ತಾಂಡವಪುರ: ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರನ್ನು ಕಾಂಗ್ರೆಸ್ ಪಕ್ಷದ ವರಿಷ್ಠರು ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು ಕಡಕೋಳ ಬೀರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಿದ್ದರಾಮಯ್ಯನವರಿಗೆ ಶುಭ ಕೋರಿದರು.
ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ತಾಂಡವಪುರ ಗ್ರಾಮ ಪಂಚಾಯತಿಯ ಅಧ್ಯಕ್ಷೆ ನಾಗವೇಣಿ ರಾಜು ಹಾಗೂ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ಹಾಲಿ ಸದಸ್ಯ ಬಿ ಶಿವಣ್ಣರವರ ನೇತೃತ್ವದಲ್ಲಿ ಕಡಕೋಳ ಬಳಿ ಇರುವ ಬೀರೇಶ್ವರ ದೇವಾಲಯದಲ್ಲಿ ಸಿದ್ದರಾಮಯ್ಯನವರ ಹೆಸರಲ್ಲಿ ಅರ್ಚನೆ ಮಾಡಿ ಪೂಜೆ ಸಲ್ಲಿಸಿ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ಬಿ ಶಿವಣ್ಣ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಸಿದ್ದರಾಮಯ್ಯನವರ ಜನಪ್ರಿಯತೆ ಹಾಗೂ ಅವರು ನೀಡಿದಂತ ಉತ್ತಮ ಆಡಳಿತವನ್ನು ಮನಗಂಡು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿ ಆಗಿ ಘೋಷಣೆ ಮಾಡಿರುವುದಕ್ಕೆ ನಮಗೆ ತುಂಬಾ ಸಂತೋಷವಾಗಿದೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಲು ಕಾರಣಕರ್ತರಾದ ಪಕ್ಷದ ವರಿಷ್ಠರಾದ ಮಲ್ಲಿಕಾರ್ಜುನ ಖರ್ಗೆ ರಾಹುಲ್ ಗಾಂಧಿ ಸೋನಿಯಾ ಗಾಂಧಿ ಪ್ರಿಯಾಂಕ ಗಾಂಧಿ ಹಾಗೂ ಪಕ್ಷದ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ತುಂಬು ಹೃದಯದಿಂದ ಅಭಿನಂದಸ್ತೇವೆ ಎಂದರಲ್ಲದೆ ಕಾಂಗ್ರೆಸ್ ಪಕ್ಷವು ಅಧಿಕಾರಿಕೆ ಬರುವ ಮುನ್ನ ಚುನಾವಣೆಯಲ್ಲಿ ರಾಜ್ಯ ಜನತೆಗೆ ಭರವಸೆ ನೀಡಿದ್ದ ಐದು ಜನಪ್ರಿಯ ಕಾರ್ಯಕ್ರಮಗಳನ್ನು ಈಡೇರಿಸುವ ಭರವಸೆ ನಮಗಿದೆ ಆ ನಿಟ್ಟಿನಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರು ಹಾಗೂ ಶಾಸಕರುಗಳು ಗಮನ ಹರಿಸಿ ಭರವಸೆಗಳನ್ನು ಈಡೇರಿಸಿ ಬಡವರ ಬದುಕು ಹಸನಾಗುವ ನಿಟ್ಟಿನಲ್ಲಿ ಯೋಜನೆಗಳನ್ನು ಜಾರಿಗೆ ತರುತ್ತಾರೆ ಎಂಬ ವಿಶ್ವಾಸ ಇದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನಾಗವೇಣಿ ರಾಜು, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಪಿ ಗಿರೀಶ್, ಸದಸ್ಯರಾದ ಬಿ ಶಿವಣ್ಣ, ಸಿದ್ದಮ್ಮ, ಶ್ರೀಕಂಠ ಸ್ವಾಮಿ, ಎನ್ ಚಂದ್ರ, ನಾಗಮ್ಮ, ರೇವಮ್ಮ, ಮರಮ್ಮ, ಸುಧಾರಾಣಿ, ಕೆಂಚೇಗೌಡ, ಮಧು, ಭಾಗ್ಯಮ್ಮ, ಮುಖಂಡರಾದ ಕಡಕೋಳ ಕೆ ಟಿ ಶಿವಣ್ಣ, ಅಡಕನಹಳ್ಳಿ ಸ್ವಾಮಿ, ರವಿ ಸೇರಿದಂತೆ ಪಕ್ಷದ ಅನೇಕ ಮುಖಂಡರು ಈ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.