ಮನೆ ಸುದ್ದಿ ಜಾಲ ಇಂದಿನಿಂದ ರಾಜ್ಯದಾದ್ಯಂತ ಎಸ್ಎಸ್ಎಲ್’ಸಿ ಪರೀಕ್ಷೆ ಆರಂಭ: ವಿದ್ಯಾರ್ಥಿಗಳಿಗೆ ಸಿಎಂ ಬೊಮ್ಮಾಯಿ ಶುಭ ಹಾರೈಕೆ

ಇಂದಿನಿಂದ ರಾಜ್ಯದಾದ್ಯಂತ ಎಸ್ಎಸ್ಎಲ್’ಸಿ ಪರೀಕ್ಷೆ ಆರಂಭ: ವಿದ್ಯಾರ್ಥಿಗಳಿಗೆ ಸಿಎಂ ಬೊಮ್ಮಾಯಿ ಶುಭ ಹಾರೈಕೆ

0
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಾದ್ಯಂತ ಇಂದಿನಿಂದ ಎಸ್​ಎಸ್​ಎಲ್​ಸಿ ಪರೀಕ್ಷೆಗಳು ಆರಂಭಗೊಳ್ಳುತ್ತಿದ್ದು, ಮೊದಲ ದಿನ ಪ್ರಥಮ ಭಾಷೆ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳು ಸಮವಸ್ತ್ರಧರಿಸಿ ಪರೀಕ್ಷಾ ಕೊಠಡಿಗೆ ಹಾಜರಾಗಬೇಕಿದ್ದು, ಹಿಜಾಬ್ ಧರಿ ಬಂದರೆ ಪರೀಕ್ಷೆಗೆ ಅವಕಾಶ ಇರುವುದಿಲ್ಲ.

8 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆ ಬರೆಯಲಿರುವ 8,73,846 ವಿದ್ಯಾರ್ಥಿಗಳ ಪೈಕಿ 4,52,732 ಬಾಲಕರು ಮತ್ತು 4,21,110 ಮಂದಿ ಬಾಲಕಿಯರು ಪರೀಕ್ಷೆ ಬರೆಯಲಿದ್ದಾರೆ. 

ಪರೀಕ್ಷೆಗೆ 15,387 ಶಾಲೆಗಳು ನೋಂದಾಯಿಸಿಕೊಂಡಿದ್ದು, 3,444 ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಬೆಳಗ್ಗೆ 10.30ರಿಂದ ಮಧ್ಯಾಹ್ನ 1.45ರವರೆಗೆ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ ಸುತ್ತ 144ನೇ ಸೆಕ್ಷನ್ ಅನ್ವಯ ನಿರ್ಬಂಧ ಆದೇಶ ಜಾರಿ ಮಾಡಲಾಗಿದೆ. 

ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಿಗಿಭದ್ರತೆ ವ್ಯವಸ್ಥೆ ಮಾಡಲಾಗಿದ್ದು, ಪರೀಕ್ಷಾ ಕೊಠಡಿಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೇವೆ ಕಲ್ಪಿಸಲಾಗಿದೆ. 

ಏಪ್ರಿಲ್ 11ರವರೆಗೆ ಪರೀಕ್ಷೆ ನಡೆಯಲಿದೆ. ಪರೀಕ್ಷೆಗಾಗಿ 3,275 ಸಾಮಾನ್ಯ ಕೇಂದ್ರಗಳು, 169 ಖಾಸಗಿ ಕೇಂದ್ರಗಳನ್ನು ಗುರುತಿಸಲಾಗಿದೆ. ಸುಮಾರು 45,289 ಪರೀಕ್ಷಾ ಕೊಠಡಿಗಳಲ್ಲಿ ಸಿದ್ಧತೆ ಪೂರ್ಣಗೊಂಡಿದೆ. ಪರೀಕ್ಷೆಗಾಗಿ 3,444 ಮುಖ್ಯ ಅಧಿಕ್ಷಕರು ಹಾಗೂ 49,817 ಕೊಠಡಿ ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. 

ಕಳೆದ ವರ್ಷ ಕೋವಿಡ್ ಹಿನ್ನೆಲೆ ಮಲ್ಟಿಪಲ್ ಚಾಯ್ಸ್ ಮೂಲಕ ಪರೀಕ್ಷೆ ನಿರ್ವಹಿಸಲಾಗಿತ್ತು. ಪರೀಕ್ಷೆಗೆ ಹಾಜರಾಗಿದ್ದ ಎಲ್ಲ ವಿದ್ಯಾರ್ಥಿಗಳನ್ನು ಸರ್ಕಾರ ಪಾಸ್ ಮಾಡಿತ್ತು.

ಈ ನಡುವೆ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಶಿಕ್ಷಣ ಸಚಿವ ಬಿಸಿ ನಾಗೇಶ್ ಅವರು ಶುಭ ಹಾರೈಸಿದ್ದಾರೆ. 

ಸಿಎಂ, ಶಿಕ್ಷಣ ಸಚಿವರ ಶುಭ ಹಾರೈಕೆ:

ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲಿರುವ ನನ್ನೆಲ್ಲಾ ಪ್ರಿಯ ವಿದ್ಯಾರ್ಥಿಗಳಿಗೆ ಶುಭ ಹಾರೈಕೆಗಳು. ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ. ಯಶಸ್ಸು ನಿಮ್ಮದಾಗಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 

ಪ್ರೀತಿಯ ವಿದ್ಯಾರ್ಥಿಗಳೇ, ಕಳೆದೊಂದು ವರ್ಷದಿಂದ ಓದಿದ್ದು, ಬರೆದು ಅಭ್ಯಾಸಿಸಿರುವುದನ್ನು ಆತ್ಮವಿಶ್ವಾಸದೊಂದಿಗೆ ಬರೆಯುವ ಮೂಲಕ ಮುಂದಿನ ಶೈಕ್ಷಣಿಕ ವರ್ಷದ ಕಡೆ ಕರೆದೊಯ್ಯುವ ಪರೀಕ್ಷೆಯ ಸಮಯ ಬಂದಿದೆ. ನಿರ್ಭಿತಿಯಿಂದ ಪರೀಕ್ಷೆ ಬರೆಯುವ ಮೂಲಕ ನಿಮ್ಮ ಗುರಿಯ ಕಡೆ ಹೆಜ್ಜೆ ಇರಿಸಿ. ಪರೀಕ್ಷೆ ಬರೆಯುತ್ತಿರುವ ಎಲ್ಲರಿಗೂ ಶುಭಾಶಯಗಳು ಎಂದು ಬಿಸಿ ನಾಗೇಶ್ ಹೇಳಿದ್ದಾರೆ.