ನವದೆಹಲಿ: ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯಲ್ಲಿನ ಎಂಟು ಮಂದಿ ಸಜೀವ ದಹನ ಪ್ರಕರಣವನ್ನು ಬಿಜೆಪಿ ಸದಸ್ಯೆ ರೂಪ ಗಂಗೂಲಿ ಇಂದು ಬೆಳಗ್ಗೆ ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿ ಸಾಮೂಹಿಕ ಹತ್ಯೆ ಪ್ರಕರಣ ಎಂದು ಹೇಳಿದ್ದರಿಂದಾಗಿ ರಾಜ್ಯಸಭೆಯಲ್ಲಿ ಗದ್ದಲ ಉಂಟಾಗಿ ಕೆಲ ಕಾಲ ಕಲಾಪ ಸ್ಥಗಿತಗೊಂಡಿತ್ತು.
ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ರೂಪ ಗಂಗೂಲಿ, ಘಟನೆಯನ್ನು ಸಾಮೂಹಿಕ ಹತ್ಯೆ ಪ್ರಕರಣ ಎಂದು ಬಣ್ಣಿಸಿದರು. ಇದರಿಂದ ಕೆರಳಿದ ಪಶ್ಚಿಮ ಬಂಗಾಳದಲ್ಲಿನ ಆಡಳಿತಾರೂಢ ಟಿಎಂಸಿ ಸದಸ್ಯರು, ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.
ಬಿಜೆಪಿ ಸದಸ್ಯರು ಕೂಡಾ ಪ್ರತಿ ಘೋಷಣೆ ಕೂಗಿದರು. ಗದ್ದಲದ ನಡುವೆ ಉಪ ಸಭಾಪತಿ ಹರಿವಂಶ್, 12-10ರವರೆಗೆ ಕೆಲಕಾಲ ಕಲಾಪವನ್ನು ಸ್ಥಗಿತಗೊಳಿಸಿದರು.
ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ಬೊಗ್ಟುಯಿ ಗ್ರಾಮದಲ್ಲಿ ಟಿಎಂಸಿ ಪಂಚಾಯತ್ ಸದಸ್ಯನ ಕೊಲೆ ನಂತರ ಇಬ್ಬರು ಮಕ್ಕಳು ಸೇರಿದಂತೆ ಎಂಟು ಮಂದಿಯ ಸಜೀವ ದಹನ ಪ್ರಕರಣವನ್ನು ಶುಕ್ರವಾರ ಕೋಲ್ಕತ್ತಾ ಹೈಕೋರ್ಟ್ ಸಿಬಿಐ ತನಿಖೆಗೆ ವಹಿಸಿದೆ. ಹೈಕೋರ್ಟ್ ತೀರ್ಮಾನವನ್ನು ಪ್ರತಿಪಕ್ಷಗಳು ಸ್ವಾಗತಿಸಿವೆ.