ಮೆಲ್ಬೋರ್ನ್ ಇಂಡಿಯನ್ ಫಿಲಂ ಫೆಸ್ಟಿವಲ್’ಗೆ ಸಿದ್ದು ಪೂರ್ಣಚಂದ್ರ ನಿರ್ದೇಶನದ ಕನ್ನಡದ “ಬ್ರಹ್ಮಕಮಲ’ ಚಿತ್ರ ಆಯ್ಕೆಯಾಗಿದೆ. ಪ್ರಪಂಚದ ಹಲವು ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಇದೂ ಒಂದು.
ಈಗಾಗಲೇ ಫ್ರಾನ್ಸ್’ನಲ್ಲಿ ನಡೆದ “ಈಡಿಪ್ಲೇ ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವಲ್’ನಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ, ಸಿಡ್ನಿಯ :ವಂಡರ್ ಲ್ಯಾಂಡ್ ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವಲ್’ನಲ್ಲಿ ಬೆಸ್ಟ್ ಫೀಚರ್ ಫಿಲಂ ಪ್ರಶಸ್ತಿ, ನೇಪಾಳದ “ಓಲ್ಟ್ ಮಾಂಕ್ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್’ನಲ್ಲೂ ಬೆಸ್ಟ್ ಫೀಚರ್ ಫಿಲಂ ಪ್ರಶಸ್ತಿ ಮತ್ತು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಕೂಡ ಲಭಿಸಿದೆ.
“ಇಂಡೋ ಸಿಂಗಪುರ್ ಫೀಲಂ ಫೆಸ್ಟಿವಲ್’ನಲ್ಲಿ ಅದ್ವಿತಿ ಶೆಟ್ಟಿಗೂ ಅತ್ಯುತ್ತಮ ನಟಿ ಪ್ರಶಸ್ತಿ ಬಂದಿದೆ. ದಾದಾ ಸಾಹೇಬ್ ಫಾಲ್ಕೆ, ಅರುಣೋದಯ, ಕಲಕರಿ, ಚಲನಚಿತ್ರೋತ್ಸವಗಳನ್ನು ಒಳಗೊಂಡಂತೆ ಹಲವು ಚಲನಚಿತ್ರೋತ್ಸವಗಳಿಗೆ ಆಯ್ಕೆಯಾಗಿರುವುದು ಇಡೀ ತಂಡಕ್ಕೆ ಸಂತಸ ತಂದಿದೆ.
ಈ ಕಥೆ ರಾಮನಗರದ ಹತ್ತಿರದ ಒಂದು ಹಳ್ಳಿಯಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ಕಥೆಯನ್ನು ಹೆಣೆಯಲಾಗಿದೆ. ಆ ಕುಟುಂಬ ಮಾಡಿದ ಒಂದು ತಪ್ಪಿನಿಂದಾಗಿ ಆ ಮನೆಯವರೆಲ್ಲರೂ ಈಗಲೂ ಜೈಲಿನಲ್ಲಿದ್ದಾರೆ ಎಂಬುದು ತಂಡದ ಮಾತು.