ಬೆಂಗಳೂರು: ಯುವ ಪ್ರತಿಭೆ ರಜತ್ ಪಾಟಿದಾರ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಂದಿನ ಸೂಪರ್ ಸ್ಟಾರ್ ಆಟಗಾರ ಆಗಲಿದ್ದಾರೆಂದು ದಕ್ಷಿಣ ಆಫ್ರಿಕಾ ಮಾಜಿ ನಾಯಕ ಹಾಗೂ ಆರ್ಸಿಬಿ ಮಾಜಿ ಬ್ಯಾಟ್ಸ್ಮನ್ ಎಬಿ ಡಿ ವಿಲಿಯರ್ಸ್ ಭವಿಷ್ಯ ನುಡಿದಿದ್ದಾರೆ.
‘ಆರ್’ಸಿಬಿ ಇನ್’ಸೈಡರ್’ ಶೋನಲ್ಲಿ ಎಬಿ ಡಿವಿಲಿಯರ್ಸ್’ಗೆ ನಿವೃತ್ತಿ ಹೊಂದಿರುವ 17 ಸಂಖ್ಯೆಯ ಜೆರ್ಸಿಯನ್ನು ಯಾರಿಗೆ ಕೊಡಲು ನೀವು ಬಯಸುತ್ತೀರಿ ಎಂದು ಪ್ರಶ್ನೆ ಕೇಳಲಾಯಿತು. ಈ ಬಗ್ಗೆ ಸ್ವಲ್ಪ ಯೋಚನೆ ಮಾಡಿದ ಎಬಿಡಿ, ಈ ಜೆರ್ಸಿ ಧರಿಸಲು ರಜತ್ ಪಾಟಿದಾರ್’ಗೆ ಅರ್ಹತೆ ಇದೆ ಎಂದು ಹೇಳಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ರಜತ್ ಪಾಟಿದಾರ್ ಅವರು ಶ್ರೇಷ್ಠ ಪ್ರದರ್ಶನಗಳನ್ನು ನೀಡಿದ್ದಾರೆ. ಈ ತಂಡದಲ್ಲಿ ಅವರು ಮುಂದಿನ ದಿನಗಳಲ್ಲಿ ಇನ್ನಷ್ಟು ಏಳಿಗೆ ಸಾಧಿಸಲಿದ್ದಾರೆಂದು ನಾನು ಬಲವಾಗಿ ನಂಬುತ್ತೇನೆ ಎಂದು ಮಿಸ್ಟರ್ 360 ಡಿಗ್ರಿ ಖ್ಯಾತಿಯ ದಿಗ್ಗಜ ಭವಿಷ್ಯ ನುಡಿದಿದ್ದಾರೆ.
“ಇದು ನಿಜಕ್ಕೂ ಕಠಿಣ ಪ್ರಶ್ನೆಯಾಗಿದೆ. ಬಹುಶಃ ರಜತ್ ಪಾಟಿದಾರ್. “ದಿ ಪಟ ಮ್ಯಾನ್” ಎಂದು ನಾನು ಅವರಿಗೆ ನಿಕ್ ನೇಮ್ ಕೊಡಲು ಬಯಸುತ್ತೇನೆ. ಅವರ ಆಟ ನೋಡಲು ತುಂಬಾ ಚೆನ್ನಾಗಿದೆ. ಭವಿಷ್ಯದಲ್ಲಿ ಅವರು ಆರ್ಸಿಬಿ ತಂಡದ ಸೂಪರ್ ಸ್ಟಾರ್ ಆಟಗಾರ ಆಗಲಿದ್ದಾರೆ. ಹಾಗಾಗಿ ನನ್ನ ಜೆರ್ಸಿ ಸಂಖ್ಯೆಯನ್ನು ರಜತ್ ಪಾಟಿದಾರ್ಗೆ ನೀಡಲು ಬಯಸುತ್ತೇನೆ,” ಎಂದು ತಿಳಿಸಿದ್ದಾರೆ.
ಗಾಯದಿಂದಾಗಿ ರಜತ್ ಪಾಟಿದಾರ್ ಅವರು 2023ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಆರ್ಸಿಬಿ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಸಾಕಷ್ಟು ಹಿನ್ನಡೆಯಾಗಿದೆ. ಮಹಿಪಾಲ್ ಲೊಮ್ರೋರ್ ಅವರನ್ನು ಈ ಕ್ರಮಾಂಕದಲ್ಲಿ ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಆದ್ದರಿಂದ ಇದು ಟೀಮ್ ಮ್ಯಾನೇಜ್ಮೆಂಟ್ ಗೆ ತಲೆ ನೋವಾಗಿ ಪರಿಣಮಿಸಿದೆ.
2021ರ ಡಿಸೆಂಬರ್ ತಿಂಗಳಲ್ಲಿ ಎಬಿ ಡಿ ವಿಲಿಯರ್ಸ್ ಎಲ್ಲಾ ಸ್ವರೂಪದ ಕ್ರಿಕೆಟ್’ಗೆ ವಿದಾಯ ಹೇಳಿದ್ದರು. ಇದಾದ ಮುಂದಿನ ಆವೃತ್ತಿಯಿಂದ ಫಾಫ್ ಡು ಪ್ಲೆಸಿಸ್ ಅವರು ಆರ್ಸಿಬಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇದೀಗ ನಡೆಯುತ್ತಿರುವ ಟೂರ್ನಿಯಲ್ಲಿಯೂ ಅವರು ತಂಡದ ಸಾರಥ್ಯ ವಹಿಸುತ್ತಿದ್ದಾರೆ.
ವಯೋಮಿತಿ ಕ್ರಿಕೆಟ್’ನಿಂದಲೂ ಎಬಿ ಡಿ ವಿಲಿಯರ್ಸ್ ಹಾಗೂ ಫಾಫ್ ಡು ಪ್ಲೆಸಿಸ್ ಜೊತೆಯಲ್ಲಿಯೇ ಕ್ರಿಕೆಟ್ ಆಡಿದ್ದಾರೆ ಹಾಗೂ ಇವರಿಬ್ಬರೂ ಆತ್ಮೀಯ ಸ್ನೇಹಿತರೂ ಕೂಡ ಹೌದು. ಫಾಫ್ ಡು ಪ್ಲೆಸಿಸ್ ನಾಯಕತ್ವದಲ್ಲಿ ಆರ್ಸಿಬಿ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಳ್ಳಲಿದೆ ಎಂದು ಎಬಿಡಿ ಭವಿಷ್ಯ ನುಡಿದಿದ್ದಾರೆ.
“ಆರ್’ಸಿಬಿಗೆ ಫಾಫ್ ಡು ಪ್ಲೆಸಿಸ್’ಗೆ ಹೋಗುತ್ತಾರೆಂದು ನನಗೆ ಮೊದಲೇ ಗೊತ್ತಿತ್ತು. ಫಾಫ್ ಸಂಪೂರ್ಣವಾಗಿ ಫಿಟ್ ಇದ್ದಾರೆ. ಅವರು ಆರ್ಸಿಬಿಗೆ ಪ್ರಶಸ್ತಿ ಗೆದ್ದುಕೊಡಲಿದ್ದಾರೆಂದು ನನಗೆ ಅನಿಸುತ್ತಿದೆ. ಅವರು ತುಂಬಾ ಖುಷಿಯಾಗಿದ್ದಾರೆ. ಅವರು ಆರ್ಸಿಬಿ ಬಂದ ಬಳಿಕ, ತಾನು ಹಲವು ವರ್ಷಗಳಿಂದ ಏಕೆ ಖುಷಿಯಾಗಿದ್ದೇನೆಂದು ಅವರಿಗೆ ಅರಿವಾಗಿದೆ,” ಎಂದು ಎಬಿ ಡಿ ವಿಲಿಯರ್ಸ್ ತಿಳಿಸಿದ್ದಾರೆ.