ಮನೆ ಅಪರಾಧ ಪುತ್ರಿಯಿಂದಲೇ ತಂದೆಯ ಕೊಲೆ ಆರೋಪ

ಪುತ್ರಿಯಿಂದಲೇ ತಂದೆಯ ಕೊಲೆ ಆರೋಪ

0

ಮೈಸೂರು: ಕೌಟುಂಬಿಕ ಕಲಹದಿಂದಾಗಿ ಪುತ್ರಿಯೇ ತಂದೆ ಕೊಲೆ ಮಾಡಿದ್ದಾಳೆ ಎಂಬ ದೂರು ಹಿನ್ನೆಲೆಯಲ್ಲಿ ಮಗಳನ್ನ ಬಂಧಿಸಿರುವ ಘಟನೆ ಹುಣಸೂರು ತಾಲೂಕಿನ ಸೀಗರಕಟ್ಟೆ ಗ್ರಾಮದಲ್ಲಿ ನಡೆದಿದೆ.

ಘಟನೆ ವಿವರ: ತಾಲೂಕಿನ ಸೀಗರಕಟ್ಟೆ ಗ್ರಾಮದ ದೇವರಾಜ್ ಮೃತಪಟ್ಟವರು. ಇವರಿಗೆ ಪತ್ನಿ ಹಾಗೂ ಮೂವರು ಹೆಣ್ಣು ಮಕ್ಕಳಿದ್ದು, ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಮಾಡಲಾಗಿದ್ದು, ಪುತ್ರಿ ಅನಿತಾ ಬಾಣಂತನಕ್ಕಾಗಿ 1 ವರ್ಷದ ಹಿಂದೆ ತಂದೆಯ ಮನೆಗೆ ಬಂದಿದ್ದರು. ಈ ಸಂಧರ್ಭದಲ್ಲಿ ತಂದೆ ದೇವರಾಜ್ ಮಗಳ‌ ಮಾಂಗಲ್ಯ ಸರವನ್ನ ಜಮೀನಿನ ಕೆಲಸಕ್ಕಾಗಿ ಗಿರವಿ ಇಟ್ಟು ಬಿಡಿಸಿಕೊಟ್ಟಿರಲಿಲ್ಲ ಎನ್ನಲಾಗಿದೆ.

ವಾಪಸ್ ಗಂಡನ ಮನೆಗೆ ತೆರಳಲು ಮಾಂಗಲ್ಯದ ಸರವನ್ನು ಬಿಡಿಸಿಕೊಡುವ ವಿಚಾರಕ್ಕೆ ಆಗಾಗ ತಂದೆ ಹಾಗೂ ಮಗಳ ನಡುವೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಮಾರ್ಚ್ 25 ರಂದು ತಂದೆ ಹಾಗೂ ಮಗಳ ನಡುವೆ ಜಗಳ‌ವಾಗಿದೆ. ನೆರೆಯವರು ಬಂದು ಬಿಡಿಸಿದರು ಗಲಾಟೆ ನಿಂತಿರಲಿಲ್ಲ. ಮದ್ಯ ವ್ಯಸನಿಯಾಗಿದ್ದ ತಂದೆ ಹಾಗೂ ಅಕ್ಕನ ಗಲಾಟೆಯಿಂದ ಕೋಪಗೊಂಡ ಕಿರಿಯ ಪುತ್ರಿ ಸುನೀತಾ ಎನ್ನುವವರು ಅಡುಗೆ ಮನೆಯಲ್ಲಿದ್ದ ಸೌದೆಯಿಂದ ತಂದೆಯನ್ನು ಬೆದರಿಸಿದ್ದಾರೆ.ಈ ಸಂಧರ್ಭದಲ್ಲಿ ಎಳೆದಾಟ ನಡೆದಿದ್ದು, ಆಯಾ ತಪ್ಪಿ ದೇವರಾಜ್ ಆಕಸ್ಮಿಕವಾಗಿ ಟಿವಿ.ಸ್ಟಾಂಡ್ ಮೇಲೆ ಬಿದ್ದಿದ್ದು, ಅವರ ತಲೆಗೆ ತೀವ್ರವಾಗಿ ಗಾಯವಾಗಿತ್ತು. ನಿಧಾನವಾಗಿ ತಂದೆ ಮೇಲೆ ಏಳುತ್ತಾರೆ ಎಂದು ಅಕ್ಕ, ತಂಗಿ ಒಳಗೆ ಹೋಗಿ ಮಲಗಿದ್ದಾರೆ. ಆದರೆ, ಮಾರನೇ ದಿನ (ಮಾರ್ಚ್ 26) ಬೆಳಗ್ಗೆ ಎದ್ದು ನೋಡಿದಾಗ ದೇವರಾಜ್ ರಕ್ತದ ಮಡುವಿನಲ್ಲಿ ಬಿದ್ದಿದ್ದರಿಂದ ಗಾಬರಿಗೊಂಡು ಪಕ್ಕದಲ್ಲಿ ಇದ್ದ ದೊಡ್ಡಪ್ಪನಿಗೆ ಹೇಳಿ ಕರೆದಿದ್ದಾರೆ. ಅವರು ಬರುವುದರೊಳಗೆ ದೇವರಾಜ್ ಮೃತಪಟ್ಟಿದ್ದರು ಎನ್ನಲಾಗಿದೆ.

ದೇವರಾಜ್ ಸಹೋದರ ಸ್ವಾಮಿಗೌಡ ರವರು ಸುನೀತಾಳೇ ಅವರ ತಂದೆಯನ್ನ ಹೊಡೆದು ಸಾಯಿಸಿದ್ದಾಳೆ ಎಂದು ಹುಣಸೂರು ಗ್ರಾಮಾಂತರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ದೂರಿನ‌ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದು, ಇನ್ಸ್‌ಪೆಕ್ಟರ್ ಚಿಕ್ಕಸ್ವಾಮಿಯವರು ಆರೋಪಿ ಸುನೀತಾಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

ಶನಿವಾರ ಸಂಜೆ ಹುಣಸೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹವನ್ನ ಕುಟುಂಬದವರಿಗೆ ನೀಡಲಾಗಿದೆ.