ಬೆಂಗಳೂರು: ಹಲಾಲ್ ಮಾಂಸ ಖರೀದಿಸಬೇಡಿ ಎಂದು ಹಿಂದೂ ಜನಜಾಗೃತಿ ಸಮಿತಿ ಮನವಿ ಮಾಡಿರುವ ಕುರಿತು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ದಯವಿಟ್ಟು ಕರ್ನಾಟಕ ಶಾಂತಿ ತೋಟ ಹಾಳುಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
ಇಂದು ಮಾಧ್ಯಮಗಳ ಜತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ವಾಟ್ಸ್ ಆಪ್ ನೋಡಿದ್ದೇನೆ. ಹಣ್ಣು, ಕಿರಾಣಿ ಅಂಗಡಿಗಳು, ಎಲೆಕ್ಟ್ರಿಕ್ ಶಾಪ್ ಹೀಗೆ ಹಿಂದು ಅಂಗಡಿಗಳಿಗೆ ಹೋಗಿ ಅಂದಿದ್ದಾರೆ. ಸಭಾಧ್ಯಕ್ಷರು ಯಾವ ಪುರುಷಾರ್ಥಕ್ಕೆ ಚರ್ಚೆ ಇಟ್ಟುಕೊಂಡಿದ್ದಾರೆ. ಈ ರಾಜ್ಯ ಎಲ್ಲಿಗೆ ತೆಗೆದುಕೊಂಡು ಹೋಗಬೇಕು ಎಂದುಕೊಂಡಿದ್ದೀರಿ. ಹಿಂದು ಯುವಕರಿಗೆ ಕೈ ಮುಗಿದು ಹೇಳುತ್ತೇನೆ ರಾಜ್ಯ ಹಾಳು ಮಾಡಿಕೊಳ್ಳಬೇಡಿ. ಯಾರು ಶಾಶ್ವತ ಅಲ್ಲ. ಕರ್ನಾಟಕ ಶಾಂತಿಯ ತೋಟ ಹಾಳು ಮಾಡಬೇಡಿ ಎಂದು ಮನವಿ ಮಾಡಿದರು.
ಹಿಂದು ದೇವಸ್ಥಾನಕ್ಕೆ ದಲಿತರನ್ನು ಪೂಜೆ ಮಾಡಲು ಬಿಡುವುದಿಲ್ಲ. ಓಬಿಸಿ , ದಲಿತರು ದೇವಸ್ಥಾನ ಕಟ್ಟಿದರೇ ದೇವಸ್ಥಾನದ ಒಳಗೆ ಕೂತುಕೊಂಡು ಆಸ್ತಿ ಹೊಡೆಯುವವರು ನೀವುಗಳು. ನೀವು ಮಜಾ ಮಾಡುವವರು. ನಾನು ಇಷ್ಟು ಕಠಿಣವಾಗಿ ಯಾವತ್ತೂ ಮಾತಾಡಿಲ್ಲ. ರಾಜ್ಯವನ್ನು ಕೆಟ್ಟ ಪರಿಸ್ಥಿತಿಗೆ ತೆಗೆದುಕೊಂಡು ಹೋಗುತ್ತಿದ್ದೀರಿ. ಈ ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಎಂದು ಅನುಮಾನ ಮೂಡುತ್ತಿದೆ ಎಂದು ಹೆಚ್.ಡಿಕೆ ಕಿಡಿಕಾರಿದರು.