ಮುಂಬೈ : ಕರ್ನಾಟಕ ವಿಧಾನಸಭಾ ಚುನಾವಣೆ ಸ್ಪಷ್ಟ ಸಂದೇಶ ನೀಡಿದೆ. ಇತರ ರಾಜ್ಯಗಳಲ್ಲಿ ಬಿಜೆಪಿಯನ್ನು ಮಣಿಸಲು, ಕರ್ನಾಟಕದ ಮಾದರಿಯನ್ನು ಅಳವಡಿಸಿಕೊಳ್ಳಬಹುದು ಎಂದು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ತಿಳಿಸಿದ್ದಾರೆ.
ಸಿಪಿಐ ನಾಯಕ ಡಿ. ರಾಜಾ ಅವರೊಂದಿಗೆ ಚರ್ಚೆ ನಡಸಿ, ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶದ ಬಗ್ಗೆ ಚರ್ಚಿಸಿದ್ದಾರೆ.
ಬಳಿಕ ಮಾತನಾಡಿದ ಶರದ್ ಪವಾರ್, ಕರ್ನಾಟಕದ ಮಾದರಿಯನ್ನು ಇತರ ರಾಜ್ಯಗಳಲ್ಲಿ ಜಾರಿಗೊಳಿಸುವ ಅಗತ್ಯವಿದೆ ಮತ್ತು ಅದಕ್ಕಾಗಿ ಸಮಾನ ಮನಸ್ಕ ಪಕ್ಷಗಳು ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ರೂಪಿಸಲು ಶ್ರಮಿಸಬೇಕು. ಈ ನಿಟ್ಟಿನಲ್ಲಿ ನಾವು ಒಟ್ಟಾಗಿ ಕೆಲಸ ಮಾಡಲಿದ್ದೇವೆ ಎಂದು ಹೇಳಿದ್ದಾರೆ.
ಬಿಜೆಪಿ ಸೋಲಿನ ಬಗ್ಗೆ ಮಾತನಾಡಿದ ಡಿ. ರಾಜಾ, ರಾಜ್ಯ ಮಟ್ಟದ ತಂತ್ರಗಾರಿಕೆ ಕೆಲಸ ಮಾಡುವುದಿಲ್ಲ. ದೆಹಲಿ ಮಟ್ಟದಲ್ಲಿ ನಾವು ಸಮಾಲೋಚನೆ ನಡೆಸಲಿದ್ದೇವೆ. 2024 ರ ಲೋಕಸಭಾ ಚುನಾವಣೆಯಲ್ಲಿಯೂ ಇದೇ ರೀತಿಯ ಫಲಿತಾಂಶ ಪುನಾರಾವರ್ತನೆ ಆಗಲಿದೆ ಎಂದರು.
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ, ಹೀನಾಯ ಸೋಲು ಕಂಡಿರುವ ಬಿಜೆಪಿ ಬಗ್ಗೆ ಶಿವಸೇನಾ ಉದ್ಧವ್ ಬಣದ ಸಂಜಯ್ ರಾವತ್ ಪ್ರತಿಕ್ರಿಯಿಸಿ, ಈಗ ಮೋದಿ ಅಲೆ ಮುಕ್ತಾಯವಾಗಿದೆ. ಇನ್ನೇನಿದ್ದರೂ ನಮ್ಮ ಅಲೆ ಶುರುವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.