ಮನೆ ಕಾನೂನು ಪೊಲೀಸರಿಗೆ ಪಾಸ್‌ಪೋರ್ಟ್ ಮುಟ್ಟುಗೋಲು ಅಧಿಕಾರವಿಲ್ಲ: ಹೈಕೋರ್ಟ್

ಪೊಲೀಸರಿಗೆ ಪಾಸ್‌ಪೋರ್ಟ್ ಮುಟ್ಟುಗೋಲು ಅಧಿಕಾರವಿಲ್ಲ: ಹೈಕೋರ್ಟ್

0

ಬೆಂಗಳೂರು: ”ಅಪರಾಧ ದಂಡ ಸಂಹಿತೆ(ಸಿಆರ್ ಪಿಸಿ)ಯಲ್ಲಿ ಲಭ್ಯವಿರುವ ಅಧಿಕಾರ ಚಲಾಯಿಸುವ ಮೂಲಕ ಆರೋಪ ಎದುರಿಸುತ್ತಿರುವ ವ್ಯಕ್ತಿಯ ಪಾಸ್‌ಪೋರ್ಟ್ ಅನ್ನು ಅನಿರ್ದಿಷ್ಟಾವಧಿಯವರೆಗೆ ಮುಟ್ಟುಗೋಲು ಹಾಕಿಕೊಳ್ಳುವ ಅಥವಾ ವಶಪಡಿಸಿಕೊಳ್ಳುವ ಅಧಿಕಾರ ಪೊಲೀಸರು ಅಥವಾ ವಿಚಾರಣಾ ನ್ಯಾಯಾಲಯಗಳಿಗೆ ಇಲ್ಲ,” ಎಂದು ಹೈಕೋರ್ಟ್ ಆದೇಶ ನೀಡಿದೆ.

ಅಂದರೆ ಅಪರಾಧ ಪ್ರಕರಣಗಳಲ್ಲಿ ಪಾಸ್‌ಪೋರ್ಟ್ ವಶಕ್ಕೆ ಪಡೆದುಕೊಳ್ಳಬಹುದು, ಆದರೆ ಅದನ್ನು ಸಕ್ಷಮ ಪ್ರಾಧಿಕಾರದ ಒಪ್ಪಿಗೆ ಪಡೆಯದೇ ತನ್ನ ಬಳಿಯೇ ಇಟ್ಟುಕೊಳ್ಳುವಂತಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಪಾಸ್‌ಪೋರ್ಟ್ ಕಾಯ್ದೆ 1967ರಡಿಯಲ್ಲಿ ಸಕ್ಷಮ ಅಧಿಕಾರಕ್ಕೆ ಮಾತ್ರ ಪಾಸ್‌ಪೋರ್ಟ್ ಅನ್ನು ವಶಪಡಿಸಿಕೊಳ್ಳುವ ಅಧಿಕಾರವು ಪ್ರತ್ಯೇಕವಾಗಿರುತ್ತದೆ ಎಂದು ನ್ಯಾಯಾಲಯ ತೀರ್ಪಿನಲ್ಲಿ ಹೇಳಿದೆ. ಆ ಮೂಲಕ ಪಾಸ್‌ಪೋರ್ಟ್ ವಶಕ್ಕೆ ಪಡೆಯುವ ಕುರಿತು ಇದ್ದ ಗೊಂದಲಗಳನ್ನು ನಿವಾರಿಸಿದೆ.

ತನ್ನ ಅಪ್ರಾಪ್ತ ಮಗನನ್ನು ಪ್ಯಾರಿಸ್‌ಗೆ ಅಧ್ಯಯನಕ್ಕಾಗಿ ಕರೆದೊಯ್ಯಲು ಅನುವು ಮಾಡಿಕೊಡಲು ತನ್ನ ಪಾಸ್‌ಪೋರ್ಟ್ ಬಿಡುಗಡೆ ಮಾಡುವಂತೆ ಮಾಡುವಂತೆ ಬೆಂಗಳೂರಿನ ಎಸ್.ಪ್ರವೀಣ್ ವಿಚಾರಣಾ ನ್ಯಾಯಾಲಯವನ್ನು ಕೋರಿದ್ದರು. ಆ ನ್ಯಾಯಾಲಯ ಅವರ ಮನವಿಯನ್ನು ತಿರಸ್ಕರಿಸಿತ್ತು, ಆ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಭಾಗಶಃ ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.

ಹೈಕೋರ್ಟ್ ಆದೇಶವೇನು?

”ಅಪರಾಧ ದಂಡ ಸಂಹಿತೆಯ ಸೆಕ್ಷನ್ 102ರ ಅಡಿಯಲ್ಲಿ ಪಾಸ್‌ಪೋರ್ಟ್ ಅನ್ನು ವಶಪಡಿಸಿಕೊಳ್ಳಲು ಪೊಲೀಸರಿಗೆ ಅಧಿಕಾರವಿದೆ. ಹೀಗೆ ವಶಪಡಿಸಿಕೊಂಡ ಪಾಸ್‌ಪೋರ್ಟ್ ಅನಿರ್ದಿಷ್ಟವಾಗಿ ಪೊಲೀಸರ ಕೈಯಲ್ಲಿ ಇರುವಂತಿಲ್ಲ, ಏಕೆಂದರೆ ಒಂದು ನಿರ್ದಿಷ್ಟ ಅವಧಿಯ ನಂತರ ವಶಪಡಿಸಿಕೊಳ್ಳುವಿಕೆ ಅಥವಾ ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ಬೇರೆಯೇ ಅರ್ಥವಿದೆ. ಅದು ಅವುಗಳ ನಡುವಿನ ವ್ಯತ್ಯಾಸದ ವ್ಯಾಪ್ತಿಯನ್ನು ತೋರುತ್ತದೆ ಮತ್ತು ಸಿಆರ್‌ಪಿಸಿಯ ಸೆಕ್ಷನ್ 102 ರ ಅಡಿಯಲ್ಲಿ ಪೊಲೀಸರಿಗೆ ಅಧಿಕಾರವನ್ನು ನೀಡಲಾಗುವುದಿಲ್ಲ,” ಹೈಕೋರ್ಟ್ ಹೇಳಿದೆ.

ಅಪರಾಧ ದಂಡ ಸಂಹಿತೆಯ ಸೆಕ್ಷನ್ 104 ರ ಅಡಿಯಲ್ಲಿ ದಾಖಲೆಯನ್ನು ವಶಪಡಿಸಿಕೊಳ್ಳುವ ಅಧಿಕಾರವು ವಿಚಾರಣಾ ನ್ಯಾಯಾಲಯಕ್ಕೆ ಲಭ್ಯವಿದೆ ಆದರೆ ಈ ಅಧಿಕಾರವು ಪಾಸ್‌ಪೋರ್ಟ್ ಅನ್ನು ವಶಪಡಿಸಿಕೊಳ್ಳುವ ಮಟ್ಟಿಗೆ ವಿಸ್ತರಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

”ಪಾಸ್‌ಪೋರ್ಟ್, ಪಾಸ್‌ಪೋರ್ಟ್ ಕಾಯಿದೆ 1967 ವ್ಯಾಪ್ತಿಯಲ್ಲಿ ಬರುತ್ತದೆ ಮತ್ತು ಇದು ವಿಶೇಷ ಕಾನೂನಾಗಿರುವುದರಿಂದ ವಶಪಡಿಸಿಕೊಂಡ ದಾಖಲೆಗಳ ವಿಚಾರದಲ್ಲಿ ಅಪರಾಧ ದಂಡ ಸಂಹಿತೆಯ ಸೆಕ್ಷನ್ 104ರ ನಿಬಂಧನೆಗಳ ಮೇಲೆ ಮೇಲುಗೈ ಸಾಧಿಸುತ್ತದೆ” ಎಂದು ವಿಚಾರಣಾ ನ್ಯಾಯಾಲಯದ ಅಧಿಕಾರಗಳ ಕುರಿತು ಸುಪ್ರೀಂಕೋರ್ಟ್‌ನ ತೀರ್ಪು ಉಲ್ಲೇಖಿಸಿ ಹೈಕೋರ್ಟ್ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ಅರ್ಜಿದಾರರು ಕಂಪನಿಯೊಂದಕ್ಕೆ ಸಂಬಂಧಿಸಿದ ವಂಚನೆ ಪ್ರಕರಣವನ್ನು ಎದುರಿಸುತ್ತಿದ್ದಾರೆ ಮತ್ತು ಅವರ ಪಾಸ್‌ಪೋರ್ಟ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಮತ್ತು ವಿಚಾರಣಾ ನ್ಯಾಯಾಲಯವು ವಿಚಾರಣೆ ಮುಗಿಯುವವರೆಗೆ ಅದನ್ನು ಉಳಿಸಿಕೊಳ್ಳಲು ಆದೇಶಿಸಿದೆ.

ಅರ್ಜಿದಾರರಿಗೆ ಪಾಸ್‌ಪೋರ್ಟ್ ಬಿಡುಗಡೆ ಮಾಡುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದ ಹೈಕೋರ್ಟ್, ಅದನ್ನು ಮುಟ್ಟುಗೋಲು ಹಾಕಿಕೊಳ್ಳಲು ಪಾಸ್‌ಪೋರ್ಟ್ ನ ಸಕ್ರಮ ಪ್ರಾಧಿಕಾರವನ್ನು ಸಂಪರ್ಕಿಸಲು ಪೊಲೀಸರಿಗೆ ಅನುಮತಿಯನ್ನು ನೀಡಿದೆ.