ಮನೆ ಅಪರಾಧ ನಕಲಿ ನೇರ ನೇಮಕಾತಿ ಪ್ರಮಾಣ ಪತ್ರಗಳ ಹಾವಳಿ: ಬೆಸ್ಕಾಂನಿಂದ ದೂರು ದಾಖಲು

ನಕಲಿ ನೇರ ನೇಮಕಾತಿ ಪ್ರಮಾಣ ಪತ್ರಗಳ ಹಾವಳಿ: ಬೆಸ್ಕಾಂನಿಂದ ದೂರು ದಾಖಲು

0

ಬೆಂಗಳೂರು: ಬೆಸ್ಕಾಂನಲ್ಲಿ ಮಾಪನ ಓದುಗ ಹುದ್ದೆ , ಕಿರಿಯ ಸಹಾಯಕರ ಹುದ್ದೆಗೆ ನೇರ ಸಂದರ್ಶನಕ್ಕೆ ಹಾಜರಾಗಲು ಕೋರಿ ಕೆಪಿಟಿಸಿಎಲ್‌ ಹಾಗು ಬೆಸ್ಕಾಂ ಹೆಸರಿನ ಲೆಟರ್‌ ಹೆಡ್‌ ನಲ್ಲಿ ನಕಲಿ ನೇಮಕ ಪ್ರಮಾಣ ಪತ್ರಗಳನ್ನು ಸೃಷ್ಠಿಸಿ ಅಭ್ಯರ್ಥಿಗಳಿಗೆ ವಿತರಿಸುತ್ತಿರುವ ಪ್ರಕರಣದ ಕುರಿತು ಬೆಸ್ಕಾಂ ವಿಧಾನಸೌಧದ ಪೊಲೀಸ್‌ ಠಾಣೆಗೆ ದೂರು ನೀಡಿದೆ.
ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಅವರ ಸೂಚನೆ ಮೇರೆಗೆ ಪ್ರಧಾನ ವ್ಯವಸ್ಥಾಪಕ ( ಆಡಳಿತ ಮತ್ತು ಮಾನವ ಸಂಪನ್ಮೂಲ ) ಸಿ.ಎನ್.‌ ಮಂಜುನಾಥ್‌ ಅವರು ವಿಧಾನ ಸೌಧ ಠಾಣೆಯಲ್ಲಿ ದೂರು ನೀಡಿದ್ದಾರೆ.

Join Our Whatsapp Group


ಇದುವರೆಗೆ ಐದು ಪ್ರಕರಣಗಳು ಬೆಸ್ಕಾಂ ಗಮನಕ್ಕೆ ಬಂದಿದ್ದು, ಅಧಿಕೃತ ಜ್ಞಾಪನ ಪತ್ರ / ಸುತ್ತೋಲೆ ಎಂಬ ನಕಲಿ ನೇಮಕ ಆದೇಶಗಳನ್ನು ವಿದ್ಯುತ್‌ ಸರಬರಾಜು ಕಂಪನಿ ಹಾಗು ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮದ ಹೆಸರಿನಲ್ಲಿ ಹಲವು ಉದ್ಯೋಗ ಆಕಾಂಕ್ಷಿ ವ್ಯಕ್ತಿಗಳಿಗೆ ಕಳುಹಿಸಿ ವ್ಯವಸ್ಥಿತವಾಗಿ ವಂಚಿಲಾಗುತ್ತಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಬೆಸ್ಕಾಂ ಮತ್ತು ಕೆಪಿಟಿಸಿಎಲ್‌ ನಿಂದ ಉದ್ಯೋಗ ಆಕಾಂಕ್ಷಿಗಳಿಗೆ ನೇರ ಸಂದರ್ಶನಕ್ಕೆ ಹಾಜರಾಗಲು ಸುತ್ತೋಲೆಗಳನ್ನು ಕಳುಹಿಸುವುದಿಲ್ಲ. ಇದೊಂದು ಉದ್ಯೋಗ ವಂಚನೆಯ ಜಾಲವಾಗಿದ್ದು, ಬೆಸ್ಕಾಂ ಮತ್ತು ಕೆಪಿಟಿಸಿಎಲ್‌ ಹೆಸರಿನಲ್ಲಿ ನಿರುದ್ಯೋಗಿ ಯುವಕ- ಯುವತಿಯರನ್ನು ವಂಚಿಸಿ ಹಣ ಪಡೆಯಲಾಗುತ್ತಿದೆ ಮತ್ತು ಕಂಪನಿಗೆ ಕೆಟ್ಟ ಹೆಸರು ತರುವ ಉದ್ದೇಶ ಇದರಲ್ಲಿ ಅಡಗಿದೆ ಎಂದು ಪ್ರಧಾನ ವ್ಯವಸ್ಥಾಪಕರು ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ನಕಲಿ ನೇಮಕ ಪ್ರಮಾಣ ಪತ್ರ ಹಂಚಿ ಉದ್ಯೋಗ ಆಕಾಂಕ್ಷಿಗಳನ್ನು ವಂಚಿಸುತ್ತಿರುವ ಜಾಲವನ್ನು ಪತ್ತೆ ಹಚ್ಚಿ ವಂಚಕರ ವಿರುದ್ಧ ಕಾನೂನು ಕ್ರಮ ಜರುಗಿಸಲು ಬೆಸ್ಕಾಂ ದೂರಿನಲ್ಲಿ ಕೋರಿದೆ.
ವಂಚನೆಯ ವಿವರ: ಕೆಪಿಟಿಸಿಎಲ್‌ ಹಾಗು ಬೆಸ್ಕಾಂ ಹೆಸರಿನ ಲೆಟರ್‌ ಹೆಡ್‌ ನಲ್ಲಿ ಅಭ್ಯರ್ಥಿಗಳಿಗೆ ನೇರ ನೇಮಕಾತಿಯ ಸುತ್ತೋಲೆಯನ್ನು ಕಳುಹಿಸಲಾಗುತ್ತಿದೆ. ಮಾಪನ ಓದುಗ ಹುದ್ದೆ ಮತ್ತು ಕಿರಿಯ ಸಹಾಯಕರ ಹುದ್ದೆಗೆ ನೇಮಕ ಮಾಡಲು ಬೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರರು , ಅಧೀಕ್ಷಕ ಇಂಜಿನಿಯರ್‌ ಅವರು ಸಹಿ ಮಾಡಿದ ರೀತಿಯಲ್ಲಿ, ನಕಲಿ ನೇಮಕ ಪ್ರಮಾಣ ಪತ್ರಗಳನ್ನು ಸಿದ್ದಪಡಿಸಿ ಅವುಗಳನ್ನು ವಾಟ್ಸ್‌ ಪ್‌ ಮೂಲಕ ಅಭ್ಯರ್ಥಿಗಳಿಗೆ ಕಳುಹಿಸಲಾಗುತ್ತಿದೆ.
ಈಗಾಗಲೇ ಮಾಪಕ ಓದುಗ ಮತ್ತು ಕಿರಿಯ ಸಹಾಯಕ ಹುದ್ದೆಗೆ ನಕಲಿ ನೇಮಕ ಆದೇಶಗಳನ್ನು ಸೃಷ್ಠಿಸಿ ನಾಗೇಶ್‌ , ಆರ್.‌ ಕೆ. ಸಿದ್ದೇಶ, ಎ. ಅನು, ಹೆಚ್.‌ ಟಿ. ದಿವ್ಯ, ಹಾಗು ಜಿ.ಎಸ್.‌ ಸುಹಾಸ್‌ ಎಂಬುವರಿಗೆ ಕಳುಹಿಸಿ ಕೊಡಲಾಗಿದೆ.
ನಾಲ್ಕು ಪ್ರಕರಣಗಳಲ್ಲಿ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಮಾರ್ಚ್‌ 17, 2023 ರಂದು ಬೆಸ್ಕಾಂನ ಪ್ರಧಾನ ವ್ಯವಸ್ಥಾಪಕರು ದೂರು ನೀಡಿದ್ದು, ಎಫ್‌ ಐಆರ್‌ ದಾಖಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಸುಹಾಸ್‌ ಎನ್ನುವರಿಗೆ ಕಿರಿಯ ಸಹಾಯಕ ಹುದ್ದೆಗೆ ನಕಲಿ ನೇಮಕ ಆದೇಶ ನೀಡಿರುವ ಪ್ರಕರಣದ ಕುರಿತು ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಮಂಗಳವಾರ ದೂರು ನೀಡಲಾಗಿದೆ.