ಹುಬ್ಬಳ್ಳಿ: ಜಗದೀಶ್ ಶೆಟ್ಟರ್ ಒಬ್ಬ ಬಡಪಾಯಿ,. ಕೇಂದ್ರ, ರಾಜ್ಯ ನಾಯಕರು ಬಂದು ಶೆಟ್ಟರ ಅವರನ್ನು ಏನೇ ಆಗಲಿ ಸೋಲಿಸಬೇಕು ಎನ್ನುತ್ತಿದ್ದಾರೆ. ಲಿಂಗಾಯತ ನಾಯಕರ ಮೂಲಕ ನನ್ನ ವಿರುದ್ಧ ಮಾತನಾಡಿಸುತ್ತಿದ್ದಾರೆ. ಒಡೆದು ಆಳುವ ಕುತಂತ್ರವನ್ನು ಜನರು ನೋಡುತ್ತಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಕೇಂದ್ರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಷ್ಟೇ. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಅಮಿತ ಶಾ, ಬಿ.ಎಸ್.ಯಡಿಯೂರಪ್ಪ, ಸ್ಮೃತಿ ಇರಾನಿ ಸೇರಿದಂತೆ ಎಲ್ಲರೂ ಶೆಟ್ಟರ್ ಅವರನ್ನು ಸೋಲಿಸಬೇಕು ಎಂದು ಹೇಳುತ್ತಿದ್ದಾರೆ. ಬಡಪಾಯಿ ಶೆಟ್ಟರ ಮೇಲೆ ಯಾಕೆ ಇಷ್ಟೊಂದು ಪ್ರಹಾರ ಗೊತ್ತಾಗುತ್ತಿಲ್ಲ ಎಂದರು.
ಬಿಜೆಪಿ ಪಕ್ಷದಲ್ಲಿ ಸಿದ್ದಾಂತ ಉಳಿದಿದೆಯೇ. ಸೈದ್ಧಾಂತಿಕ ವಿರೋಧಿಗಳನ್ನು ಆಪರೇಷನ್ ಕಮಲದ ಮೂಲಕ ಕರೆದುಕೊಂಡು ಸರಕಾರ ರಚನೆ ಮಾಡಲಿಲ್ಲವೆ. ಸಿದ್ಧಾಂತ ವಿರೋಧಿಗಳಿಗೆ ಟಿಕೆಟ್ ನೀಡಿಲ್ಲವೆ. ರೌಡಿ ಶೀಟರ್, ಸಿಡಿ ಸಚಿವರು, ಶಾಸಕರಿಗೆ ಟಿಕೆಟ್ ನೀಡಿದ್ದಾರೆ. ನನ್ನ ಸ್ವಾಭಿಮಾನಕ್ಕೆ ಧಕ್ಷೆಯಾಗಿ ಪಕ್ಷ ತೊರೆದಿದ್ದೇನೆ ಹೊರತು ಅಧಿಕಾರ ಲಾಲಸೆಗಲ್ಲ. ಈಗ ಪಕ್ಷದ ಸೈದ್ಧಾಂತಿಕ ವಿರೋಧ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಪಕ್ಷದಲ್ಲಿ ಸಿದ್ದಾಂತ ಉಳಿದಿದೆಯೇ ಎಂಬುವುದನ್ನು ಮೊದಲು ನೋಡಿಕೊಳ್ಳಿ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ನನ್ನ, ನನ್ನಂತಹ ಹಾಗೂ ಪಕ್ಷದ ಪರಿಸ್ಥಿತಿಗೆ ಬಿ.ಎಲ್. ಸಂತೋಷ ಕಾರಣ ಎಂದು ಟೀಕೆ ಮಾಡಿದ್ದೆ. ಆದರೆ ಇದಕ್ಕೆ ಪ್ರತಿಯಾಗಿ ಅವರೇ ಟೀಕೆ ಮಾಡಬೇಕಿತ್ತು. ಆದರೆ ಯಡಿಯೂರಪ್ಪ ಅವರ ಮೂಲಕ ವಿರುದ್ಧ ಮಾತನಾಡಿಸುತ್ತಿದ್ದಾರೆ. ಒಬ್ಬ ಲಿಂಗಾಯತ ನಾಯಕನ ಮೇಲೆ ಲಿಂಗಾಯತ ನಾಯಕರನ್ನು ಹತ್ತಿಕ್ಕುವ ಕಲಸ ಪಕ್ಷ ಮಾಡುತ್ತಿದೆ.