ಮನೆ ಕಾನೂನು ಅತ್ಯಾಚಾರ ಆರೋಪಿಗೆ 23 ವರ್ಷ ಶಿಕ್ಷೆ: ಸುಳ್ಳು ಸಾಕ್ಷಿ ಹೇಳಿದವರ ಮೇಲೂ ಪ್ರಕರಣ

ಅತ್ಯಾಚಾರ ಆರೋಪಿಗೆ 23 ವರ್ಷ ಶಿಕ್ಷೆ: ಸುಳ್ಳು ಸಾಕ್ಷಿ ಹೇಳಿದವರ ಮೇಲೂ ಪ್ರಕರಣ

0

ಕಲಬುರಗಿ: ಯಡ್ರಾಮಿ ತಾಲ್ಲೂಕಿನ ಗ್ರಾಮವೊಂದರಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಅಪರಾಧಿಗೆ 23 ವರ್ಷ ಶಿಕ್ಷೆ ಹಾಗೂ  30 ಸಾವಿರ ದಂಡ ವಿಧಿಸಿದ್ದು, ಮೊದಲು ಸರಿಯಾದ ಸಾಕ್ಷಿ ನುಡಿದು ನಂತರ ಸುಳ್ಳು ಸಾಕ್ಷಿ ಹೇಳಿದವರ ಮೇಲೂ ಪ್ರಕರಣ  ದಾಖಲಿಸುವಂತೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ವಿಶೇಷ ಸೆಷನ್ಸ್‌ ನ್ಯಾಯಾಲಯ ತೀರ್ಪು ನೀಡಿದೆ.

ಮೊದಲು ಸರಿಯಾದ ಸಾಕ್ಷಿ ನುಡಿದು ನಂತರ ನ್ಯಾಯಾಲಯಕ್ಕೆ ಸುಳ್ಳು ಸಾಕ್ಷಿ ಹೇಳಿದ ಮೇರೆಗೆ ನೊಂದ ಬಾಲಕಿ, ಆಕೆಯ ತಂದೆ ಹಾಗೂ ಇನ್ನಿಬ್ಬರು ಸಾಕ್ಷಿದಾರರ ಮೇಲೂ ಪ್ರಕರಣ ದಾಖಲಿಸುವಂತೆ ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.

ಘಟನೆ ವಿವರ:

ಸುನೀಲ ಮಡಿವಾಳಪ್ಪ ಮರಳಪ್ಪ ಶಿಕ್ಷೆಗೆ ಒಳಗಾದವ. 2018ರ ಸೆಪ್ಟೆಂಬರ್‌ನಲ್ಲಿ ಬಾಲಕಿಯು ತನ್ನ ಅಜ್ಜನ ಮನೆಯಲ್ಲಿದ್ದಳು. ಆಗ ಅಕ್ರಮವಾಗಿ ಮನೆಯೊಳಗೆ ನುಗ್ಗಿದ ಸುನೀಲ ಎರಡು ದಿನ ಬಾಲಕಿ ಮೇಲೆ ಅತ್ಯಾಚಾರ ಎಸಗಿದ. ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಮರಿಯಾದೆ ಹಾಳು ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದ.

ನಂತರ, ಬಾಲಕಿ ಮೂರು ತಿಂಗಳ ಗರ್ಭಿಣಿ ಆಗಿರುವುದು ವೈದ್ಯಕೀಯ ತಪಾಸಣೆಯಿಂದ ದೃಢಪಟ್ಟಿತು. ಆಗ ಬಾಲಕಿ ಪೊಲೀಸ್‌ ಠಾಣೆಗೆ ದೂರು ದಾಖಲಿಸಿದ್ದಳು. ಜೇವರ್ಗಿ ಸಿಪಿಐ ಡಿ.ಬಿ.ಪಾಟೀಲ ಅವರು ತನಿಖೆ ಮಾಡಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.‍

ಪ್ರಕರಣದ ವಿಚಾರಣೆ ನಡೆಸಿದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ವಿಶೇಷ ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರಾದ ಹೇಮಾವತಿ ಅವರು ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ, ಅಪರಾಧಿಗೆ 23 ವರ್ಷ ಜೈಲು ಶಿಕ್ಷೆ ಹಾಗೂ  30 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಅಲ್ಲದೇ, ನೊಂದ ಬಾಲಕಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ  3 ಲಕ್ಷ ಪರಿಹಾರ ಹಾಗೂ ದಂಡದ ಹಣದಲ್ಲಿ 25 ಸಾವಿರ ಬಾಲಕಿಗೆ ನೀಡಬೇಕು ಎಂದೂ ಆದೇಶಿಸಿದ್ದಾರೆ.

ಅಂತೆಯೇ ಈ ಪ್ರಕರಣದಲ್ಲಿ ನೊಂದ ಬಾಲಕಿ, ಆಕೆಯ ತಂದೆ ಹಾಗೂ ಇತರ ಇಬ್ಬರು ಸಾಂದರ್ಭಿಕ ಸಾಕ್ಷಿಗಳು ಮೊದಲು ಪೂರಕ ಸಾಕ್ಷಿ ನುಡಿದಿದ್ದರು. ಆದರೆ, ನಂತರದಲ್ಲಿ ನ್ಯಾಯಾಲಯಕ್ಕೆ ಹಾಜರಾಗಿ ಸುಳ್ಳು ಸಾಕ್ಷಿ ನುಡಿದಿದ್ದರು. ಆದ್ದರಿಂದ ನಾಲ್ವರ ಮೇಲೂ ಪ್ರಕರಣ ದಾಖಲಿಸಬೇಕು ಎಂದೂ ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.

ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಶಾಂತವೀರ ಬಿ. ತುಪ್ಪದ ವಾದ ಮಂಡಿಸಿದ್ದರು.