ಬೆಂಗಳೂರು : ಅನುಭವಿ ಬ್ಯಾಟರ್ ಅಜಿಂಕ್ಯ ರಹಾನೆ ಕಳೆದುಕೊಂಡಿದ್ದ ತಮ್ಮ ಲಯವನ್ನು ಮರಳಿ ಪಡೆದಿದ್ದಾರೆ. ಹೊಸ ಹುರುಪಿನಲ್ಲಿ ಬ್ಯಾಟ್ ಬೀಸುತ್ತಿರುವ ಬಲಗೈ ಬ್ಯಾಟರ್ 16ನೇ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ರನ್ ಹೊಳೆಯನ್ನೇ ಹರಿಸಿದ್ದಾರೆ. ಸಿಎಸ್ಕೆ ಪರ ಆಡಿರುವ 5 ಪಂದ್ಯಗಳಲ್ಲಿ 199ಕ್ಕೂ ಹೆಚ್ಚಿನ ಅಮೋಘ ಸ್ಟ್ರೈಕ್ರೇಟ್ ಮೂಲಕ 209 ರನ್ ಬಾರಿಸಿದ್ದಾರೆ. ಇದರ ಫಲವಾಗಿ ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್ಷಿಪ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಭಾರತ ಟೆಸ್ಟ್ ತಂಡದಲ್ಲಿ ಮರಳಿ ಸ್ಥಾನ ಲಭ್ಯವಾಗಿದೆ. ಭಾರತ ತಂಡ ಜೂನ್ 7ರಿಂದ 11ರವರೆಗೆ ಆಸ್ಟ್ರೇಲಿಯಾ ಎದುರು ಪೈಪೋಟಿ ನಡೆಸಲಿದೆ.
ಅಂದಹಾಗೆ ಭಾರತ ತಂಡಕ್ಕೆ ಅಜಿಂಕ್ಯ ರಹಾನೆ ಮರಳಿ ಆಯ್ಕೆ ಆಗುವುದಕ್ಕೆ ಎಂ.ಎಸ್ ಧೋನಿ ಕಾರಣ ಎಂಬುದು ಇದೀಗ ಬಹಿರಂಗವಾಗಿದೆ. ಟೈಮ್ಸ್ ಆಫ್ ಇಂಡಿಯಾ ಮಾಡಿರುವ ವರದಿ ಪ್ರಕಾರ ಟೆಸ್ಟ್ ವಿಶ್ವ ಚಾಂಪಿಯನ್ಷಿಪ್ ಫೈನಲ್ ಪಂದ್ಯಕ್ಕೆ ರಹಾನೆ ಅವರನ್ನು ಆಯ್ಕೆ ಮಾಡುವ ಮುನ್ನ ಬಿಸಿಸಿಐ ಸೆಲೆಕ್ಟರ್ಸ್ ಸಿಎಸ್ಕೆ ಕ್ಯಾಪ್ಟನ್ ಎಂ.ಎಸ್ ಧೋನಿ ಅವರ ಸಲಹೆ ಪಡೆದುಕೊಂಡಿದ್ದಾರೆ. ಧೋನಿ ಗ್ರೀನ್ ಸಿಗ್ನಲ್ ಕೊಟ್ಟ ಬಳಿಕವಷ್ಟೇ ರಹಾನೆಗೆ ಭಾರತ ತಂಡದಲ್ಲಿ ಮರಳಿ ಸ್ಥಾನ ಸಿಕ್ಕಿದೆ.
ಕಳಪೆ ಲಯ ಕಾರಣ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಕಳೆದುಕೊಂಡ ಅಜಿಂಕ್ಯ ರಹಾನೆ, ಬಳಿಕ ದೇಶಿ ಕ್ರಿಕೆಟ್ ಗೆ ಮರಳಿ ಮುಂಬೈ ತಂಡದ ಪರ ಎಲ್ಲಾ ಮಾದರಿಯ ಕ್ರಿಕೆಟ್ನಲ್ಲಿ ಆಡಿ ಉತ್ತಮ ಲಯ ಕಂಡುಕೊಂಡಿದ್ದಾರೆ. ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ದ್ವಿಶತಕ ಕೂಡ ಬಾರಿಸಿರುವ ಅಜಿಂಕ್ಯ ರಹಾನೆ, ಇದೀಗ ಐಪಿಎಲ್ 2023 ಟೂರ್ನಿಯಲ್ಲಿ ಸಿಎಸ್ಕೆ ಪರ 3ನೇ ಕ್ರಮಾಂಕದ ಬ್ಯಾಟರ್ ಆಗಿ 5 ಪಂದ್ಯಗಳಲ್ಲಿ 209 ರನ್ ಬಾರಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 200ರಷ್ಟಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ರಹಾನೆ ತಮ್ಮ ಹೊಸ ಸ್ವರೂಪ ಕಂಡುಕೊಂಡಿದ್ದಾರೆ.
ಅಜಿಂಕ್ಯ ರಹಾನೆ ಹೊರತಾಗಿ ಭಾರತ ಟೆಸ್ಟ್ ತಂಡದಲ್ಲಿ ಶಾರ್ದುಲ್ ಠಾಕೂರ್ ಕೂಡ ಸ್ಥಾನ ಪಡೆದುಕೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಗೆ ಶಾರ್ದುಲ್ ಠಾಕೂರ್ ಅವರನ್ನು ಆಯ್ಕೆ ಮಾಡಿರಲಿಲ್ಲ. ಇದೀಗ ಇಂಗ್ಲೆಂಡ್ನ ಸ್ಥಿತಿಗತಿ ಮತ್ತು ಶಾರ್ದುಲ್ ಅವರ ಹಿಂದಿನ ದಾಖಲೆ ಅನುಗುಣವಾಗಿ ತಂಡದಲ್ಲಿ ಮರಳಿ ಸ್ಥಾನ ನೀಡಲಾಗಿದೆ.
ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್ಷಿಪ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಆಯ್ಕೆ ಮಾಡಲಾಗಿರುವ ಭಾರತ ತಂಡ ಹೀಗಿದೆ
ರೋಹಿತ್ ಶರ್ಮಾ (ನಾಯಕ/ ಬ್ಯಾಟರ್), ಶುಭಮನ್ ಗಿಲ್ (ಬ್ಯಾಟರ್), ಚೇತೇಶ್ವರ್ ಪೂಜಾರ (ಬ್ಯಾಟರ್), ವಿರಾಟ್ ಕೊಹ್ಲಿ (ಬ್ಯಾಟರ್), ಅಜಿಂಕ್ಯ ರಹಾನೆ (ಬ್ಯಾಟರ್), ಕೆ.ಎಲ್ ರಾಹುಲ್ (ಬ್ಯಾಟರ್), ಕೆ.ಎಸ್ ಭರತ್ (ವಿಕೆಟ್ಕೀಪರ್/ ಬ್ಯಾಟರ್), ರವಿಚಂದ್ರನ್ ಅಶ್ವಿನ್ (ಆಲ್ರೌಂಡರ್/ ಆಫ್ ಸ್ಪಿನ್ನರ್), ರವೀಂದ್ರ ಜಡೇಜಾ (ಆಲ್ರೌಂಡರ್), ಅಕ್ಷರ್ ಪಟೇಲ್ (ಆಲ್ರೌಂಡರ್), ಶಾರ್ದುಲ್ ಠಾಕೂರ್ (ಆಲ್ರೌಂಡರ್), ಮೊಹಮ್ಮದ್ ಶಮಿ (ವೇಗದ ಬೌಲರ್), ಮೊಹಮ್ಮದ್ ಸಿರಾಜ್ (ವೇಗದ ಬೌಲರ್), ಉಮೇಶ್ ಯಾದವ್ (ವೇಗದ ಬೌಲರ್), ಜಯದೇವ್ ಉನಾದ್ಕಟ್ (ಎಡಗೈ ವೇಗದ ಬೌಲರ್).
ಹೆಚ್ಚುವರಿ ಆಟಗಾರರು: ಋತುರಾಜ್ ಗಾಯಕ್ವಾಡ್ (ಬ್ಯಾಟ್ಸ್ಮನ್), ಸರ್ಫರಾಝ್ ಖಾನ್ (ಬ್ಯಾಟರ್), ಇಶಾನ್ ಕಿಶನ್ (ವಿಕೆಟ್ಕೀಪರ್/ ಬ್ಯಾಟ್ಸ್ಮನ್), ಮುಖೇಶ್ ಕುಮಾರ್ (ವೇಗದ ಬೌಲರ್), ನವದೀಪ್ ಸೈನಿ (ವೇಗದ ಬೌಲರ್).