ಮನೆ ರಾಜಕೀಯ ಮೈಸೂರಿನಲ್ಲಿ 2905 ಮತಗಟ್ಟೆ: ಮತದಾನಕ್ಕೆ ಸಕಲ ಸಿದ್ಧತೆ

ಮೈಸೂರಿನಲ್ಲಿ 2905 ಮತಗಟ್ಟೆ: ಮತದಾನಕ್ಕೆ ಸಕಲ ಸಿದ್ಧತೆ

0

ಮೈಸೂರು: 2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ ಅಧಿಕೃತ ತೆರೆ ಬಿದ್ದಿದ್ದು, ಮತದಾನ ಹಾಗೂ ಮತ ಎಣಿಕೆಗೆ ಚುನಾವಣಾ ಆಯೋಗ ಹಾಗೂ ಸಿಬ್ಬಂದಿ ಸಕಲ ಸಿದ್ದತೆ ನಡೆಸುತ್ತಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ರಾಜ್ಯಾದ್ಯಂತ ಇರುವ ರೀತಿಯಲ್ಲೇ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಮೇ 10ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ 11 ಕ್ಷೇತ್ರಗಳಲ್ಲಿ ಮತದಾನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಮೈಸೂರು ಜಿಲ್ಲೆಯಲ್ಲಿ ಒಟ್ಟು 26,55,988 ಮಂದಿ ಮತ ಚಲಾಯಿಸಲು ಹಕ್ಕು ಪಡೆದಿದ್ದು, ಇದರಲ್ಲಿ 1,66,633 ಮತದಾರರು ಮೊದಲ ಬಾರಿಗೆ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಇದಕ್ಕಾಗಿ 2,905 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಹೈಲೈಟ್ಸ್‌:

ಮತದಾನದಂದು ರಜೆ ಘೋಷಣೆ.

ಎಡಗೈ ತೋರು ಬೆರಳಿಗೆ ಶಾಹಿ.

ಮತಗಟ್ಟೆಗಳಲ್ಲಿ ನೀರು, ಶೌಚಗೃಹ, ವಿದ್ಯುತ್‌ ವ್ಯವಸ್ಥೆ.

ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಗುಂಪು ಸೇರುವಂತಿಲ್ಲ.

ವೋಟರ್‌ ಹೆಲ್ಪ್‌ಲೈನ್‌

ವೋಟರ್‌ ಹೆಲ್ಪ್‌ಲೈನ್‌ ಆ್ಯಪ್‌ ಮೂಲಕ ಹಾಗೂ ಆಯಾ ವಿಧಾನಸಭೆ ಮತ ಕ್ಷೇತ್ರದ ಚುನಾವಣಾಧಿಕಾರಿಗಳ ಕಾರ್ಯಾಲಯದಲ್ಲಿ ಲಭ್ಯವಿರುವ ಮತದಾರರ ಪಟ್ಟಿಯನ್ನು ಪರಿಶೀಲಿಸಿ ಖಾತ್ರಿ ಪಡಿಸಿಕೊಳ್ಳಬಹುದಾಗಿದೆ. ಮಾದರಿ ನೀತಿ ಸಂಹಿತೆ ಅವಧಿಯಲ್ಲಿ ಅಂದರೆ ಮೇ 8ರ ಸಂಜೆ 6ರಿಂದ ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. ನಂತರ ಆಯಾ ಕ್ಷೇತ್ರದ ಮತದಾರರಲ್ಲದ ರಾಜಕೀಯ ಪಕ್ಷದ ಮುಖಂಡರು, ಕಾರ್ಯಕರ್ತರು, ಪ್ರಚಾರಕರು ಕ್ಷೇತ್ರದಲ್ಲಿ ಇರುವಂತಿಲ್ಲ.

ಮದ್ಯ ನಿಷೇಧ

ಮೈಸೂರು ಜಿಲ್ಲೆಯಲ್ಲಿ ರಾಜ್ಯಾದ್ಯಂತ ಇರುವ ರೀತಿಯಲ್ಲೇ ಮದ್ಯ ನಿಷೇಧ, ನಿಷೇಧಾಜ್ಞೆ ಸೇರಿದಂತೆ ಹಲವು ನಿಬಂಧನೆ, ನಿರ್ಬಂಧಗಳನ್ನು ವಿಧಿಸಲಾಗಿದೆ. ಈ ಕುರಿತ ಸಮಗ್ರ ವಿವರ ಇಲ್ಲಿದೆ. ಶಾಂತಿಯುತವಾಗಿ ಮತದಾನ ನಡೆಸುವ ಉದ್ದೇಶದಿಂದ ಮೇ 8 ರ ಸಂಜೆ 6 ರಿಂದ ಮೇ 10ರ ಮಧ್ಯರಾತ್ರಿವರೆಗೆ ಹಾಗೂ ಮತ ಎಣಿಕೆಯ ದಿನ (ಮೇ 13) ದಂದು ಒಣ ದಿನಗಳೆಂದು ಘೋಷಿಸಿದ್ದು, ಎಲ್ಲಾ ಹೋಟೆಲ್‌, ರೆಸ್ಟೋರೆಂಟ್‌ ಮತ್ತು ಪರವಾನಗಿ ಹೊಂದಿರುವ ಅಂಗಡಿಗಳಲ್ಲಿ ಯಾವುದೇ ರೀತಿಯ ಮದ್ಯಪಾನ ಮಾರಾಟ ನಿಷೇಧಿಸಲಾಗುವುದು. ಅದೇ ರೀತಿ ಮೇ 10ರಂದು ಜಿಲ್ಲೆಯಲ್ಲಿ ನಡೆಯುವ ಎಲ್ಲಾ ಸಂತೆ, ಜಾತ್ರೆ ಮತ್ತು ಉತ್ಸವಗಳನ್ನು ಮುಂದೂಡಲಾಗಿದೆ.