ಮನೆ ರಾಜಕೀಯ ಮುಂದಿನ ಚುನಾವಣೆಯೇ ನನ್ನ ಕೊನೆಯ ಚುನಾವಣೆ: ವಿಪಕ್ಷ ನಾಯಕ ಸಿದ್ದರಾಮಯ್ಯ

ಮುಂದಿನ ಚುನಾವಣೆಯೇ ನನ್ನ ಕೊನೆಯ ಚುನಾವಣೆ: ವಿಪಕ್ಷ ನಾಯಕ ಸಿದ್ದರಾಮಯ್ಯ

0

ಮೈಸೂರು: ಮುಂದಿನ ಚುನಾವಣೆಯೇ ನನ್ನ ಕೊನೆಯ ಚುನಾವಣೆ.‌ ನಾನು ಮುಂದೆ ಚುನಾವಣಾ ರಾಜಕೀಯ ಮಾಡುವುದಿಲ್ಲ, ಆದರೆ, ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ತಮ್ಮ ಹುಟ್ಟೂರಾದ ಸಿದ್ದರಾಮನಹುಂಡಿಯ ಮನೆಯಲ್ಲಿ ಮಾದ್ಯಮಗಳ‌ ಜೊತೆ ಮಾತನಾಡಿದ ಅವರು, ಜನ ನನಗೆ ವರುಣಾ, ಚಾಮುಂಡೇಶ್ವರಿ, ಹುಣಸೂರು, ಹೆಬ್ಬಾಳ, ಚಾಮರಾಜಪೇಟೆ, ಕೋಲಾರ, ಬಾದಮಿಯಿಂದ ಸ್ಪರ್ಧೆ ಮಾಡುವಂತೆ ಆಹ್ವಾನ ನೀಡುತ್ತಿದ್ದಾರೆ. ಆದರೆ, ನಾನು ಎಲ್ಲಿಂದ ಸ್ಪರ್ಧೆ ಮಾಡಬೇಕು ಎಂದು ತೀರ್ಮಾನ ಮಾಡಿಲ್ಲ. ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದ್ದು, ಮುಂದೆ ಸೂಕ್ತ ತೀರ್ಮಾನ ಕೈಗೊಳ್ಳುತ್ತೇನೆ ಎಂದರು.

ಚಾಮುಂಡೇಶ್ವರಿ ಕ್ಷೇತ್ರ ನನಗೆ ರಾಜಕೀಯ ಪುನರ್​ ಜನ್ಮ ನೀಡಿದೆ. ಕಳೆದ ಬಾರಿ ಅದೇ ಜನ ನನ್ನನ್ನ ಸೋಲಿಸಿದ್ದರು. ಆದರೆ ಐದಾರು ಬಾರಿ ಚಾಮುಂಡೇಶ್ವರಿ ಕ್ಷೇತ್ರದ ಜನ ನನ್ನನ್ನ ಗೆಲ್ಲಿಸಿದ್ದಾರೆ. ಅದಕ್ಕಾಗಿ ಚಾಮುಂಡೇಶ್ವರಿ ಕ್ಷೇತ್ರವನ್ನ ನಾನು ಯಾವಾಗಲೂ ಮರೆಯುವುದಿಲ್ಲ ಎಂದರು.

ಧಾರ್ಮಿಕ ಕ್ಷೇತ್ರಗಳಲ್ಲಿ ಹಾಗೂ ಕೆಲವು ಪ್ರದೇಶಗಳಲ್ಲಿ ಮುಸ್ಲಿಂ ವ್ಯಾಪಾರಕ್ಕೆ ನಿರ್ಬಂಧ ಹಾಕಿರುವುದು ಸರಿಯಲ್ಲ. ಬಿಜೆಪಿ ಕೆಲವು ವಿವಾದ ಸೃಷ್ಟಿಸಿ ಮತ ಕ್ರೋಢೀಕರಣ ಮಾಡಲು ಯತ್ನಿಸುತ್ತಿದೆ. ಆ ಮೂಲಕ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ವ್ಯಾಪಾರಕ್ಕೆ ನಿರ್ಬಂಧ ಹಾಕುವುದರ ಹಿಂದೆ ಬಿಜೆಪಿ ಅಜೆಂಡಾ ಅಡಗಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ಇಕ್ಕಟಿಗೆ ಸಿಲುಕಿಲ್ಲ.‌ ಬಿಜೆಪಿಯೇ ಇಕ್ಕಟಿಗೆ ಸಿಲುಕಲಿದೆ ಎಂದರು.

ಹಿಜಾಬ್ ವಿವಾದಕ್ಕೆ ಬಿಜೆಪಿಯೇ ಕಾರಣ‌: ಮುಸ್ಲಿಂ ಹೆಣ್ಣು ಮಕ್ಕಳು ಒಂದು ದುಪ್ಪಟ ತಲೆ ಮೇಲೆ ಹಾಕಿಕೊಳ್ಳುತ್ತೇನೆ ಎಂದರೆ ಅದರಲ್ಲಿ ತಪ್ಪೇನು. ಹಿಂದೂ ಹೆಣ್ಣು ಮಕ್ಕಳು ತಲೆಯ ಮೇಲೆ ಬಟ್ಟೆ ಹಾಕಿಕೊಳ್ಳುವುದಿಲ್ಲವೇ, ಸ್ವಾಮೀಜಿಗಳು ತಲೆಯ ಮೇಲೆ ಬಟ್ಟೆ ಹಾಕಿಕೊಳ್ಳುತ್ತಾರೆ. ಅದನ್ನ ನೀವು ಪ್ರಶ್ನೆ ಮಾಡುತ್ತೀರಾ?. ಎಂದು ಪ್ರಶ್ನಿಸಿದರು.

ಇಂತಹ ವಿವಾದ ಸೃಷ್ಟಿಸಿ ಅದನ್ನ ಅರಗಿಸಿಕೊಳ್ಳತ್ತೇನೆ ಎಂದು ಬಿಜೆಪಿಯವರು ಅಂದುಕೊಂಡಿದ್ದಾರೆ. ಆದರೆ, ಜನ ಬುದ್ದಿವಂತರು ಬಿಜೆಪಿ ತಂತ್ರ ಅರ್ಥವಾಗುತ್ತದೆ. ಪರಿಹಾರ ವಿಚಾರದಲ್ಲಿಯೂ ತಾರತಮ್ಯ ಮಾಡುತ್ತಿದೆ. ಇದು ಸಹ ಬಿಜೆಪಿ ಲೆಕ್ಕಾಚಾರವನ್ನ ಬುಡಮೇಲು ಮಾಡುತ್ತದೆ ಎಂದರು.