ಮೈಸೂರು: ವರುಣ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಪರೋಕ್ಷವಾಗಿ ಬಿಜೆಪಿ ಜೊತೆಗೆ ಶಾಮೀಲಾಗಿ ಬಿಜೆಪಿಗೆ ಮತ ಹಾಕಿ ಎಂದು ಪ್ರಚಾರ ಮಾಡುತ್ತಿದೆ ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಸಾಮೂಹಿಕ ನಾಯಕತ್ವದ ಅಡಿ ಕಾಂಗ್ರೆಸ್ ಒಕ್ಕಲಿಗ ಮುಖಂಡರು ರಂಗಸಮುದ್ರದ ಸುಮಂಗಲಿ ಕನ್ವೆನ್ಷನ್ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಒಕ್ಕಲಿಗರ ಬೃಹತ್ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಒಕ್ಕಲಿಗ ಸಮುದಾಯ ಅವರ ಬೆಂಬಲಕ್ಕೆ ನಿಂತು ಸರ್ಕಾರ ನಡೆಸಲು ಸಂಪೂರ್ಣ ಸಹಕಾರ ನೀಡಿದ್ದನ್ನು ಮರೆಯುವ ಹಾಗಿಲ್ಲ. ಒಕ್ಕಲಿಗರು ಸಮಾಜಕ್ಕೆ ಅನ್ನ ನೀಡಿದವರು ಅವರ ಋಣ ಯಾರು ತೀರಿಸಲು ಸಾಧ್ಯವಿಲ್ಲ. ಒಕ್ಕಲಿಗ ಸಮಾಜದ ಜೊತೆಗೆ ಎಲ್ಲ ಜನಾಂಗವು ನಮ್ಮ ತಂದೆಯವರಿಗೆ ಸಂಪೂರ್ಣ ಬೆಂಬಲವನ್ನು ನೀಡುತ್ತಾ ಬಂದಿವೆ. ಇದಕ್ಕೆ ನಾವು ಸದಾ ಚಿರಋಣಿ ಎಂದು ಹೇಳಿದರು.
ಮುಂದುವರೆದು ಮಾತನಾಡಿ, ನಮ್ಮ ಸರಕಾರದ ಅವಧಿಯಲ್ಲಿ ಸಿದ್ದರಾಮಯ್ಯ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು ನಾಮಕರಣ ಮಾಡಿದರು. ಸರಕಾರ ವತಿಯಿಂದ ಕೆಂಪೇಗೌಡರ ಜಯಂತಿ ಆಚರಣೆ ಪ್ರಾರಂಭ ಮಾಡಿದರು. ಒಬ್ಬ ವ್ಯಕ್ತಿ ಎಲ್ಲರ ಜೊತೆ ಬೆರೆತು ಅವರ ಕಷ್ಟಗಳಲ್ಲಿ ಭಾಗಿಯದಾಗ ಮಾತ್ರ ಜನನಾಯಕನಾಗಲು ಸಾಧ್ಯ ಎಂದು ಹೇಳಿ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಒಕ್ಕಲಿಗರ ಸಂಪೂರ್ಣ ಮತಗಳನ್ನು ನೀಡಿ ಬಹುಮತದ ಸರ್ಕಾರ ಸ್ಥಾಪಿಸಲು ಕಾರಣೀಭೂತರಾಗಬೇಕು ಎಂದು ಮನವಿ ಮಾಡಿದರು.
ಸಿದ್ದರಾಮಯ್ಯ ಕರ್ನಾಟಕದ ಅಸ್ಮಿತೆ: ಮಾಜಿ ಸಚಿವ ಎಚ್.ಎಂ.ರೇವಣ್ಣ ಮಾತನಾಡಿ, ಈ ಭಾಗದ ಏಳಿಗೆಗೆ ಸಿದ್ದರಾಮಯ್ಯ ಕೊಡುಗೆ ಅಪಾರವಾಗಿದೆ. ಅವರು ಸರ್ವ ಸಮುದಾಯದ ನಾಯಕರಾಗಿದ್ದಾರೆ. ವರುಣ ಕ್ಷೇತ್ರದಲ್ಲಿ ಸುಮಾರು 50 ವರ್ಷಗಳಲ್ಲಿ ಒಕ್ಕಲಿಗರು ಇಂತಹ ಬೃಹತ್ ಸಭೆ ಮಾಡಿರುವ ಉದಾಹರಣೆಗಳಿಲ್ಲ, ಇದು ಒಂದು ಇತಿಹಾಸದ ಹೊಸ ದಾಖಲೆ ಎಂದು ಹೇಳಿದರು. ನಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಡಾ.ಬಿ.ಜೆ.ವಿಜಯ್ ಕುರ್ಮಾ ಮಾತನಾಡಿ, ಒಕ್ಕಲಿಗರು ಮತ್ತು ಕುರುಬರು ಒಂದೇ ತಾಯಿಯ ಮಕ್ಕಳು, ಇವರಲ್ಲಿ ಯಾವ ಭೇದಭಾವವೂ ಇಲ್ಲ, ಇತಿಹಾಸ ಕೂಡ ಹಾಗೆ ಇದೆ. ಸಿದ್ದರಾಮಯ್ಯನವರು ಒಬ್ಬ ಸೈದ್ಧಾಂತಿಕ ನಿಲುವಿನ ಗಟ್ಟಿತನ ಇರುವ ರಾಜಕಾರಣಿ. ಅಷ್ಟೇ ಅಲ್ಲಾ ಸಿದ್ದರಾಮಯ್ಯ ಕರ್ನಾಟಕದ ಅಸ್ಮಿತೆ ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲೆಯಲ್ಲಿರುವ ಒಕ್ಕಲಿಗ ಸಮುದಾಯದ ಸಂಪೂರ್ಣ ಬೆಂಬಲ ಶ್ರೀ ಸಿದ್ದರಾಮಯ್ಯನವರಿಗೆ ಎಂಬ ಒಂದು ಸಾಲಿನ ನಿರ್ಣಯವನ್ನು ಡಾ.ಬಿ.ಜೆ.ವಿಜಯಕುಮಾರ್ ಓದಿದರು. ಇದಕ್ಕೆ ವೇದಿಕೆಯ ಗಣ್ಯರು ಹಾಗೂ ಸಭೆಯಲ್ಲಿದ್ದ ಭಾಗವಹಿಸಿದ್ದವರು ಕೈ ಎತ್ತುವ ಮೂಲಕ ನಿರ್ಣಯವನ್ನ ಅಂಗೀಕರಿಸಿದರು.
ಸಭೆಯಲ್ಲಿ ಮಾಜಿ ಶಾಸಕರಾದ ಸುನಿತಾ ವೀರಪ್ಪ ಗೌಡ, ಬನ್ನೂರು ಕೃಷ್ಣಪ್ಪ, ಮುಡಾ ಮಾಜಿ ಅಧ್ಯಕ್ಷ ಬಸವೇಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಂಜುಳಾ ರಾಜ್, ಮಹಿಳಾ ಆಯೋಗದ ಮಾಜಿ ಅಧ್ಯಕ್ಷರಾದ ಮಂಜುಳಾ ಮಾನಸ ಸೇರಿ ಮತ್ತಿತರರು ಉಪಸ್ಥಿತರಿದ್ದರು.