ಹುಣಸೂರು: ಯುದ್ದ ಪೀಡಿತ ಸುಡಾನ್ ದೇಶದಲ್ಲಿ ಸಿಲುಕಿಕೊಂಡಿರುವ ಹಕ್ಕಿಪಿಕ್ಕಿ ಸಮುದಾಯದವರನ್ನು ಸುರಕ್ಷಿತವಾಗಿ ಕರೆತರಲು ಸರಕಾರ ಎಲ್ಲಾ ಕ್ರಮ ಕೈಗೊಂಡಿದ್ದು, ಧೃತಿಗೆಡಬೇಡಿ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಗ್ರಾಮಸ್ಥರಿಗೆ ಭರವಸೆ ನೀಡಿದರು.
ಹುಣಸೂರು ತಾಲೂಕು ಒಂದನೇ ಪಕ್ಷಿರಾಜಪುರಕ್ಕೆ ಭೇಟಿ ನೀಡಿದ ಅಧಿಕಾರಿಗಳ ತಂಡದೊಂದಿಗೆ ಅವರು ಸುಡಾನ್ನಲ್ಲಿ ಸಿಲುಕಿಕೊಂಡಿರುವ ಕುಟುಂಬದವರು ಹಾಗೂ ಸಮುದಾಯದ ಮುಖಂಡರಿಂದ ಮಾಹಿತಿ ಪಡೆದರಲ್ಲದೆ, ಸುಡಾನ್ನಲ್ಲಿರುವವರೊಂದಿಗೆ ವಿಡೀಯೋ ಕಾಲ್ ಮೂಲಕ ಮಾತನಾಡಿ ಸಂಪೂರ್ಣ ಮಾಹಿತಿ ಪಡೆದುಕೊಂಡರು.
ನಂತರ ಸ್ಥಳೀಯ ಮುಂಡರು, ಸಂಪಕ್ಟದಲ್ಲಿ ಸಿಲುಕಿರುವವರ ಕುಟುಂಬದವರೊಂದಿಗೆ ಚರ್ಚಿಸಿದರು.
ಈ ವೇಳೆ ಗ್ರಾಮದ ಮುಖಂಡರಾದ ನಂಜುಂಡ ಸ್ವಾಮಿ, ಗೋಪಿ, ಸ್ಯಾಂಡಿ, ವಿಜೇಶ್, ಧರ್ಮ, ಪ್ರತಾಪ್ ಮತ್ತಿತರರು ಜಿಲ್ಲಾಧಿಕಾರಿಗಳಿಗೆ ಸಮಸ್ಯೆ ಕುರಿತು ವಿವರಿಸಿದರು.
ಆಯುರ್ವೇದ ಔಷಧ, ಮಸಾಜ್, ಗಿಡಮೂಲಿಕೆಗಳ ವ್ಯಾಪಾರಕ್ಕಾಗಿ ಹುಣಸೂರು ತಾಲೂಕಿನ ಒಟ್ಟು 116 ಮಂದಿ ಹಕ್ಕಿಪಿಕ್ಕಿ ಸಮುದಾಯದ ಹಲವರು ಡಿಸೆಂಬರ್ 2022ರ ಮೊದಲ ವಾರದಲ್ಲಿ ಸುಡಾನ್ ಗೆ ತೆರಳಿದ್ದಾರೆಂದು ಮಾಹಿತಿ ನೀಡಿದರು.
ಯಾವುದೇ ಕಾರಣಕ್ಕೂ ಗಾಳಿ ಸುದ್ದಿಗೆ ಮಹತ್ವ ನೀಡಬೇಡಿ, ಧೈರ್ಯದಿಂದ ಅಲ್ಲೇ ಉಳಿಯುವವರು ಮತ್ತು ವಾಪಸ್ ಬರುವವರ ಬಗ್ಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ ವೇಳೆ ಎಲ್ಲರೂ ವಾಪಸ್ ಬರಲು ಇಚ್ಚಿಸಿದ್ದಾರೆಂದು ಮುಖಂಡ ನಂಜುಂಡಸ್ವಾಮಿ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಂಪರ್ಕಿಸಿ:
ಮಾಹಿತಿ ಪಡೆದು ಮಾತನಾಡಿದ ಜಿಲ್ಲಾಧಿಕಾರಿ, ಸರಕಾರ ಅಲ್ಲಿನ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿದ್ದು, ಸುರಕ್ಷಿತವಾಗಿ ಕರೆತರಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದ್ದು, ಆತಂಕ ಪಡಬೇಡಿ. ಏನೇ ಸಮಸ್ಯೆ ಇದ್ದರೂ ಜಿಲ್ಲಾಧಿಕಾರಿ ಕಚೇರಿಯನ್ನು ಸಂಪರ್ಕಿಸುವಂತೆ ಸಲಹೆ ನೀಡಿದರು.
ಈ ವೇಳೆ ತಹಶೀಲ್ದಾರ್ ಡಾ.ಅಶೋಕ್. ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮುನಿರಾಜು, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಸವರಾಜ್, ವಾರ್ಡನ್ ಲಕ್ಷಣ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಇದ್ದರು.