ಹುಬ್ಬಳ್ಳಿ: ಕಾಂಗ್ರೆಸ್’ನವರು ಹತಾಶರಾಗಿದ್ದಾರೆ. ಕಳೆದ ನೂರು ವರ್ಷದ ಸಂಸ್ಕೃತಿಯನ್ನು ಗಾಳಿಗೆ ತೂರಿದ್ದಾರೆ ಎಂದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.
ಇಲ್ಲಿನ ಆದರ್ಶನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದವರು ಜನರನ್ನು ಗುಲಾಮರಂತೆ ತಿಳಿದುಕೊಂಡಿದ್ದಾರೆ. ಮತದಾರರನ್ನು ಮತಬ್ಯಾಂಕ್ ಅಂತಾ ತಿಳಿದುಕೊಂಡು ಏನು ಬೇಕಾದರೂ ಮಾತಾನಾಡಿದರೆ ನಡೆಯುತ್ತದೆ ಅನ್ನೋ ಅಮಲಿನಲ್ಲಿ ಕಾಂಗ್ರೆಸ್ನವರು ಇದ್ದಾರೆ. ಜನರು ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹರಿಹಾಯ್ದರು.
ವಿಪಕ್ಷ ನಾಯಕ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿದ್ದು ನೋವಾಗಿದೆ. ಅವರು ಕಳೆದ ಐವತ್ತು ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿದ್ದಾರೆ. ಹೀಗಾಗಿ ಕೊನೆಯ ಹಂತದಲ್ಲಿ ಗೌರವಯುತವಾಗಿ ನಡೆದುಕೊಂಡರೆ ಅವರಿಗೆ ಶೋಭೆ ತರುತ್ತದೆ. ಇಲ್ಲದಿದ್ದರೇ ಜನ ಇಷ್ಟು ವರ್ಷ ಏನ್ ಮಾಡಿದ್ದಾರೆ ಎಂದು ಕೇಳುತ್ತಾರೆ ಎಂದರು.
ನರೇಂದ್ರ ಮೋದಿ ಅವರಿಗೆ ಯಾವಾಗ ಯಾವಾಗ ಬೈದಿದ್ದಾರೋ ಆಗೆಲ್ಲ ಮೋದಿ ಅವರ ಮತ ಜಾಸ್ತಿಯಾಗಿದೆ. ಈ ಹಿಂದೆ ಮೋದಿಯವರು ಮುಖ್ಯಮಂತ್ರಿಯಾಗಿದ್ದಾಗ ಅವರನ್ನು ಹೆಚ್ಚು ನಿಂದಿಸಿದ್ದರು. ಆದರೆ ಅವರು ಮೂರು ಬಾರಿ ಗೆದ್ದು ಮುಖ್ಯಮಂತ್ರಿ, ಪ್ರಧಾನಮಂತ್ರಿ ಆಗಿದ್ದಾರೆ. ಇದೀಗ ಖರ್ಗೆ ಅವರ ವಿಷ ಸರ್ಪ ಎಂಬ ಹೇಳಿಕೆ ಜನರ ಭಾವನೆಯನ್ನು ಕೆರಳುಸುತ್ತಿದೆ ಎಂದು ಹರಿಹಾಯ್ದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನನ್ನ ಟಾರ್ಗೆಟ್ ಮಾಡೋದು ಸಹಜ. ಏಕೆಂದರೆ ಅವರ ಮತಬ್ಯಾಂಕ್ ಛಿದ್ರವಾಗಿದೆ. ಅವರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತಬ್ಯಾಂಕ್ ಸರಿದು ಹೋಗಿದೆ. ಹಾಗಾಗಿ ಈಗ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದರು.