ಮನೆ ಅಪರಾಧ ಗುಂಡ್ಲುಪೇಟೆ ಬಿಜೆಪಿ ಅಭ್ಯರ್ಥಿ ಪರ 1 ಕೋಟಿ ಬಾಜಿ: ದೂರು ದಾಖಲು

ಗುಂಡ್ಲುಪೇಟೆ ಬಿಜೆಪಿ ಅಭ್ಯರ್ಥಿ ಪರ 1 ಕೋಟಿ ಬಾಜಿ: ದೂರು ದಾಖಲು

0

ಚಾಮರಾಜನಗರ: ಗುಂಡ್ಲುಪೇಟೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಎಸ್.ನಿರಂಜನಕುಮಾರ್ ಗೆದ್ದೇ ಗೆಲ್ಲುತ್ತಾರೆ ಎಂದು ಹೇಳಿ 1 ಕೋಟಿ ಬಾಜಿ ಕಟ್ಟುವ ಸವಾಲು ಹಾಕಿದ್ದ ಪುರಸಭಾ ಸದಸ್ಯ ಕಿರಣ್ ಕುಮಾರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Join Our Whatsapp Group

ಅಲ್ಲದೇ, ಕಿರಣ್ ಮನೆಯಲ್ಲಿ ಪೊಲೀಸ್ ಅಧಿಕಾರಿಗಳು ದಿಢೀರ್ ಶೋಧ ಕಾರ್ಯಾಚರಣೆ ನಡೆಸಿದ್ದು, ₹1.20 ಲಕ್ಷ ನಗದು ವಶಕ್ಕೆ ಪಡೆದಿದ್ದಾರೆ.

50 ಕಾರ್ಯಕರ್ತರು ತಲಾ ₹2 ಲಕ್ಷ ಹಾಕಿ ₹1 ಕೋಟಿ ಸಿದ್ಧ ಮಾಡಿಟ್ಟುಕೊಂಡಿದ್ದು, ನಿರಂಜನಕುಮಾರ್ ಪರವಾಗಿ ಬೆಟ್ ಕಟ್ಟಲು ಸಿದ್ಧರಿದ್ದೇವೆ. ಕಾಂಗ್ರೆಸ್ ಮುಖಂಡರು ಇದಕ್ಕೆ ಸ್ಪಂದಿಸಿ ಸವಾಲು ಸ್ವೀಕರಿಸಬೇಕು’ ಎಂದು ಕಿರಣ್ ಕುಮಾರ್, ನಗದು ಹಣದ ಕಟ್ಟುಗಳ ಮುಂಭಾಗ ನಿಂತಿಕೊಂಡು ವಿಡಿಯೊ ಮಾಡಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಅವರು, ವಿಡಿಯೊ ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು.

ಬಹಿರಂಗವಾಗಿ ಜೂಜಾಟಕ್ಕೆ ಪ್ರಚೋದನೆ ನೀಡಿದ ಆರೋಪದಲ್ಲಿ ಗುಂಡ್ಲುಪೇಟೆ ಚುನಾವಣೆ ಶಾಖೆಯ ಅಧಿಕಾರಿ ಕೆಂಪಲಿಂಗಪ್ಪ ಅವರು ನೀಡಿದ ದೂರಿನ ಅನ್ವಯ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿಸಲಾಗಿದೆ.

ದೂರು ದಾಖಲಾಗುತ್ತಿದ್ದಂತೆಯೇ ಕಿರಣ್ ಕುಮಾರ್ ತಲೆಮರೆಸಿಕೊಂಡಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಗಣೇಶ್ ಪ್ರಸಾದ್ ಗೆಲ್ಲಲಿದ್ದು, ₹3 ಲಕ್ಷ ಬಾಜಿ ಕಟ್ಟುವುದಾಗಿ ವಿಡಿಯೊ ಮಾಡಿದ್ದ ತಾಲ್ಲೂಕಿನ ಮಲ್ಲಯ್ಯನಪುರ ಗ್ರಾಮದ ಮುದ್ದರಾಮೇಗೌಡ ಅವರ ವಿರುದ್ಧವೂ ಪಟ್ಟಣ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಈ ಮಧ್ಯೆ, ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯೇ ಗೆಲ್ಲಲಿದ್ದಾರೆ ಎಂದು ಪಕ್ಷದ ಬೆಂಬಲಿಗರು ಎಂದು ಬಹಿರಂಗವಾಗಿ ಘೋಷಿಸಿ ಜಮೀನು, ನಗದು ಹಣವನ್ನು ಬಾಜಿ ಕಟ್ಟಿ ಸವಾಲು ಹಾಕಿರುವ ಮತ್ತೆರಡು ಪ್ರಕರಣಗಳು ಚಾಮರಾಜನಗರ ಜಿಲ್ಲೆಯಲ್ಲಿ ವರದಿಯಾಗಿವೆ.

ಒಂದು ಪ್ರಕರಣ ಗುಂಡ್ಲುಪೇಟೆಯಲ್ಲಿ ನಡೆದಿದ್ದರೆ, ಇನ್ನೊಂದು ಹನೂರು ಕ್ಷೇತ್ರದಲ್ಲಿ ವರದಿಯಾಗಿದೆ. ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್ ಬೆಂಬಲಿಗರು ಮತ್ತು ಹನೂರಿನಲ್ಲಿ ಜೆಡಿಎಸ್ ಬೆಂಬಲಿಗರು ಸವಾಲು ಹಾಕುತ್ತಿರುವ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಗುಂಡ್ಲುಪೇಟೆ ಕ್ಷೇತ್ರದ ಮಲ್ಲಯ್ಯನಪುರ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು, ಕಾಂಗ್ರೆಸ್ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆ ಎಂದು ಘೋಷಿಸಿ, ಮೂರು ಎಕರೆ ಜಮೀನು ಮತ್ತು ₹75 ಲಕ್ಷ ಬಾಜಿ ಕಟ್ಟಲು ಸಿದ್ಧರಿದ್ದೇವೆ. ಎಂದು ವಿಡಿಯೊದಲ್ಲಿ ಹೇಳಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಇಷ್ಟು ಮೊತ್ತಕ್ಕೆ ಬಾಜಿ ಕಟ್ಟಿದರೆ ಅವರಿಗೆ ಇನ್ನೊವಾ ವಾಹನ ಮತ್ತು ಸ್ಕೂಟಿಯನ್ನು ಉಚಿತವಾಗಿ ನೀಡುವುದಾಗಿಯೂ ಘೋಷಿಸಿದ್ದಾರೆ.

ಇದೇ ವಿಡಿಯೊದಲ್ಲಿರುವ ಇನ್ನೊಬ್ಬರು, ₹50 ಲಕ್ಷದಿಂದ ₹60 ಲಕ್ಷ ಬೆಲೆಬಾಳುವ ಒಂದು ಎಕರೆ ಕೃಷಿ ಭೂಮಿಯನ್ನು ಬಾಜಿ ಕಟ್ಟುವುದಾಗಿ ಹೇಳಿದ್ದಾರೆ.

ಹನೂರು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಎಂ.ಆರ್.ಮಂಜುನಾಥ್ ಗೆಲ್ಲಲಿದ್ದಾರೆ. ಇದಕ್ಕೆ ನನ್ನ ಒಂದು ಎಕರೆ ಜಮೀನು ಬಾಜಿ ಕಟ್ಟುತ್ತೇನೆ. ಬೇರೆ ಪಕ್ಷಗಳ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ಹೇಳುವವರು ಬಾಜಿ ಕಟ್ಟಬಹುದು ಎಂದು ಹನೂರಿನ ನಿವಾಸಿ ರಂಗಸ್ವಾಮಿ ನಾಯ್ಡು ಎಂಬುವವರು ಸವಾಲು ಹಾಕುವ ವಿಡಿಯೊ ತುಣುಕು ಕ್ಷೇತ್ರದಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.