ಮನೆ ರಾಜಕೀಯ ಸುಳ್ಳು ಆರೋಪ ಮಾಡಿದರೆ ಮಾನನಷ್ಟ ಮೊಕದ್ದಮೆ ಹೂಡುವೆ: ಎಂ.ಪಿ.ರೇಣುಕಾಚಾರ್ಯ

ಸುಳ್ಳು ಆರೋಪ ಮಾಡಿದರೆ ಮಾನನಷ್ಟ ಮೊಕದ್ದಮೆ ಹೂಡುವೆ: ಎಂ.ಪಿ.ರೇಣುಕಾಚಾರ್ಯ

0

ಬೆಂಗಳೂರು: ನಕಲಿ ಜಾತಿ ಪ್ರಮಾಣ ಪತ್ರ ಪಡೆದು ನಾನು ಸರ್ಕಾರದ ಸವಲತ್ತು ಪಡೆದಿದ್ದರೆ ದಾಖಲೆಗಳನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಮಾನನಷ್ಟ ಮೊಕದ್ದಮೆ ಹೂಡಬೇಕಾಗುತ್ತದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಕಲಿ ಜಾತಿ ಪ್ರಮಾಣ ಪಡೆದು ಸವಲತ್ತು ಪಡೆದಿಲ್ಲ. ನನ್ನ ಬಗ್ಗೆ ಏನೇ ರಾಜಕೀಯವಾಗಿ ಟೀಕೆ ಮಾಡಿದರೂ ಎದುರಿಸಲು ಸಿದ್ಧ. ಅನಗತ್ಯವಾಗಿ ನನ್ನ ಮಕ್ಕಳ ಬಗ್ಗೆ ಟೀಕೆ ಮಾಡಿದರೆ ಕಾನೂನು ಮೂಲಕ ಉತ್ತರ ಕೊಡಬೇಕಾಗುತ್ತದೆ ಎಂದು ಗುಡುಗಿದರು.

ನನ್ನ ವಿರುದ್ಧ ಆರೋಪ ಮಾಡುವವರು ದಾಖಲೆಗಳಿದ್ದರೆ ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಿರುವುದು ಏಕೆ? ಬುಟ್ಟಿಯಲ್ಲಿ ಹಾವು ಇದೆ ಎಂದು ಬುರುಡೆ ಬಿಡಬೇಡಿ ಎಂದು ತಿರುಗೇಟು ನೀಡಿದರು.

ರಾಜಕೀಯವಾಗಿ ನನ್ನ ವಿರುದ್ಧ ನೀವು ಏನೇ ಟೀಕೆ ಮಾಡಿದರೂ ಅದನ್ನು ರಾಜಕೀಯವಾಗಿ ಎದುರಿಸುತ್ತೇನೆ. ವಿನಾಕಾರಣ ನನ್ನ ಮಗಳು ಇಲ್ಲವೆ ಪುತ್ರನ ಬಗ್ಗೆ ಸುಳ್ಳು ಆರೋಪ ಮಾಡಿದರೆ ಸುಮ್ಮನಿರುವುದಿಲ್ಲ. ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಸವಲತ್ತು ಪಡೆದಿದ್ದರೆ ದಾಖಲೆ ಬಿಡುಗಡೆ ಮಾಡಿ ಎಂದು ಸವಾಲು ಹಾಕಿದರು.

ನನ್ನ ಮಗಳು ನಕಲಿ ಜಾತಿ ಪ್ರಮಾಣ ಕೊಟ್ಟು 40 ಲಕ್ಷ ಶೈಕ್ಷಣಿಕ ಸಾಲ ಪಡೆದಿದ್ದಾರೆಂದು ಕೆಲವರು ಆರೋಪಿಸಿದ್ದಾರೆ. ಅಂತಹ ದಾಖಲೆಗಳಿದ್ದರೆ ನೀವು ಬಿಡುಗಡೆ ಮಾಡಲು ಮೀನಾಮೇಷವೇಕೆ ಎಂದು ಪ್ರಶ್ನಿಸಿದರು.

ನನ್ನ ಮಕ್ಕಳು ಹೈಸ್ಕೂಲ್‍ಗೆ ಹೋಗುವಾಗ ಜಾತಿ ಪ್ರಮಾಣ ಪತ್ರ ಪಡೆದಿದ್ದರು.

ನಾನು ಅಂದೇ ಅದನ್ನು ವಾಪಸ್ ಕೊಟ್ಟಿದ್ದೇನೆ. ನಾನು ಹೊನ್ನಾಳಿ, ನ್ಯಾಮತಿ ಕ್ಷೇತ್ರದಲ್ಲಿ ಜಾತ್ಯತೀತ ವ್ಯಕ್ತಿ. ಪಕ್ಷಭೇದ ಮರೆತು ಜನ ನನ್ನನ್ನು ಮೂರು ಬಾರಿ ಆಯ್ಕೆ ಮಾಡಿದ್ದಾರೆ. ಆರೋಪ ಮಾಡುವವರು ಇದುವರೆಗೂ ಏಕೆ ದಾಖಲೆ ಬಿಡುಗಡೆ ಮಾಡಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.ನನ್ನ ಬಗ್ಗೆ ರಾಜಕೀಯವಾಗಿ ಎಷ್ಟೇ ಟೀಕೆ ಮಾಡಿದರೂ ಎದುರಿಸುತ್ತೇವೆ.

ನನ್ನ ಮಕ್ಕಳ ಬಗ್ಗೆ ಅಲ್ಲ ಎಂದ ಅವರು, ನನ್ನ ಮಗ ಮೆರಿಟ್ ಮೇಲೆ ಎಂ.ಎಸ್.ರಾಮಯ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಸೀಟು ಪಡೆದುಕೊಂಡಿದ್ದ. ಅದೇ ರೀತಿ ಮೆರಿಟ್ ಮೇಲೆ ಕೂಡ ಅಮೆರಿಕದಲ್ಲಿ ಎಂಎಸ್ ವ್ಯಾಸಂಗ ಮಾಡಿದ್ದಾನೆ. ಇದೇ ರೀತಿ ಸುಳ್ಳು ಆರೋಪಗಳನ್ನು ಮಾಡಿದರೆ ಅಂತಹವರಿಗೆ ನ್ಯಾಯಾಲಯದ ಮೂಲಕ ಉತ್ತರ ಕೊಡುತ್ತೇನೆ ಎಂದು ಎಚ್ಚರಿಕೆ ಕೊಟ್ಟರು.