ಮನೆ ರಾಷ್ಟ್ರೀಯ ಛತ್ತೀಸ್ ಗಢದಲ್ಲಿ ನಕ್ಸಲರ ಅಟ್ಟಹಾಸ: 11 ಮಂದಿ ಪೊಲೀಸರು ಹುತಾತ್ಮ

ಛತ್ತೀಸ್ ಗಢದಲ್ಲಿ ನಕ್ಸಲರ ಅಟ್ಟಹಾಸ: 11 ಮಂದಿ ಪೊಲೀಸರು ಹುತಾತ್ಮ

0

ದಾಂತೇವಾಡ: ಛತ್ತೀಸಗಡದ ದಾಂತೇವಾಡ ಜಿಲ್ಲೆಯಲ್ಲಿ ಬುಧವಾರ ನಕ್ಸಲರು ಅಟ್ಟಹಾಸ ಮೆರೆದಿದ್ದು, ನಕ್ಸಲರು ನಡೆಸಿದ ಸುಧಾರಿತ ಸ್ಫೋಟಕ ಸಾಧನವನ್ನು ಬಳಸಿ ನಡೆಸಿದ  ಸ್ಫೋಟದಲ್ಲಿ 10 ಮಂದಿ ಭದ್ರತಾ ಸಿಬ್ಬಂದಿ ಮತ್ತು ಚಾಲಕ ಸೇರಿದಂತೆ 11 ಮಂದಿ ಮೃತಪಟ್ಟಿದ್ದಾರೆ.

Join Our Whatsapp Group

ಗುಪ್ತಚರ ಮಾಹಿತಿ ಆಧಾರದಲ್ಲಿ ನಕ್ಸಲ ನಿಗ್ರಹ ಕಾರ್ಯಾಚರಣೆ ನಡೆಸಿದ್ದ ಪೊಲೀಸರು, ವಾಪಸಾಗುತ್ತಿದ್ದ ಸಂದರ್ಭದಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ. ಭದ್ರತಾ ಸಿಬ್ಬಂದಿಯ ವಾಹನವನ್ನು ಸ್ಫೋಟಿಸಿ ಹತ್ಯೆ ಮಾಡಲಾಗಿದೆ.

ಜಿಲ್ಲಾ ಮೀಸಲು ಕಾವಲು (ಡಿಆರ್ ಜಿ) ಸಿಬ್ಬಂದಿಯನ್ನು ದಾಂತೇವಾಡ ಜಿಲ್ಲೆಯ ಅರನಪುರದಲ್ಲಿ ಕರೆದೊಯ್ಯುತ್ತಿದ್ದ ವಾಹನವನ್ನು ನಕ್ಸಲರು ಸ್ಫೋಟಿಸಿದ್ದಾರೆ. ಡಿಆರ್ ಜಿ ಪಡೆಯ ಹತ್ತು ಮಂದಿ ಸಿಬ್ಬಂದಿ ಹಾಗೂ ವಾಹನದ ಚಾಲಕ ನಕ್ಸಲ್ ನಿಗ್ರಹ ಕಾರ್ಯಾಚರಣೆ ಬಳಿಕ ವಾಪಸ್ ಹೋಗುತ್ತಿದ್ದರು. ಆಗ ರಸ್ತೆಯಲ್ಲಿ ಹುದುಗಿಸಿಟ್ಟಿದ್ದ ಐಇಡಿಗಳು ಸ್ಫೋಟಿಸಿವೆ.

ಡಿಆರ್ ಜಿ ಮಾವೋವಾದಿಗಳನ್ನು ಹತ್ತಿಕ್ಕುವ ಸಲುವಾಗಿಯೇ ಛತ್ತೀಸಗಡ ಪೊಲೀಸ್ ಇಲಾಖೆ ರೂಪಿಸಿರುವ ವಿಶೇಷ ಪಡೆಯಾಗಿದೆ. ಇದರಲ್ಲಿ ಬಹುತೇಕ ಸ್ಥಳೀಯ ಬುಡಕಟ್ಟು ಜನರೇ ಇದ್ದಾರೆ. ನಕ್ಸಲರು ಅಡಗಿರುವ ಅರಣ್ಯ ಪ್ರದೇಶಗಳ ಭೌಗೋಳಿಕ ಸನ್ನಿವೇಶಗಳ ಬಗ್ಗೆ ತಿಳಿವಳಿಕೆ ಇರುವ ಬುಡಕಟ್ಟು ಜನರಿಗೆ ತರಬೇತಿ ನೀಡಿ ಡಿಆರ್ ಜಿ ಪಡೆಗಳಿಗೆ ಸೇರಿಸಿಕೊಳ್ಳಲಾಗುತ್ತದೆ. ಎಡಪಂಥೀಯ ಉಗ್ರವಾದದ ಪ್ರಮುಖ ನೆಲೆಯಾಗಿರುವ ಬಸ್ಟಾರ್ ನಲ್ಲಿ ಬಂಡುಕೋರರ ವಿರುದ್ಧ ಡಿಆರ್ ಜಿ ಅನೇಕ ಯಶಸ್ವಿ ಕಾರ್ಯಾಚರಣೆಗಳನ್ನು ನಡೆಸಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಛತ್ತೀಸಗಡ ಸಿಎಂ ಬಾಘೇಲ್ ಅವರ ಜತೆ ಮಾತನಾಡಿದ್ದು, ದಾಳಿಯ ವಿವರ ಕೇಳಿದ್ದಾರೆ. ಈ ವಿಚಾರದಲ್ಲಿ ಛತ್ತೀಸಗಡ ಸರ್ಕಾರಕ್ಕೆ ಕೇಂದ್ರದಿಂದ ಸಂಪೂರ್ಣ ಬೆಂಬಲ ನೀಡುವ ಭರವಸೆ ಕೊಟ್ಟಿದ್ದಾರೆ. ಛತ್ತೀಸಗಡ ಐಜಿ ಸುಂದರರಾಜ್ ಅವರು ದಾಳಿ ಕುರಿತಂತೆ ಉನ್ನತ ಅಧಿಕಾರಿಗಳ ಸಭೆ ನಡೆಸಿದ್ದಾರೆ.