ಮನೆ ದೇವಸ್ಥಾನ ಬಸವನಗುಡಿಯ ಮಲ್ಲಿಕಾರ್ಜುನಸ್ವಾಮಿ ದೇವಾಲಯ

ಬಸವನಗುಡಿಯ ಮಲ್ಲಿಕಾರ್ಜುನಸ್ವಾಮಿ ದೇವಾಲಯ

0

ಬೆಂಗಳೂರು ಮಹಾನಗರದಲ್ಲಿರುವ ಅತಿ ಪ್ರಾಚೀನ ಶಿವದೇವಾಲಯಗಳ ಪೈಕಿ ಬಸವನಗುಡಿಯ ಬ್ಯೂಗಲ್ ರಾಕ್ ಪಕ್ಕದಲ್ಲಿರುವ ಸನ್ನಿಧಿ ರಸ್ತೆಯ ಮಲ್ಲಿಕಾರ್ಜುನ ಸ್ವಾಮಿ ದೇವಾಲಯವೂ  ಒಂದು.

Join Our Whatsapp Group

ಸುಮಾರು 300 ವರ್ಷಗಳ ಹಿಂದೆ ಇಲ್ಲಿ ಪುಟ್ಟದೊಂದು ಮಂಟಪದಂಥ ಆಲಯವಿತ್ತು. ಇದನ್ನು  ಕ್ರಿ.ಶ. 1710ರ ಸುಮಾರಿನಲ್ಲಿ ಶ್ಯಾನುಭೋಗರಾದ ಅಚ್ಯುತರಾಯರು ನಿರ್ಮಿಸದರೆಂಬ ಉಲ್ಲೇಖವಿದೆ. 1687ರಲ್ಲಿ ಮೊಗಲರ ವಶವಾಗಿದ್ದ ಬೆಂಗಳೂರನ್ನು ಶಿರಾದಲ್ಲಿ ನಡೆದ ಮಾತುಕತೆಯಲ್ಲಿ ಮುಗಲರ ಸುಬೇದಾರನಾಗಿದ್ದ ಖಾಸಿಂ ಖಾನ್ ನಿಂದ ಮೈಸೂರು ಒಡೆಯರಾದ ಚಿಕ್ಕದೇವರಾಯರು 3 ಲಕ್ಷ ಕೊಟ್ಟು ಖರೀದಿಸಿ, ಕೋಟೆ ನಿರ್ಮಿಸಿದ ಬಳಿಕ ನೇಮಿಸಿದ ಶ್ಯಾನುಭೋಗರ ಪೈಕಿ ಅಚ್ಯುತರಾಯರೂ ಒಬ್ಬರೆಂದು ಇತಿಹಾಸ ಸಾರುತ್ತದೆ.

ತದನಂತರ 1799ರಲ್ಲಿ ಬ್ರಿಟಿಷರ ಸೇನಾನಿ ಹ್ಯಾರಿಸ್ ಬೆಂಗಳೂರನ್ನು ತನ್ನ ಕೈವಶ ಮಾಡಿಕೊಂಡು, ಜನ ಪೀಡಕನಾದಾಗ ಭಯಭೀತರಾದ ಜನರು ಬೆಂಗಳೂರಿನಿಂದ ಪಲಾಯನ ಮಾಡಿದರು. ಆ ಸಮಯದಲ್ಲಿ ಊರಿನಲ್ಲಿ ಜನರಿಲ್ಲದೆ ನಿರ್ಜನವಾಯಿತು. ದೇವಾಲಯಗಳು ಪೋಷಣೆಯಿಲ್ಲದಂತಾದವು. ದೇವಾಲಯದ ಸುತ್ತ ಗಿಡಗಂಟಿ ಬೆಳೆದು ಶಿಥಿಲವಾದವು. ಹೀಗೆ ಶಿಥಿಲವಾದ ದೇವಾಲಯಗಳಲ್ಲಿ ಮಲ್ಲಿಕಾರ್ಜುನ ಸ್ವಾಮಿ ದೇವಾಲಯವೂ ಒಂದಾಯ್ತು. ಈ ದೇವಾಲಯದ ಸುತ್ತ ಕಾನನವಿದ್ದ ಕಾರಣ ಮತ್ತಷ್ಟು ಗಿಡ ಬೆಳೆದು ಜನರಿಗೆ ಕಾಣದಂತಾಯಿತು.

ಮತ್ತೆ ಬೆಂಗಳೂರು ಜನ ವಸತಿಯ ತಾಣವಾದ ಬಳಿಕ ೨೦ನೇ ಶತಮಾನದ ಆದಿ ಭಾಗದಲ್ಲಿ ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ವಿಜ್ಞಾನ ಅಧ್ಯಾಪಕರಾಗಿದ್ದ ಬೆಳ್ಳಾವೆ ವೆಂಕಟನಾರಣಪ್ಪನವರು ಶಿಥಿಲವಾಗಿದ್ದ ದೇವಾಲಯದ ಜೀರ್ಣೋದ್ಧಾರಕ್ಕೆ ಮುಂದಾದರು.

ಅದೇ ಸಮಯದಲ್ಲಿ ಹರಾಜು ಹಾಕಲಾದ ಕೋಟೆಯ ಹಳೆಯ ಕಲ್ಲುಗಳನ್ನು ತಂದು, ಆ ಕಲ್ಲುಗಳಿಂದ ಗಟ್ಟಿಮುಟ್ಟಾದ ದೇವಾಲಯ ನಿರ್ಮಾಣ ಮಾಡಿಸಿದರು. ೧೯೦೩ರಲ್ಲಿ ದೇವಾಲಯ ಹೊಸ ರೂಪ ಪಡೆಯಿತು. ವಿಧ್ಯುಕ್ತ ಸಂಪ್ರೋಕ್ಷಣೆಯ ಬಳಿಕ ಪೂಜಾಕೈಂಕರ್ಯಗಳು ನಡೆಯತೊಡಗಿದವು. ನಿತ್ಯ ಪೂಜೆ ಇಲ್ಲಿ ಆರಂಭವಾಯಿತು.

ಬೆಂಗಳೂರು ನರಸಿಂಹರಾಜಾ ಕಾಲೋನಿಯ ಆಚಾರ್ಯಪಾಠಶಾಲೆಯ ಪಕ್ಕದಲ್ಲೇ ಇರುವ ಈ ದೇವಾಲಯದ ಅಭಿವೃದ್ಧಿಗೆ ವೆಂಕಟನಾರಣಪ್ಪನವರು ೪೦ ವರ್ಷಗಳ ಕಾಲ ದುಡಿದರು. ಇಂದು ಇಲ್ಲಿ ಪ್ರಶಾಂತ ವಾತಾವರಣದಲ್ಲಿ ಸಮೃದ್ಧ ಸಸ್ಯರಾಶಿಯ ನಡುವೆ ಸುಂದರ ದೇವಾಲಯವಿದೆ. ದೇವಾಲಯದ ಮುಂದೆ ಅಶ್ವತ್ಥವೃಕ್ಷವಿದ್ದು ಅದರ ಕೆಳಗೆ ನಾಗರ ಕಲ್ಲುಗಳನ್ನು ಪ್ರತಿಷ್ಠಾಪಿಸಲಾಗಿದೆ.

ಪೂರ್ವಾಭಿಮುಖವಾಗಿರುವ ದ್ರಾವಿಡ ಶೈಲಿಯ ಈ ದೇವಾಲಯದ ಮುಂದೆ ಗರುಡಗಂಬವಿದೆ. ಇದಕ್ಕೆ ನೇರವಾಗಿರುವ ಚಚ್ಚೌಕಾಕಾರದ ಪ್ರಧಾನ ಗರ್ಭಗುಡಿಯಲ್ಲಿ ಮಲ್ಲಿಕಾರ್ಜುನ ಸ್ವಾಮಿಯ ಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ಶಿವನ ಎದುರು ನಂದಿಯನ್ನು ಮೂರ್ತಿಯಿದೆ.

ಶಿವಲಿಂಗದ ಗರ್ಭಗುಡಿಯ ಬಲ ಭಾಗದಲ್ಲಿ ಆದಿ ವಂದಿಪ ಗಣಪನ ಗುಡಿಯಿದೆ. ದೇವರ ಎಡಭಾಗದಲ್ಲಿ ತಾಯಿ ಪಾರ್ವತಿಯ (ಭ್ರಮರಾಂಬಾ) ಆಲಯವಿದೆ. ಗಣಪನ ಗುಡಿಯ ಪಕ್ಕದ ಭಿತ್ತಿಯಲ್ಲಿರುವ ಗೂಡಿನಲ್ಲಿ ಅಮೃತಶಿಲೆಯಲ್ಲಿ ಕಡೆಯಲಾದ ಸೂರ್ಯನಾರಾಯಣನ ಮೂರ್ತಿಯಿದೆ. ಇದಕ್ಕೆ ಸರಿಯಾಗಿ ಎದುರು ಭಾಗದಲ್ಲಿ ಅಪರೂಪದ ಶೈಲಿಯಲ್ಲಿರುವ ಲಕ್ಷ್ಮೀನಾರಾಯಣನ ಅಮೃತಶಿಲೆ ಮೂರ್ತಿಯಿದೆ.

ದೇವಾಲಯದ ಹೊರಭಾಗದಲ್ಲಿ ಮೂರು ಪುಟ್ಟ ದೇವಾಲಯಗಳಿವೆ. ದೇವಾಲಯದ ಪ್ರವೇಶದ ಎಡಭಾಗದಲ್ಲಿರುವ ಗುಡಿಯಲ್ಲಿ ಆದಿ ಶಂಕರಾಚಾರ್ಯರ ಮೂರ್ತಿಯನ್ನು ೧೯೮೨ರಲ್ಲಿ ಶೃಂಗೇರಿ ಶಿವಗಂಗಾ ಮಠಾಧೀಶರಾದ ಶ್ರೀ ವಿಶ್ವೇಶ್ವರಾನಂದ ಭಾರತಿ ಸ್ವಾಮೀಜಿ ಅವರ ಸಮ್ಮುಖದಲ್ಲಿ ಪ್ರತಿಷ್ಠಾಪಿಸಲಾಗಿದೆ. ಇದರ ಎದುರು ಭಾಗದಲ್ಲಿ ನವಗ್ರಹಗಳ ಗುಡಿ ಇದೆ. ದೇಗುಲದ ಬಲ ಭಾಗದಲ್ಲಿ ಸುಬ್ರಹ್ಮಣ್ಯಸ್ವಾಮಿ ದೇವಾಲಯವಿದೆ.

ಮಲ್ಲಿಕಾರ್ಜುನ ದೇವಾಲಯದ ಮೇಲೆ ಗಾರೆಯ ಗೋಪುರಗಳಿದ್ದು ಇದರಲ್ಲಿ ಶಿವಪಾರ್ವತಿ, ನಂದಿ, ಗಣೇಶ ಹಾಗೂ ಸುಬ್ರಹ್ಮಣ್ಯನ ಮೂರ್ತಿಗಳಿವೆ.

ಈ ದೇವಾಲಯದಲ್ಲಿ ಪ್ರತಿ ತಿಂಗಳು ಸಂಕಷ್ಟ ಚತುರ್ಥಿ ಪೂಜೆ ನಡೆಯುತ್ತದೆ. ಪ್ರತಿ ತಿಂಗಳು ಬಹುಳ ಮತ್ತು ಶುಕ್ಲ ಪಕ್ಷಗಳ ತ್ರಯೋದಶಿಯಂದು ಪ್ರದೋಷ ಪೂಜೆ ನಡೆಯುವುದು ಈ ದೇವಾಲಯದ ವಿಶೇಷ. ಋಗ್, ಯಜುರ್ ಉಪಾಕರ್ಮಗಳಂದು ಸಹ ಇಲ್ಲಿ ಸಾಮೂಹಿಕ ಯಜ್ಞೋಪವೀತ ಧಾರಣೆ ಕಾರ್ಯಕ್ರಮ ನಡೆಯುತ್ತದೆ. ಶನಿಶಾಂತಿ, ಮೃತ್ಯುಂಜಯ ಹೋಮ ಇತ್ಯಾದಿ ಕಾರ್ಯಕ್ರಮಗಳೂ ಜರುಗುತ್ತವೆ.