ಮನೆ ಸುದ್ದಿ ಜಾಲ ಅನುದಾನ ಸಿಗದಿದ್ದರೆ ಎನ್ ಇಪಿ ಅನುಷ್ಠಾನ ಕಷ್ಟ: ಪ್ರೊ.ತಿರುವಾಸಗಂ

ಅನುದಾನ ಸಿಗದಿದ್ದರೆ ಎನ್ ಇಪಿ ಅನುಷ್ಠಾನ ಕಷ್ಟ: ಪ್ರೊ.ತಿರುವಾಸಗಂ

0

ಮೈಸೂರು: ರಾಷ್ಟ್ರೀಯ ಶಿಕ್ಷಣ ನೀತಿಗೆ ಕೇಂದ್ರ ಅಥವಾ ರಾಜ್ಯ ಸರಕಾರಗಳು ವಿವಿಗಳಿಗೆ ಅನುದಾನ ನೀಡದ ಹೊರತು ಇದನ್ನು ಸಮರ್ಥವಾಗಿ ಅನುಷ್ಠಾನಗೊಳಿಸುವುದು ಕಷ್ಟಸಾಧ್ಯ ಎಂದು ಭಾರತದ ವಿಶ್ವವಿದ್ಯಾಲಯಗಳ ಸಂಘದ ಅಧ್ಯಕ್ಷ  ಪ್ರೊ.ತಿರುವಾಸಗಂ ತಿಳಿಸಿದ್ದಾರೆ.

ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ನಡೆದ ವಿಶ್ವವಿದ್ಯಾಲಯ ಕುಲಪತಿಗಳ ಸಮ್ಮೇಳನದಲ್ಲಿ ಸಮಾರೋಪ ಭಾಷಣ ಮಾಡಿದರು. ಎನ್ ಇಪಿ ಅನುಷ್ಠಾನಕ್ಕೆ ಸಾಕಷ್ಟು ಮೂಲ ಸೌಕರ್ಯಸಗಳು ಬೇಕು. ಇದನ್ನು ಒದಗಿಸಲು ವಿವಿಗಳಿಗೆ ವಿಶೇಷ ಅನುದಾನ ಬೇಕಾಗಿದೆ. ಅಲ್ಲದೆ, ಇಂಡಸ್ಟ್ರಿಗಳನ್ನು ಕ್ಯಾಂಪಸಿಗೆ ಕರೆತರಬೇಕು. ಉದ್ಯೋಗಾಧರಿತ ಶಿಕ್ಷಣಕ್ಕೆ ವಿವಿಗಳು ಹೆಚ್ಚಿನ ಒತ್ತು ನೀಡಬೇಕೆಂದರು.

ಬ್ರಿಟನ್, ರಷ್ಯಾ, ಅಮೆರಿಕಾ, ಉಕ್ರೇನ್ ಸೇರಿದಂತೆ ವಿವಿಧ ದೇಶಗಳಲ್ಲಿ ಭಾರತದ 12 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅದೇ ವಿದೇಶದಿಂದ ಭಾರತಕ್ಕೆ ಶಿಕ್ಷಣಕ್ಕೆಂದು 26 ಸಾವಿರ ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಕ್ಕೆ ಯಾಕೆ ಹೋಗುತ್ತಿದ್ದಾರೆ. ಇದಕ್ಕೆ ಏನೆಲ್ಲಾ ಪರಿಹಾರ ಇದೆ ಎಂಬುದರ ಬಗ್ಗೆ ಪರಾಮರ್ಶೆ ಆಗಬೇಕು. ಈ ಸಂಖ್ಯೆ ಅದಲು ಬದಲು ಆಗಬೇಕು ಎಂದು ಆಶಿಸಿದರು.

ಭಾರತದಲ್ಲಿ ಪ್ರತಿವರ್ಷ ವಿದ್ಯಾರ್ಥಿಗಳು ಪದವಿ ಮುಗಿಸುತ್ತಿದ್ದಾರೆ. ಆದರೆ, ಶೇ.18ರಷ್ಟು ಮಂದಿ ಮಾತ್ರ ತಾವು ಓದಿದ್ದಕ್ಕೆ ಕೆಲಸ ಪಡೆದುಕೊಳ್ಳುತ್ತಿದ್ದಾರೆ. ಉಳಿದ ಶೇ.82 ರಷ್ಟು ಮಂದಿ ಉದ್ಯೋಗ ಪಡೆಯಲು ಯಾಕೆ ಸೋಲುತ್ತಿದ್ದಾರೆ. ಇದಕ್ಕೆ ಕಾರಣ ಏನು? ವಿವಿಗಳು ಈ ನಿಟ್ಟಿನಲ್ಲಿ ಏನು ಮಾಡಬಹುದು ಎಂಬುದರ ಬಗ್ಗೆ ಚರ್ಚೆ ನಡೆಯಬೇಕೆಂದರು.

ವಿವಿಗಳು ಕೆಲಸ ಮಾಡಲು ಸಂಪೂರ್ಣ ಸ್ವಾಯತ್ತತೆಯನ್ನು ಸರಕಾರಗಳು ನೀಡಬೇಕು. ಅಲ್ಲದೆ, ಉನ್ನತ ಶಿಕ್ಷಣದಲ್ಲಿ ಖಾಸಗಿ ವಿವಿಗಳು ಪಾತ್ರವೂ ದೊಡ್ಡದಿದೆ. ಭಾರತದಲ್ಲಿ 1800 ವಿವಿಗಳಿದ್ದು, ಇದರಲ್ಲಿ 523 ಡೀಮ್ಡ್ ಹಾಗೂ ಖಾಸಗಿ ವಿವಿಗಳಿವೆ. ಉನ್ನತ ಶಿಕ್ಷಣದಲ್ಲಿ ಶೇ. 20ರಷ್ಟು ಕೊಡುಗೆಯನ್ನು ಖಾಸಗಿ ಹಾಗೂ ಡೀಮ್ಡ್ ವಿವಿಗಳು ನೀಡುತ್ತಿವೆ. ಸಂಶೋಧನೆ ಸೇರಿದಂತೆ ವಿವಿಧ ಸಂಗತಿಗಳ ಬಗ್ಗೆ ಖಾಸಗಿ ವಿವಿಗಳು ಬೆಳಕು ಚೆಲ್ಲುತ್ತಿವೆ. ಹಾಗಾಗಿ ಖಾಸಗಿ ವಿವಿಗಳಿಗೆ ಸರಕಾರಗಳ ಪ್ರೋತ್ಸಾಹ ಸಹಕಾರ ಅಗತ್ಯವಾಗಿ ಬೇಕಿದೆ ಎಂದರು.

ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಎಐಯು ಪ್ರಧಾನ ಕಾರ್ಯದರ್ಶಿ ಡಾ.ಪಂಕಜ್ ಮಿತ್ತಲ್, ಎಎಂಇಟಿ ವಿವಿ ಕುಲಪತಿ ಡಾ.ಜೆ.ರಾಮಚಂದ್ರನ್, ನ್ಯಾ.ಹುಲುವಾಡಿ ಜಿ. ರಮೇಶ್, ನೋಡಲ್ ಅಧಿಕಾರಿ ಪ್ರೊ.ಲೋಕನಾಥ್, ಕುಲಸಚಿವ ಶಿವಪ್ಪ ಮತ್ತಿತರು ಹಾಜರಿದ್ದರು.