ಮನೆ ಕಾನೂನು ಭಯದ ವಾತಾವರಣ ಸೃಷ್ಟಿಸಬೇಡಿ: ಇಡಿಗೆ ಸುಪ್ರೀಂಕೋರ್ಟ್ ತಾಕೀತು

ಭಯದ ವಾತಾವರಣ ಸೃಷ್ಟಿಸಬೇಡಿ: ಇಡಿಗೆ ಸುಪ್ರೀಂಕೋರ್ಟ್ ತಾಕೀತು

0

ನವದೆಹಲಿ: ರಾಜ್ಯದಲ್ಲಿ ಭಯದ ವಾತಾವರಣ ಸೃಷ್ಟಿಸಬೇಡಿ ಎಂದು ಸುಪ್ರೀಂ ಕೋರ್ಟ್ ಜಾರಿ ನಿರ್ದೇಶನಾಲಯಕ್ಕೆ (ಇ.ಡಿ)ಮಂಗಳವಾರ ತಾಕೀತು ಮಾಡಿದೆ.

Join Our Whatsapp Group

ಇ.ಡಿ ತನಿಖೆಯನ್ನು ಪ್ರಶ್ನಿಸಿ ಛತ್ತೀಸಗಢ ಮೂಲದ ವ್ಯಕ್ತಿಗಳಿಬ್ಬರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಪ್ರಕರಣದಲ್ಲಿ ತಮ್ಮನ್ನೂ ಕಕ್ಷಿದಾರರನ್ನಾಗಿಸುವಂತೆ ಕೋರಿ ರಾಜ್ಯ ಸರ್ಕಾರವೂ ಅರ್ಜಿ ಸಲ್ಲಿಸಿತ್ತು.

ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಹಾಗೂ ಅಹ್ಸಾನುದ್ದೀನ್ ಅಮಾನುಲ್ಲಾ ಅವರ ದ್ವಿಸದಸ್ಯ ನ್ಯಾಯಪೀಠ ಇವುಗಳ ವಿಚಾರಣೆ ನಡೆಸಿತು.

‘ರಾಜ್ಯದಲ್ಲಿ ನಡೆದಿದೆ ಎನ್ನಲಾಗಿರುವ ₹2,000 ಕೋಟಿ ಮೊತ್ತದ ಅಬಕಾರಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಭೂಪೇಶ್ ಬಘೆಲ್ ಅವರನ್ನು ಸಿಲುಕಿಸಲು ಇ.ಡಿ ಕುತಂತ್ರ ನಡೆಸುತ್ತಿದೆ. ಇದಕ್ಕಾಗಿ ಅಬಕಾರಿ ಇಲಾಖೆಯ ಅಧಿಕಾರಿಗಳು ಹಾಗೂ ಅವರ ಕುಟುಂಬದ ಸದಸ್ಯರಿಗೆ ಬಂಧನದ ಬೆದರಿಕೆ ಒಡ್ಡುತ್ತಿದೆ’ ಎಂದು ಛತ್ತೀಸಗಢ ಸರ್ಕಾರ ಆರೋಪಿಸಿತು.

ರಾಜ್ಯ ಸರ್ಕಾರದ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಹಿರಿಯ ವಕೀಲ ಕಪಿಲ್ ಸಿಬಲ್, ‘ಚುನಾವಣೆ ಸಮೀಪಿಸುತ್ತಿರುವ ಕಾರಣದಿಂದ ಈ ರೀತಿಯ ಬೆದರಿಕೆ ತಂತ್ರಗಳನ್ನು ಅನುಸರಿಸಲಾಗುತ್ತಿದೆ. ತನಿಖಾ ಸಂಸ್ಥೆಯ ಈ ನಡೆ ಆಘಾತಕಾರಿಯಾದುದು. ಸಂಸ್ಥೆಯು ಹದ್ದು ಮೀರಿ ವರ್ತಿಸುತ್ತಿದೆ ಎಂದು ಹೇಳಿದರು.

ಇ.ಡಿ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ಅವರು ಸಿಬಲ್ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದರು. ಜಾರಿ ನಿರ್ದೇಶನಾಲಯವು ರಾಜ್ಯದಲ್ಲಿ ನಡೆದಿರುವ ಹಗರಣದ ತನಿಖೆ ನಡೆಸುತ್ತಿರುವುದಾಗಿ ಅವರು ಹೇಳಿದರು.

ಆಗ ನ್ಯಾಯಪೀಠ, ಭಯದ ವಾತಾವರಣ ಸೃಷ್ಟಿಸಬೇಡಿ. ನಿಮ್ಮ (ಇ.ಡಿ) ಈ ಬಗೆಯ ವರ್ತನೆಯಿಂದಾಗಿ ನಿಜವಾದ ಪ್ರಕರಣವನ್ನೂ ಸಂಶಯದಿಂದಲೇ ನೋಡುವಂತಾಗುತ್ತದೆ ಎಂದು ತನಿಖಾ ಸಂಸ್ಥೆಗೆ ಮೌಖಿಕ ಎಚ್ಚರಿಕೆ ನೀಡಿತು.

ಇ.ಡಿ ಅಧಿಕಾರಿಗಳು ತಮ್ಮ ಜೊತೆಗೆ ಕುಟುಂಬದ ಸದಸ್ಯರನ್ನೂ ಬೆದರಿಸುತ್ತಿರುವುದಾಗಿ ಅಬಕಾರಿ ಇಲಾಖೆಯ ಅಧಿಕಾರಿಗಳೇ ದೂರಿದ್ದಾರೆ.

ತನಿಖೆ ವೇಳೆ ತಮಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿರುವುದಾಗಿಯೂ ಅವರು ಆರೋಪಿಸಿದ್ದಾರೆ. ಇ.ಡಿ ಕೈಗೊಂಡಿರುವ ಕ್ರಮದಿಂದಾಗಿ ಆಡಳಿತವು ನಿಷ್ಕ್ರಿಯಗೊಂಡಿದೆ. ರಾಜ್ಯದಲ್ಲಿ ಕಾನೂನು–ಸುವ್ಯವಸ್ಥೆಯ ಸಮಸ್ಯೆ ತಲೆದೋರಿದೆ ಎಂದು ರಾಜ್ಯ ಸರ್ಕಾರ ಅರ್ಜಿಯಲ್ಲಿ ದೂರಿದೆ.

ಮುಖ್ಯಮಂತ್ರಿ ಹಾಗೂ ರಾಜ್ಯದ ಇತರ ಉನ್ನತ ಅಧಿಕಾರಿಗಳನ್ನು ಪ್ರಕರಣದಲ್ಲಿ ಸಿಲುಕಿಸುವ ಉದ್ದೇಶದಿಂದ ತಾವು ಸಿದ್ಧಪಡಿಸಿರುವ ಹೇಳಿಕೆಗೆ ಸಹಿ ಮಾಡುವಂತೆ ಇ.ಡಿ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ. ಸಹಿ ಮಾಡದಿದ್ದರೆ ಪ್ರಕರಣದಲ್ಲಿ ಸಿಲುಕಿಸುವುದಾಗಿ ಅವರು ಅಬಕಾರಿ ಅಧಿಕಾರಿಗಳಿಗೆ ಹೆದರಿಸಿದ್ದಾರೆ. ಪ್ರಭಾವಿ ರಾಜಕೀಯ ಮುಖಂಡರ ಆಣತಿಯಂತೆ ಇ.ಡಿ ಕೆಲಸ ಮಾಡುತ್ತಿದೆ. ತನಿಖೆಯು ಪಕ್ಷಪಾತದಿಂದ ಕೂಡಿದೆ ಎಂದೂ ರಾಜ್ಯ ಸರ್ಕಾರ ಆರೋಪಿಸಿದೆ.

ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿ ಸಂಬಂಧ ಪ್ರತಿಕ್ರಿಯೆ ಸಲ್ಲಿಸುವಂತೆ ನ್ಯಾಯಾಲಯವು ಜಾರಿ ನಿರ್ದೇಶನಾಯಲಕ್ಕೆ ಸೂಚಿಸಿದೆ.