ಮನೆ ಕಾನೂನು ಎಫ್ ಸಿಆರ್ ಎ ನೋಂದಣಿ ರದ್ದತಿ ವಿರುದ್ಧ ರಾಜೀವ್ ಗಾಂಧಿ ಪ್ರತಿಷ್ಠಾನ ಅರ್ಜಿ: ಕೇಂದ್ರಕ್ಕೆ ದೆಹಲಿ...

ಎಫ್ ಸಿಆರ್ ಎ ನೋಂದಣಿ ರದ್ದತಿ ವಿರುದ್ಧ ರಾಜೀವ್ ಗಾಂಧಿ ಪ್ರತಿಷ್ಠಾನ ಅರ್ಜಿ: ಕೇಂದ್ರಕ್ಕೆ ದೆಹಲಿ ಹೈಕೋರ್ಟ್ ನೋಟಿಸ್

0

ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆಯಡಿ ತಾನು ಮಾಡಿದ್ದ ನೋಂದಣಿ ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ ರಾಜೀವ್ ಗಾಂಧಿ ಪ್ರತಿಷ್ಠಾನ ಮತ್ತು ರಾಜೀವ್ ಗಾಂಧಿ ಚಾರಿಟಬಲ್ ಟ್ರಸ್ಟ್ ಸಲ್ಲಿಸಿರುವ ಅರ್ಜಿಗಳ ಕುರಿತು ದೆಹಲಿ ಹೈಕೋರ್ಟ್ ಗುರುವಾರ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಪ್ರಕರಣ ನಿರ್ವಹಣೆಗೆ ಯೋಗ್ಯವೇ ಎನ್ನುವುದನ್ನು ತಾನು ಜುಲೈನಲ್ಲಿ ನಡೆಯಲಿರುವ ವಿಚಾರಣೆಯ ವೇಳೆ ಮೊದಲಿಗೆ ನಿರ್ಧರಿಸುವುದಾಗಿ ಪೀಠವು ಹೇಳಿದೆ.

Join Our Whatsapp Group

ಎರಡೂ ಸರ್ಕಾರೇತರ ಸಂಸ್ಥೆಗಳು (ಎನ್ ಜಿಒ) ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರ ಅಧ್ಯಕ್ಷತೆಯಲ್ಲಿವೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕೇಂದ್ರ ಸಚಿವ ಪಿ ಚಿದಂಬರಂ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರು ರಾಜೀವ್ ಗಾಂಧಿ ಪ್ರತಿಷ್ಠಾನದ ಟ್ರಸ್ಟಿಗಳಾಗಿದ್ದಾರೆ.

ಪ್ರಕರಣದ ಸಂಬಂಧ ನ್ಯಾ. ಜ್ಯೋತಿ ಸಿಂಗ್ ಅವರು ನೋಟಿಸ್ ನೀಡಿ ಜುಲೈ 28ಕ್ಕೆ ಪ್ರಕರಣವನ್ನು ಮುಂದೂಡಿದ್ದಾರೆ.

ಸರ್ಕಾರ ಕನಿಷ್ಠ ನಾಲ್ಕು ಬಾರಿ ಮುಂದೂಡಿಕೆ ಕೋರಿದ್ದರಿಂದ ನೋಟಿಸ್ ಜಾರಿ ಸಂಬಂಧ ಎಂಟು ಬಾರಿ ವಿಚಾರಣೆ ನಡೆಸಬೇಕಾಯಿತು ಎಂಬ ಅಂಶದ ಬಗ್ಗೆಯೂ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು.

ಪ್ರಕರಣ 2023ರ ಜನವರಿಯಲ್ಲಿ ಮೊದಲ ಬಾರಿಗೆ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಪೀಠ ಕಲಾಪ ನಡೆಸದ ಕಾರಣ ಒಂದೆರಡು ಬಾರಿ ಪ್ರಕರಣವನ್ನು ಮುಂದೂಡಲಾಗಿತ್ತು. ಫೆಬ್ರವರಿ 3 ರಂದು ವಿಚಾರಣೆ ಆರಂಭಿಸಿದಾಗ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಜರಾಗುತ್ತಾರೆ ಎಂದು ತಿಳಿಸಿ ಕೇಸ್ ಮುಂದೂಡುವಂತೆ ಸರ್ಕಾರಿ ವಕೀಲರು ಕೋರಿದ್ದರು. ಬಳಿಕ ಸಾಲಿಸಿಟರ್ ಜನರಲ್ ಅವರು ಇತರ ನ್ಯಾಯಾಲಯಗಳ ವಿಚಾರಣೆಯಲ್ಲಿ ಮಗ್ನರಾಗಿರುವುದರಿಂದ ಮೂರು ಬಾರಿ ಪ್ರಕರಣ ಮುಂದೂಡುವಂತೆ ಸರ್ಕಾರಿ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ಇಂದು ಪ್ರಕರಣವನ್ನು ಮತ್ತೆ ವಿಚಾರಣೆಗೆ ಕೋರಿದಾಗ ಸರ್ಕಾರಿ ವಕೀಲರು ಪುನಃ ಪ್ರಕರಣ ಮುಂದೂಡುವಂತೆ ಕೋರಿದರು. ಆದರೆ ನ್ಯಾ,. ಸಿಂಗ್ ಇದಕ್ಕೆ ಸಮ್ಮತಿಸಲಿಲ್ಲ. “ಇದು ನಿಯಮಿತ ಮೊದಲ ಮೇಲ್ಮನವಿ (ಆರ್ ಎಫ್ ಎ). ಇದನ್ನು ಈ ಹಂತದಲ್ಲಿ ವಜಾಗೊಳಿಸಲಾಗುವುದಿಲ್ಲ. ಎಂಟು ಬಾರಿ ವಿಚಾರಣೆ ತಪ್ಪಿದೆ. ಸ್ವಲ್ಪ ಪ್ರಾಯೋಗಿಕವಾಗಿರೋಣ…” ಎಂದು ಪೀಠ ಹೇಳಿತು.

ಅಕ್ಟೋಬರ್ 2022ರಲ್ಲಿ ಸರ್ಕಾರೇತರ ಸಂಸ್ಥೆಗಳ ಎಫ್ ಸಿಆರ್ ಎ ಪರವಾನಗಿ ರದ್ದುಪಡಿಸಲಾಯಿತು. ದಿ ಎಕನಾಮಿಕ್ ಟೈಮ್ಸ್ ನ ವರದಿಯ ಪ್ರಕಾರ, ಕಾನೂನು ಉಲ್ಲಂಘನೆಯ ಆರೋಪದ ಮೇರೆಗೆ ರಾಜೀವ್ ಗಾಂಧಿ ಅವರಿಗೆ ಸಂಬಂಧಿಸಿದ ಎರಡೂ ಸಂಸ್ಥೆಗಳ ಎಫ್ಸಿಆರ್ಎ ನೋಂದಣಿಗಳನ್ನು ರದ್ದುಗೊಳಿಸಲಾಗಿತ್ತು.

ಎನ್ ಜಿಒಗಳ ಅಕ್ರಮ ತನಿಖೆಗೆ ಗೃಹ ಸಚಿವಾಲಯ ಜುಲೈ 2020ರಲ್ಲಿ ರಚಿಸಿದ್ದ ಅಂತರ್ ಸಚಿವಾಲಯ ಸಮಿತಿಯು ಈ ಸರ್ಕಾರೇತರ ಸಂಸ್ಥೆಗಳು ಎಫ್ ಸಿಆರ್ ಎಯ ಮಾನದಂಡಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದ್ದರಿಂದ ಪರವಾನಗಿ ಹಿಂಪಡೆಯುವ ನಿರ್ಧಾರ ಕೈಗೊಳ್ಳಲಾಗಿತ್ತು.