ಭಾರತೀಯ ಚುನಾವಣಾ ಆಯೋಗದ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಖರೀದಿಯು ಅಸಮಂಜಸತೆಯಿಂದ ಕೂಡಿದೆ ಎಂದು ಆರೋಪಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿದೆ.
ಚುನಾವಣಾ ವೆಚ್ಚ ಹೆಚ್ಚಾಗಿದ್ದರೂ ಪ್ರಜಾಪ್ರಭುತ್ವಕ್ಕಾಗಿ ಆ ಬೆಲೆಯನ್ನು ತೆರಲೇಬೇಕಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ನೇತೃತ್ವದ ಪೀಠ ಹೇಳಿದೆ.
ಚುನಾವಣಾ ವೆಚ್ಚ ಅಗಾಧ ಪ್ರಮಾಣದ್ದಾಗಿದ್ದು ಅದು ಪ್ರಜಾಪ್ರಭುತ್ವಕ್ಕಾಗಿ ತೆರಲೇಬೇಕಾದ ಬೆಲೆಯಾಗಿದೆ. ಇವಿಎಂಗಾಗಿ ಅಷ್ಟೊಂದು ಹಣವನ್ನು ಹೇಗೆ ಖರ್ಚು ಮಾಡಿದಿರಿ ಎಂದು ನಾವು ಚುನಾವಣಾ ಆಯೋಗವನ್ನು ಈಗ ಕೇಳಲು ಆಗದು ಎಂದು ನ್ಯಾಯಾಲಯ ಹೇಳಿದೆ.
ಇವಿಎಂಗಳನ್ನು ಖರೀದಿಸಲಾಗಿದೆ ಎಂದು ಚುನಾವಣಾ ಆಯೋಗ ಉಲ್ಲೇಖಿಸಿದ್ದರೂ ವಾಸ್ತವದಲ್ಲಿ ಖರೀದಿ ಕಾರ್ಯ ನಡೆದಿಲ್ಲ ಎಂದು ಅರ್ಜಿದಾರರ ಪರ ವಕೀಲರು ಆರೋಪಿಸಿದ್ದರು.
ಅಂತಿಮವಾಗಿ ನ್ಯಾಯಾಲಯವು ಈ ಪ್ರಕರಣವು ಮೂಲಭೂತ ಹಕ್ಕು ಜಾರಿ ಮಾಡುವಂತೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಹಕ್ಕನ್ನು ನೀಡುವ ಸಂವಿಧಾನದ 32ನೇ ವಿಧಿಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಅರ್ಜಿಯನ್ನು ವಜಾಗೊಳಿಸಿತು.