ಹೊಸ ದಿಲ್ಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದು 9 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಇದೇ ಸಂದರ್ಭದಲ್ಲಿ ಸಂಸತ್ ಭವನದ ನೂತನ ಕಟ್ಟಡ ಇದೇ ತಿಂಗಳ ಅಂತ್ಯಕ್ಕೆ ಉದ್ಘಾಟನೆ ಆಗುವ ಸಾಧ್ಯತೆ ಇದೆ.
ನೂತನ ಸಂಸತ್ ಭವನದ ನಿರ್ಮಾಣ ಕಾರ್ಯ ಇದೀಗ ಅಂತಿಮ ಘಟ್ಟದಲ್ಲಿ ಇದೆ. ಹೀಗಾಗಿ, ಮೇ ತಿಂಗಳ ಕೊನೆಯ ವಾರದಲ್ಲಿ ಈ ಕಟ್ಟಡವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಲಿದ್ದಾರೆ. ಈ ಮೂಲಕ ಮೋದಿ ಸರ್ಕಾರದ 9ನೇ ವರ್ಷಾಚರಣೆ ಕಾರ್ಯಕ್ರಮಗಳೂ ಆರಂಭ ಆಗಲಿವೆ.
9 ವರ್ಷಗಳ ಹಿಂದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೇ 26, 2014ರಂದು ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ತಮ್ಮ ಕಾರ್ಯಾರಂಭ ಮಾಡಿದ್ದರು.
ಇದೀಗ ನೂತನವಾಗಿ ನಿರ್ಮಾಣಗೊಂಡಿರುವ ಸಂಸತ್ ಭವನ ಕಟ್ಟಡವು 4 ಮಹಡಿಗಳ ಕಟ್ಟಡವಾಗಿದೆ. 970 ಕೋಟಿ ರೂ. ವೆಚ್ಚದಲ್ಲಿ ಈ ಕಟ್ಟಡ ನಿರ್ಮಿಸಲಾಗಿದೆ. ಲೋಕಸಭೆಯಲ್ಲಿ 1,224 ಸಂಸದರು ಕುಳಿತುಕೊಳ್ಳುವಷ್ಟು ವಿಶಾಲವಾಗಿ ಈ ಕಟ್ಟಡ ನಿರ್ಮಿಸಲಾಗಿದೆ. ಇದಲ್ಲದೆ ವಿಶಾಲವಾದ ಸಂವಿಧಾನ ಪ್ರಾಂಗಣವಿದೆ. ಭಾರತದ ಪ್ರಜಾತಾಂತ್ರಿಕ ಹಿರಿಮೆ ಸಾರುವ ಅಪರೂಪದ ಕಲಾಕೃತಿಗಳನ್ನು ಇಲ್ಲಿ ಪ್ರದರ್ಶಿಸಲಾಗುವುದು. ಇದಲ್ಲದೆ, ಭೋಜನ ಗೃಹ ಹಾಗೂ ಕಾರುಗಳನ್ನು ನಿಲ್ಲಿಸಲು ಸೂಕ್ತ ಸ್ಥಳಾವಕಾಶ ವ್ಯವಸ್ಥೆ ಕಲ್ಪಿಸಲಾಗಿದೆ.
ನೂತನ ಸಂಸತ್ ಭವನಕ್ಕೆ ಆಗಮಿಸುವ ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರಿಗಾಗಿ ಪ್ರತ್ಯೇಕ ಸಮವಸ್ತ್ರಗಳನ್ನು ರಾಷ್ಟ್ರೀಯ ಫ್ಯಾಷನ್ ಟೆಕ್ನಾಲಜಿ ಸಂಸ್ಥೆಯು ಅಭಿವೃದ್ಧಿಗೊಳಿಸಿದೆ.
ನೂತನ ಸಂಸತ್ ಭವನದಲ್ಲಿ ಮೂರು ಪ್ರಮುಖ ದ್ವಾರಗಳನ್ನು ನಿರ್ಮಿಸಲಾಗಿದೆ. ಜ್ಞಾನ ದ್ವಾರ, ಶಕ್ತಿ ದ್ವಾರ ಹಾಗೂ ಕರ್ಮ ದ್ವಾರಗಳನ್ನು ನಿರ್ಮಿಸಲಾಗಿದ್ದು, ಸಂಸದರು, ವಿಐಪಿ ಸಂದರ್ಶಕರು ಹಾಗೂ ಅಧಿಕಾರಿಗಳಿಗಾಗಿ ಪ್ರತ್ಯೇಕ ದ್ವಾರಗಳು ಇರುತ್ತವೆ.
ಪ್ರಧಾನಿ ಮೋದಿ ಸರ್ಕಾರಕ್ಕೆ 9 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರವ್ಯಾಪಿ 1 ತಿಂಗಳ ಕಾಲ ವಿಶೇಷ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿದೆ. ನೂತನ ಸಂಸತ್ ಭವನದ ಉದ್ಘಾಟನೆಯೊಂದಿಗೆ ಈ ಎಲ್ಲಾ ಅಭಿಯಾನಗಳೂ ಆರಂಭ ಆಗಲಿವೆ.
ಮೇ ಕೊನೆಯ ವಾರದಲ್ಲಿ ನೂತನ ಸಂಸತ್ ಭವನ ಉದ್ಘಾಟನೆ ಆದ ಬಳಿಕ ಮೇ 30 ರಿಂದ ಬಿಜೆಪಿ ವಿಶೇಷ ಪ್ರಚಾರ ಅಭಿಯಾನಗಳು ಶುರುವಾಗಲಿವೆ. ಪ್ರಧಾನಿ ಮೋದಿ ಅವರು ಮೇ 30 ಹಾಗೂ 31 ರಂದು ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ಬಿಜೆಪಿ ರಾಷ್ಟ್ರೀಯ ನಾಯಕರು, ವಿವಿಧ ರಾಜ್ಯಗಳ ಸಿಎಂಗಳು, ಶಾಸಕರು, ಸಂಸದರನ್ನು ಒಳಗೊಂಡಂತೆ ದೇಶದ ಎಲ್ಲ ಲೋಕಸಭಾ ಕ್ಷೇತ್ರಗಳು ಹಾಗೂ ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರಚಾರ ಅಭಿಯಾನ ನಡೆಯಲಿದೆ.