ಚಿತ್ರದುರ್ಗ: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಚಿತ್ರದುರ್ಗ ನಗರದಲ್ಲಿ ಬಿಜೆಪಿ ಪಕ್ಷದ ಬೃಹತ್ ಬಹಿರಂಗ ಸಮಾವೇಶವನ್ನು ಮಂಗಳವಾರ ಹಮ್ಮಿಕೊಳ್ಳಲಾಗಿದ್ದು, ಈ ಸಮಾರಂಭದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಲಿದ್ದಾರೆ.
ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಯ 10 ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಚಿತ್ರದುರ್ಗ ನಗರದ ಮುರುಘಾರಾಜೇಂದ್ರ ಕ್ರೀಡಾಂಗಣದಲ್ಲಿ ಸಮಾವೇಶ ಆಯೋಜಿಸಲಾಗಿದ್ದು, ಈಗಾಗಲೇ ಬೃಹತ್ ಪೆಂಡಾಲ್ ಹಾಕಲಾಗಿದೆ. ಚಿತ್ರದುರ್ಗ, ಹೊಸದುರ್ಗ, ಮೊಳಕಾಲ್ಮೂರು, ಚಳ್ಳಕೆರೆ ಹೊಳಲ್ಕರೆ, ಹಿರಿಯೂರು, ಮತ್ತು ದಾವಣಗೆರೆ, ಚನ್ನಗಿರಿ, ಮಾಯಕೊಂಡ, ಜಗಳೂರು ವಿಧಾನಸಭಾ ಕ್ಷೇತ್ರಗಳಿಂದ ಸುಮಾರು ಎರಡೂವರೆ ಲಕ್ಷಕ್ಕೂಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ.
ಇನ್ನು ಈ ಸಮಾವೇಶದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಲಿದ್ದಾರೆ. ಮಾರ್ಗ ಬದಲಾವಣೆ ವಿಮಾನದ ಮೂಲಕ ಚಳ್ಳಕೆರೆ ತಾಲ್ಲೂಕು ಕುದಾಪುರದ ಬಳಿ ಇರುವ ಡಿಆರ್’ಡಿಓಗೆ ಆಗಮಿಸುವ ಪ್ರಧಾನಿಯವರು, ನಂತರ ಹೆಲಿಕಾಪ್ಟರ್ ಮೂಲಕ ಚಿತ್ರದುರ್ಗ ನಗರದ ಓನಕೆ ಓಬವ್ವ ಕ್ರೀಡಾಂಗಣಕ್ಕೆ ಆಗಮಿಸಿ, ಮುರುಘಾರಾಜೇಂದ್ರ ಕ್ರೀಡಾಂಗಣದಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಈ ಹಿನ್ನಲೆಯಲ್ಲಿ ನಗರಕ್ಕೆ ಆಗಮಿಸುವ ಹಾಗೂ ಹೊರ ಹೋಗುವ ವಾಹನಗಳ ರಸ್ತೆ ಮಾರ್ಗಗಳನ್ನು ಬದಲಾಣೆ ಮಾಡಲಾಗಿದೆ. ಸಮಾರಂಭಕ್ಕೆ ಬರುವ ವಾಹನಗಳನ್ನು ಹೊರತುಪಡಿಸಿ, ಚಿತ್ರದುರ್ಗಕ್ಕೆ ಬೆಂಗಳೂರು, ಕಡೆಯಿಂದ ಬರುವ ವಾಹನಗಳು ಕ್ಯಾದಿಗೆರೆಯಿಂದ ಹೊಸ ಬೈಪಾಸ್ ಮೂಲಕ ಸಂಚರಿಸಿ, ಎನ್.ಹೆಚ್.50 ಪಿಳ್ಳೆ ಕೇರನಹಳ್ಳಿ ಮೂಲಕ ಚಿತ್ರದುರ್ಗ ನಗರ ಪ್ರವೇಶಿಸುವುದು.
ದಾವಣಗೆರೆ ಕಡೆಯಿಂದ ಬರುವ ವಾಹನಗಳು ಜೆ.ಎಂ.ಐ.ಟಿ. ಸರ್ಕಲ್ ಮೂಲಕ ನಗರ ಪ್ರವೇಶಿಸುವುದು. ಬೆಂಗಳೂರು, ಚಳ್ಳಕೆರೆ, ಹೊಸಪೇಟೆ, ದಾವಣಗೆರೆ ಕಡೆಗೆ ಚಲಿಸುವ ಕೆ.ಎಸ್.ಆರ್.ಟಿ.ಸಿ, ಮತ್ತು ಇತರ ವಾಹನಗಳು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಿಂದ ಜಿ.ಎಂ.ಐ.ಟಿ, ಸರ್ಕಲ್ ಮೂಲಕ ಸೀಬಾರ ಕ್ರಾಸ್ ಅಥವಾ ಎನ್.ಹೆಚ್.50 ಮೂಲಕ ಹೊಸ ಬೈಪಾಸ್ ರಸ್ತೆ ಸೇರುವುದು.
ಶಿವಮೊಗ್ಗ, ದಾವಣಗೆರೆ ಚಳ್ಳಕೆರೆ, ಬೆಂಗಳೂರು, ಹೊಸಪೇಟೆ ಕಡೆಗೆ ಚಲಿಸುವ ಖಾಸಗಿ ಬಸ್ ಹಾಗೂ ಇತರೆ ವಾಹನಗಳು ಎ.ಪಿ.ಎಂ.ಸಿ. ಮೆದೇಹಳ್ಳಿ ರಸ್ತೆ ಮೂಲಕ ಹಾಯ್ದು ಸೀಬಾರ ಕ್ರಾಸ್ ಅಥವಾ ಎನ್.ಹೆಚ್.50 ಮೂಲಕ ಹೊಸ ಬೈಪಾಸ್ ಸೇರುವುದು. ನಗರದ ಚಳ್ಳಕೆರೆ ಕ್ರಾಸ್ ನಿಂದ ಮದಕರಿ ವೃತ್ತದವರೆಗಿನ ರಸ್ತೆಯಲ್ಲಿ ವಿ.ಐ.ಪಿ, ಪಾಸ್ ಹೊಂದಿದ ವಾಹನಗಳನ್ನು ಹೊರತುಪಡಿಸಿ ಉಳಿದೆಲ್ಲಾ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇನ್ನು ವಾಹನ ನಿಲುಗಡೆ ವ್ಯವಸ್ಥೆ ಕೂಡ ಮಾಡಲಾಗಿದೆ. ಯಾವುದು ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿದೆ.