ಮನೆ ರಾಜಕೀಯ ಸರ್ಕಾರಿ ಭೂಮಿ ಒತ್ತುವರಿ, ಮರಳು ದಂಧೆ ಕೇಸ್: ಎಸ್ಐಟಿ ತನಿಖೆಗೆ ಸೂಚಿಸಿದ ರಾಜ್ಯ ಸರ್ಕಾರ

ಸರ್ಕಾರಿ ಭೂಮಿ ಒತ್ತುವರಿ, ಮರಳು ದಂಧೆ ಕೇಸ್: ಎಸ್ಐಟಿ ತನಿಖೆಗೆ ಸೂಚಿಸಿದ ರಾಜ್ಯ ಸರ್ಕಾರ

0

ಬೆಂಗಳೂರು: ದೇವನಹಳ್ಳಿ ತಾಲೂಕಿನಲ್ಲಿ ಗೋಮಾಳ ಜಮೀನನ್ನು ಒತ್ತುವರಿ ಮಾಡಿಕೊಂಡು ಮರಳು ದಂಧೆ ನಡೆಸುತ್ತಿರುವವರ ವಿರುದ್ಧ ವಿಶೇಷ ತನಿಖಾ ತಂಡದಿಂದ ತನಿಖೆ ಮಾಡಿಸಲಾಗುವುದು ಎಂದು ಕಂದಾಯ ಸಚಿವ ಆರ್​. ಅಶೋಕ್​ ವಿಧಾನಪರಿಷತ್​ಗೆ ತಿಳಿಸಿದರು.

ವಿಧಾನಪರಿಷತ್​ನಲ್ಲಿ ನಿಯಮ 330 ರ ಅಡಿ ಹೆಚ್.ಎಂ ರಮೇಶ್​ಗೌಡ, ರವಿಕುಮಾರ್ ಹಾಗೂ ಇತರ ಸದಸ್ಯರು ಗೋಮಾಳ ಸ್ವತ್ತನ್ನು ಸುಳ್ಳು ದಾಖಲೆ ಸೃಷ್ಟಿಸಿ ಕಬಳಿಸಲಾಗಿದೆ. ಫಿಲ್ಟರ್ ಮರಳು ದಂಧೆ ನಡೆಸಿ ಸರ್ಕಾರಕ್ಕೆ ನಷ್ಟವುಂಟು ಮಾಡಲಾಗಿದ್ದು, ಈ ಪ್ರಕರಣವನ್ನು ಎಸಿಬಿಯಿಂದ ತನಿಖೆ ನಡೆಸಬೇಕು ಎಂದು ವಿಷಯ ಪ್ರಸ್ತಾಪಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ಆರ್​ ಅಶೋಕ್, ದೇವನಹಳ್ಳಿ ತಾಲೂಕು ಕುಂದಾಣ ಹೋಬಳಿ ತೈಲಗೆರೆ ಗ್ರಾಮದಲ್ಲಿ 211 ಎಕರೆ ಗೋಮಾಳ ಇದೆ. ಇದರಲ್ಲಿ ಕೆಲವರಿಗೆ ಜಮೀನು ಮಂಜೂರು ಮಾಡಲಾಗಿದೆ. ಆದರೆ, ಇದು ಅನುಮಾನಾಸ್ಪದವಾಗಿದೆ. ಇಲ್ಲಿ ಅಕ್ರಮ ನಡೆದಿರುವ ಸಾಧ್ಯತೆ ಇದೆ. ಇದರ ಜೊತೆ ಫಿಲ್ಟರ್ ಮರಳು ದಂಧೆ ನಡೆಯುತ್ತಿದೆ. ಬಹಳ ವರ್ಷದಿಂದ ಇವರನ್ನು ಹಾಗೆಯೇ ಬಿಟ್ಟಿದ್ದಾರೆ. ಹಾಗಾಗಿ ಅಕ್ರಮ ಫಿಲ್ಡರ್ ಮರಳು ದಂಧೆಯಿಂದ ಹಲವಾರು ಕಟ್ಟಡ ಕುಸಿತವಾಗಿದೆ. ಇದನ್ನು ಮಟ್ಟಹಾಕಬೇಕು ಎಂದರು.

ರಾಜ್ಯದ ಬೊಕ್ಕಸಕ್ಕೆ ನಷ್ಟ: ಸರ್ಕಾರದಿಂದ ಫಿಲ್ಟರ್ ಮರಳು ದಂಧೆಗೆ ಕಡಿವಾಣ ಹಾಕಲಾಗಿದೆ. ಆದರೂ, ಅಲ್ಲಲ್ಲಿ ನಡೆಯುತ್ತಿದೆ. ಈಗ ಶಿವಕುಮಾರ್ ಬಿನ್ ಸೊಣ್ಣಪ್ಪ ಎನ್ನುವವರು ಮರಳು ದಂಧೆ ನಡೆಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟು ಮಾಡುತ್ತಿರುವ ಆರೋಪವಿದೆ. ಸರ್ಕಾರಿ ಭೂಮಿ ಒತ್ತುವರಿ ಮಾಡಿರುವ ಆರೋಪವನ್ನೂ ಹೊಂದಿದ್ದಾರೆ. ಈ ಕುರಿತು ಎಸ್​ಐಟಿ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.

ಸರ್ಕಾರ ಈ ಪ್ರಕರಣವನ್ನು ಎಸ್ಐಟಿಗೆ ವಹಿಸುವ ಘೋಷಣೆ ಮಾಡಿದ್ದಕ್ಕೆ ಸದಸ್ಯರು ಅಭಿನಂದನೆ ಸಲ್ಲಿಸಿದರು.