ಬೆಂಗಳೂರು: ಜೇಮ್ಸ್ ಚಿತ್ರಕ್ಕೂ ದಿ ಕಾಶ್ಮೀರ್ ಫೈಲ್ಸ್ ಸಿನಿಮಾಗೂ ಯಾವುದೇ ಸಂಬಂಧವಿಲ್ಲ. ದಿ ಕಾಶ್ಮೀರ್ ಫೈಲ್ಸ್ ಚಿತ್ರದಿಂದ ಜೇಮ್ಸ್ ಸಿನಿಮಾಗೆ ತೊಂದರೆಯಿಲ್ಲ ಎಂದು ನಟ ಶಿವರಾಜ್ ಕುಮಾರ್ ಹೇಳಿದ್ದಾರೆ.
ಅವರು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
‘ನಾನು ರಾಜಕಾರಣಿಯಾಗಿ ಈ ಮಾತನ್ನು ಹೇಳುತ್ತಿಲ್ಲ. ಒಬ್ಬ ನಟನಾಗಿ ನಾನು ಈ ಮಾತನ್ನು ಹೇಳುತ್ತಿದ್ದೇನೆ. ಕನ್ನಡ ಸಿನಿಮಾಗೆ ತೊಂದರೆ ಆದರೆ ನಾನು ಮುಂದಿರುತ್ತೇನೆ. ಒಳ್ಳೆಯ ಕಲೆಕ್ಷನ್ ಇದ್ದರೆ ಏಕೆ ಸಿನಿಮಾ ತೆಗೆಯಬೇಕು. ಸಮಸ್ಯೆ ಬಂದಾಗ ಹೋರಾಡಿ ಬಗೆಹರಿಸಿಕೊಳ್ಳಬೇಕಾಗಿದೆ. ನಮ್ಮ ಭಾಷೆ ವಿಚಾರ ಬಂದಾಗ ನಾವು ಮುಂದಿರಬೇಕು’ ಎಂದು ಹೇಳಿದ್ದಾರೆ.
‘ಅಭಿಮಾನಿಗಳು ಯಾರೂ ಆತಂಕಪಡಬೇಕಾದ ಅಗತ್ಯವಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಅವರು ಭರವಸೆ ಕೊಟ್ಟಿದ್ದಾರೆ. ಜೇಮ್ಸ್ ಸಿನಿಮಾಗೆ ಯಾವುದೇ ರೀತಿಯ ಸಮಸ್ಯೆಯಾಗಲ್ಲ. RRR ಚಿತ್ರವನ್ನು ಕನ್ನಡ ಭಾಷೆಯಲ್ಲಿ ರಿಲೀಸ್ ಮಾಡಲು ಹೇಳಿದ್ದೆ. ರಿಲೀಸ್ ಮಾಡೋದು, ಬಿಡೋದು ಅವರಿಗೆ ಬಿಟ್ಟಿದ್ದು. ಅಭಿಮಾನಿಗಳು ಪ್ರತಿಭಟನೆ ಮಾಡುವುದಕ್ಕೆ ಹೋಗಬಾರದು’ ಎಂದು ಶಿವರಾಜ್ಕುಮಾರ್ ಹೇಳಿದ್ದಾರೆ.
ಪುನೀತ್ ರಾಜ್ಕುಮಾರ್ ನಟನೆಯ ‘ಜೇಮ್ಸ್’ ಸಿನಿಮಾ ಮಾ.17ರಂದು ತೆರೆಕಂಡಿತು. ನಾಲ್ಕು ದಿನಕ್ಕೆ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡುವಲ್ಲಿ ಈ ಸಿನಿಮಾ ಯಶಸ್ವಿ ಆಯಿತು ಎಂದು ವರದಿ ಆಗಿದೆ. ಇಂಥ ಚಿತ್ರಕ್ಕೆ ಬೇರೆ ಭಾಷೆಯ ಸಿನಿಮಾಗಳಿಂದ ತೊಂದರೆ ಆಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು.