ಬೆಂಗಳೂರು : ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರನ್ನು ವಿಷಕನ್ಯೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕರೆದಿರುವುದನ್ನು ಪಕ್ಷ ಒಪ್ಪಲ್ಲ. ಅವರ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್ ಅಶ್ವತ್ಥ್ ನಾರಾಯಣ್ ಸ್ಪಷ್ಟಪಡಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ನೀಡಿದ್ದ ಹೇಳಿಕೆಗೆ ಪ್ರತಿಯಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೋನಿಯಾ ಗಾಂಧಿ ಅವರಿಗೆ ವಿಷಕನ್ಯೆ ಎಂದು ಸಂಬೋಧಿಸಿದ್ದಾರೆ. ಯತ್ನಾಳ್ ಬದಲು ಪ್ರಧಾನಿ ಕ್ಷಮೆ ಕೇಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಗ್ರಹಿಸಿದ್ದಾರೆ. ಆದರೆ, ಇದು ಯತ್ನಾಳ್ ಅವರ ವೈಯಕ್ತಿಕ ಹೇಳಿಕೆಯಾಗಿದೆ. ಇದು ಪಕ್ಷದ ಹೇಳಿಕೆಯಲ್ಲ. ಮೋದಿ ವಿರುದ್ಧ ಎಐಸಿಸಿ ಅಧ್ಯಕ್ಷರು ಹೇಳಿಕೆ ನೀಡಿದ್ದಾರೆ. ಹಾಗಾಗಿ ಅದು ಕಾಂಗ್ರೆಸ್ ಪಕ್ಷದ ಹೇಳಿಕೆಯಾಗಲಿದೆ. ಆದರೆ, ಯತ್ನಾಳ್ ಹೇಳಿಕೆ ಪಕ್ಷದ ಹೇಳಿಕೆಯಾಗಲ್ಲ. ಹಾಗಾಗಿ ಪ್ರಧಾನಿ ಮೋದಿ ಕ್ಷಮೆ ಕೇಳುವ ಪ್ರಶ್ನೆಯೇ ಉದ್ಭವವಾಗಲ್ಲ ಎಂದರು.
ಹಾಸನ ಸೇರಿದಂತೆ ರಾಜ್ಯದ ಯಾವ ಕ್ಷೇತ್ರದಲ್ಲಿಯೂ ಯಾವ ಪಕ್ಷದ ಜೊತೆಯೂ ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿಲ್ಲ. ಎಲ್ಲ 224 ಕ್ಷೇತ್ರದಲ್ಲಿಯೂ ಬಿಜೆಪಿ ಪ್ರಬಲ ಹೋರಾಟ ಮಾಡುತ್ತೇವೆ. ಪ್ರೀತಂಗೌಡ ಹೇಳಿಕೆ ಪಕ್ಷದ ಹೇಳಿಕೆಯಲ್ಲ. ನಮಗೆ ಜೆಡಿಎಸ್ ಪಕ್ಷವೇ ಮೊದಲ ಎದುರಾಳಿಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಜೆಡಿಎಸ್ ಗೆ ಹಾಕುವ ಮತ ಬಿಜೆಪಿಗೆ ಹಾಕಿದಂತೆಯೇ. ರಾಷ್ಟ್ರೀಯ ನಾಯಕರ ಮಟ್ಟದಲ್ಲಿ ಹೊಂದಾಣಿಕೆ ಆಗಿದೆ ಎನ್ನುವ ಪ್ರೀತಂಗೌಡ ಹೇಳಿಕೆಗೂ ಪಕ್ಷಕ್ಕೂ ಸಂಬಂಧ ಇಲ್ಲ. ಇದು ಅವರ ವೈಯಕ್ತಿಕ ಹೇಳಿಕೆಯಾಗಿದೆ. 224 ಕ್ಷೇತ್ರದಲ್ಲೂ ನಾವು ಸ್ಪರ್ಧೆ ಮಾಡಿದ್ದು, ಹೋರಾಟ ಮಾಡುತ್ತೇವೆ. ಎಲ್ಲಿಯೂ ಹೊಂದಾಣಿಕೆ ಮಾಡಿಕೊಂಡಿಲ್ಲ. ಜೆಡಿಎಸ್ ಕಾಂಗ್ರೆಸ್ನ ಬಿಟೀಂ ಆಗಿದೆ. ನಾವು ನಂಬರ್ ಒನ್ ವಿರೋಧ ಪಕ್ಷವಾಗಿ ಕಾಂಗ್ರೆಸ್ ಅನ್ನು ಪರಿಗಣಿಸಿದ್ದೇವೆ ಎಂದರು.