ಮನೆ ಕ್ರೀಡೆ ಆಸ್ಟ್ರೇಲಿಯಾ ವಿರುದ್ದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗೆ 15 ಸದಸ್ಯರ ಭಾರತ ತಂಡ...

ಆಸ್ಟ್ರೇಲಿಯಾ ವಿರುದ್ದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗೆ 15 ಸದಸ್ಯರ ಭಾರತ ತಂಡ ಪ್ರಕಟಿಸಿದ ಬಿಸಿಸಿಐ

0

ಹೊಸದಿಲ್ಲಿ: ಆಸ್ಟ್ರೇಲಿಯಾ ವಿರುದ್ದ 2023ರ ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್ ಶಿಪ್ ಫೈನಲ್ ಪಂದ್ಯಕ್ಕೆ 15 ಸದಸ್ಯರ ಭಾರತ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮಂಗಳವಾರ ಪ್ರಕಟಿಸಿದೆ. ದೀರ್ಘಾವಧಿ ಭಾರತ ತಂಡದಲ್ಲಿ ಅವಕಾಶ ಕಳೆದುಕೊಂಡಿದ್ದ ಹಿರಿಯ ಬ್ಯಾಟ್ಸ್ಮನ್ ಅಜಿಂಕ್ಯ ರಹಾನೆ ಇದೀಗ ರಾಷ್ಟ್ರೀಯ ತಂಡದಲ್ಲಿ ಅವಕಾಶ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಮತ್ತೊಂದೆಡೆ ಗಾಯದಿಂದ ಗುಣಮುಖರಾಗುತ್ತಿರುವ ಮಧ್ಯಮ ಕ್ರಮಾಂಕದ ಬ್ಯಾಟ್ಸ್’ಮನ್ ಶ್ರೇಯಸ್ ಅಯ್ಯರ್ ಹಾಗೂ ವೇಗಿ ಜಸ್ ಪ್ರಿತ್ ಬುಮ್ರಾ ಆಯ್ಕೆಗೆ ಅಲಭ್ಯರಾಗಿದ್ದಾರೆ. ಔಟ್ ಆಫ್ ಫಾರ್ಮ್ ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ ಹಾಗೂ ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯ ಜೂನ್ 7 ರಿಂದ 11ರವರೆಗೆ ಲಂಡನ್ನ ದಿ ಓವಲ್ ಮೈದಾನದಲ್ಲಿ ನಡೆಯಲಿದೆ. ಅಂದಹಾಗೆ ಕಳೆದ ಕೆಲ ದಿನಗಳ ಹಿಂದೆ ಕ್ರಿಕೆಟ್ ಆಸ್ಟ್ರೇಲಿಯಾ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗೆ ತನ್ನ ತಂಡವನ್ನು ಪ್ರಕಟಿಸಿತ್ತು. ಇದೀಗ ಬಿಸಿಸಿಐ 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಿದೆ.

ಭಾರತ ಟೆಸ್ಟ್ ತಂಡದಲ್ಲಿ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಕಾರಣ ಅಜಿಂಕ್ಯ ರಹಾನೆ ಅವರು ಒಂದೂವರೆ ವರ್ಷದ ಹಿಂದೆ ತಂಡದಿಂದ ಕೈ ಬಿಡಲಾಗಿತ್ತು. ಇದೀಗ ಅವರು ಚೆನ್ನೈ ಸೂಪರ್ ಕಿಂಗ್ಸ್ ಪರ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರುತ್ತಿದ್ದಾರೆ. ಇಲ್ಲಿಯವರೆಗೂ ಅವರು ಆಡಿದ ಐದು ಪಂದ್ಯಗಳಿಂದ ಎರಡು ಅರ್ಧಶತಕಗಳು ಸೇರಿದಂತೆ 209 ರನ್ ಸಿಡಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ರಹಾನೆ ಅಪಾರ ವಿಶ್ವಾಸದೊಂದಿಗೆ ಬ್ಯಾಟಿಂಗ್ ನಲ್ಲಿ ಕಾಣಿಸುತ್ತಿದ್ದಾರೆ.

ಇದನ್ನು ಗಮನಿಸಿದ ಬಿಸಿಸಿಐ ಆಯ್ಕೆದಾರರು ಅಜಿಂಕ್ಯ ರಹಾನೆ ಕಮ್ ಬ್ಯಾಕ್ ಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಆ ಮೂಲಕ ಆಸ್ಟ್ರೇಲಿಯಾ ವಿರುದ್ದ ಮಹತ್ವದ ಪಂದ್ಯದಲ್ಲಿ ರಹಾನೆ ಅವರು ಗಾಯಾಳು ಶ್ರೇಯಸ್ ಅಯ್ಯರ್ ಅವರ ಐದನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವುದು ಬಹುತೇಕ ಖಚಿತವಾಗಿದೆ.

ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಕಾಣಿಸಿಕೊಂಡಿದ್ದ ಜಯದೇವ್ ಉನಾದ್ಕಟ್ ಹಾಗೂ ವಿಕೆಟ್ ಕೀಪರ್ ಆಗಿ ಕೆ.ಎಸ್ ಭರತ್ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ವಿಕೆಟ್ ಕೀಪರ್ ಬ್ಯಾಕ್ ಅಪ್ ಆಗಿ ಕೆ.ಎಲ್ ರಾಹುಲ್ ಅವರನ್ನು ಟೀಮ್ ಮ್ಯಾನೇಜ್ಮೆಂಟ್ ಪರಿಗಣಿಸಲಿದೆ.

ಉದ್ಘಾಟನಾ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯದಲ್ಲಿಯೂ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ ಆಡಿತ್ತು. ಆದರೆ, ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್ ವಿರುದ್ಧ ಸೋತು ರನ್ನರ್ ಅಪ್ ಗೆ ತೃಪ್ತಿಪಟ್ಟುಕೊಂಡಿತ್ತು. ಇದೀಗ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್ ಇಂಡಿಯಾ ಚೊಚ್ಚಲ ಟೆಸ್ಟ್ ಚಾಂಪಿಯನ್ ಷಿಪ್ ಗೆಲ್ಲಲು ಎದುರು ನೋಡುತ್ತಿದೆ.

WTC ಫೈನಲ್ ಗೆ ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆ.ಎಲ್ ರಾಹುಲ್, ಕೆಎಸ್ ಭರತ್ (ವಿ.ಕೀ), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದುಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನಾದ್ಕಟ್.

WTC ಫೈನಲ್ ಗೆ ಆಸ್ಟ್ರೇಲಿಯಾ ಟೆಸ್ಟ್ ತಂಡ: ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಕಾಟ್ ಬೋಲೆಂಡ್, ಅಲೆಕ್ಸ್ ಕೇರಿ, ಕ್ಯಾಮೆರಾನ್ ಗ್ರೀನ್, ಮಾರ್ಕಸ್ ಹ್ಯಾರಿಸ್, ಜಾಶ್ ಹೇಝಲ್ವುಡ್, ಟ್ರಾವಿಸ್ ಹೆಡ್, ಜಾಶ್ ಇಂಗ್ಲಿಸ್, ಉಸ್ಮಾನ್ ಖವಾಜ, ಮಾರ್ನಸ್ ಲಾಬುಶೇನ್, ನೇಥನ್ ಲಯಾನ್, ಮಿಚೆಲ್ ಮಾರ್ಷ್, ಟಾಡ್ ಮರ್ಫಿ, ಮ್ಯಾಥ್ಯೂ ರೆನ್ಶಾ, ಸ್ಟೀವ್ ಸ್ಮಿತ್ , ಮಿಚೆಲ್ ಸ್ಟಾರ್ಕ್, ಡೇವಿಡ್ ವಾರ್ನರ್.