ಮನೆ ಪ್ರಕೃತಿ ಕರ್ನಾಟಕದಲ್ಲಿ ಭಾರೀ ಮಳೆ ಮುನ್ಸೂಚನೆ: ಮತದಾನಕ್ಕೆ ಅಡ್ಡಿಯಾಗಲಿದೆಯೇ ಮೋಚಾ ಚಂಡಮಾರುತ

ಕರ್ನಾಟಕದಲ್ಲಿ ಭಾರೀ ಮಳೆ ಮುನ್ಸೂಚನೆ: ಮತದಾನಕ್ಕೆ ಅಡ್ಡಿಯಾಗಲಿದೆಯೇ ಮೋಚಾ ಚಂಡಮಾರುತ

0

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಮುಂದಿನ ಒಂದು ವಾರ ನಿರಂತರ ಮಳೆಯಾಗಲಿದೆ. ಅದರಲ್ಲೂ ಚುನಾವಣೆ ಮತದಾನದ ದಿನದಿಂದ ಫಲಿತಾಂಶದ ದಿನದವರೆಗೂ ಕರಾವಳಿ, ದಕ್ಷಿಣ ಕರ್ನಾಟಕದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಪಶ್ಚಿಮ ಬಂಗಾಳಕೊಲ್ಲಿಯ ‘ಮೋಚಾ’ ಚಂಡಮಾರುತದ ಪ್ರಭಾವದಿಂದಾಗಿ ರಾಜ್ಯದ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಹವಾಮಾನ ವಿಜ್ಞಾನಿ ಪ್ರಸಾದ್‌ ಅವರು, “ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಇದು ಚಂಡಮಾರುತವಾಗಿ ಬದಲಾಗುವ ಸಾಧ್ಯತೆಯಿದೆ. ಇದರಿಂದ ದಕ್ಷಿಣ ಒಳನಾಡು ಮತ್ತು ಕರಾವಳಿಯಲ್ಲಿ ಐದು ದಿನ ಮಳೆಯ ಪ್ರಮಾಣ ಅಧಿಕವಾಗಲಿದೆ” ಎಂದು ತಿಳಿಸಿದ್ದಾರೆ.

ಮಳೆ ಎದುರಿಸಲು ಚುನಾವಣಾ ಆಯೋಗದ ಸಕಲ ಸಿದ್ಧತೆ.

ವ್ಯಾಪಕ ಮಳೆ ಮುನ್ಸೂಚನೆ ನಡುವೆಯೂ ಚುನಾವಣಾ ಆಯೋಗ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಮಳೆಯಿಂದ ವಿದ್ಯುನ್ಮಾನ ಮತಯಂತ್ರಗಳಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಿದ್ದೇವೆ. ಪ್ಲಾಸ್ಟಿಕ್‌ ಕವರ್‌ಗಳಿಂದ ಮುಚ್ಚಿ ವಿದ್ಯುನ್ಮಾನ ಮತಯಂತ್ರಗಳನ್ನು ಮತಗಟ್ಟೆಗಳಿಗೆ ಸಾಗಿಸಲಿದ್ದೇವೆ ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ತಿಳಿಸಿದ್ದಾರೆ.

‘‘ನಾವು ಮಳೆ ಮುನ್ಸೂಚನೆ, ಅದರ ಸಾಧ್ಯಾಸಾಧ್ಯತೆಗಳ ಬಗ್ಗೆ ಯೋಚನೆ ಮಾಡಿರಲಿಲ್ಲ. ಅಲ್ಲದೆ ಇದು ಬೇಸಿಗೆ ಕಾಲವಾಗಿದ್ದರಿಂದ ಮಳೆಗಾಲದಲ್ಲಿ ಮಾಡಿಕೊಳ್ಳುವಂತಹ ಅಗತ್ಯ ಸಿದ್ಧತೆ ಮಾಡಿಕೊಂಡಿರಲಿಲ್ಲ. ಈಗ ಎಲ್ಲೆಡೆ ಮಳೆ ಬೀಳುತ್ತಿರುವುದರಿಂದ ಇವಿಎಂ ಸೇರಿದಂತೆ ಹಲವು ಉಪಕರಣಗಳ ಸಾಗಾಟಕ್ಕೆ ಸಮಸ್ಯೆ ಎದುರಾಗಬಹುದು. ಆದ್ದರಿಂದ, ಎಲ್ಲಾ ಇವಿಎಂ ಘಟಕಗಳನ್ನು ಪ್ಲಾಸ್ಟಿಕ್‌ ಅಥವಾ ಇನ್ಸುಲೇಶನ್‌ ವಸ್ತುಗಳಿಂದ ಮುಚ್ಚಲಾಗುತ್ತದೆ’’ ಎಂದು ಮುಂಜಾಗ್ರತಾ ಕ್ರಮದ ಬಗ್ಗೆ ಅವರು ತಿಳಿಸಿದ್ದಾರೆ.