್ಷೇತ್ರ ಬಿಜೆಪಿಯ ಶಕ್ತಿ ಕೇಂದ್ರ. ಸಾಮಾನ್ಯ ಕಾರ್ಯಕರ್ತ ಅಭ್ಯರ್ಥಿಯಾಗಿ ನಿಂತರೂ ಗೆದ್ದು ಬರುತ್ತಾನೆ. ಕಾಂಗ್ರೆಸ್‌ ನಲ್ಲಿ ಶೆಟ್ಟರ್‌ಗೆ ಯಾವ ಸ್ಥಾನವೂ ಸಿಗುವುದಿಲ್ಲ. ಅವರು ಅತ್ಯಂತ ಕೆಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರು ಪಕ್ಷ ತೊರೆದಿರುವುದರಿಂದ ಸಮಸ್ಯೆಯೇನೂ ಇಲ್ಲ. ಆದರೆ, ಹಿರಿಯ ನಾಯಕ ತೊರೆದಾಗ ಉಂಟಾಗುವ ಸಹಜ ತಳಮಳ ಉಂಟಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.