ಬೆಂಗಳೂರು : ಫಾಫ್ ಡು ಪ್ಲೆಸಿಸ್ ಸಾರಥ್ಯದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉತ್ತಮ ಪ್ರದರ್ಶನ ತೋರಿದರೂ ಕೂಡ ಪದೇ ಪದೇ ಕಾಡಿದ್ದ ಬೌಲಿಂಗ್ ವೈಫಲ್ಯದಿಂದಾಗಿ ಅಂಕಪಟ್ಟಿಯ 6ನೇ ಸ್ಥಾನದೊಂದಿಗೆ ಅಭಿಯಾನ ಅಂತ್ಯಗೊಳಿಸಿದೆ.
ಪ್ಲೇ ಆಫ್ ಹಂತಕ್ಕೇರಲು ಅಂಕಪಟ್ಟಿಯ ಅಗ್ರಸ್ಥಾನಿ ಗುಜರಾತ್ ಟೈಟನ್ಸ್ ಎದುರು ಭಾನುವಾರ (ಮೇ 21) ನಡೆದ ಪಂದ್ಯದಲ್ಲಿ ಜಿದ್ದಾಜಿದ್ದಿನ ಹೋರಾಟ ನಡೆಸಿಯೂ ಚಾಲೆಂಜರ್ಸ್ 6 ವಿಕೆಟ್ ಗಳ ಅಂತರದಲ್ಲಿ ಸೋತಿತು.
ಆರ್ ಸಿಬಿ ಸೋಲಿನಿಂದಾಗಿ ಮುಂಬೈ ಇಂಡಿಯನ್ಸ್ ಅಂಕಪಟ್ಟಿಯ 4ನೇ ಸ್ಥಾನ ತನ್ನದಾಗಿಸಿಕೊಂಡು ಎಲ್ ಎಸ್ ಜಿ ವಿರುದ್ದದ ಎಲಿಮಿನೇಟರ್ ಪಂದ್ಯಕ್ಕೆ ಪ್ರವೇಶ ಪಡೆಯಿತು.
ಟೈಟನ್ಸ್ ಗೆ ಜಯ
ಮಳೆ ಕಾರಣ ಇಂದು ತಾಸು ತರವಾಗಿ ಶುರುವಾದ ಪಂದ್ಯದಲ್ಲಿ ಬ್ಯಾಟರ್ ಗಳು ಉತ್ತಮ ಪ್ರದರ್ಶನ ತೋರಿದರು, ಗೆಲ್ಲಲು 198 ರನ್ ಗಳ ಕಠಿಣ ಗುರಿ ಬೆನ್ನತ್ತಿದ್ದ ಗುಜರಾತ್ ಟೈಟನ್ಸ್ ಆರಂಭದಲ್ಲಿ ವೃದ್ಧಿಮಾನ್ ಸಹಾ (12) ವಿಕೆಟ್ ಕಳೆದುಕೊಂಡಾಗ ಗೆಲ್ಲುವ ಸಾಧ್ಯತೆ ಬಹಳಾ ಕಡಿಮೆ ಇತ್ತು.
ಆದರೆ, 2ನೇ ವಿಕೆಟ್ ಗೆ ಯುವ ಓಪನರ್ ಶುಭಮನ್ ಗಿಲ್ ಮತ್ತು ಆಲ್ರೌಂಡರ್ ವಿಜಯ್ ಶಂಕರ್, ಬಿರುಸಿನ ಬ್ಯಾಟಿಂಗ್ ನಡೆಸಿ 123 ರನ್ ಗಳ ಮ್ಯಾಚ್ ವಿನ್ನಿಂಗ್ ಜೊತೆಯಾಟ ಕಟ್ಟಿದರು.
ವಿಜಯ್ ಶಂಕರ್, 35 ಎಸೆತಗಳಲ್ಲಿ 5 ಫೋರ್ ಮತ್ತು 2 ಸಿಕ್ಸರ್ ನೊಂದಿಗೆ 53 ರನ್ ಸಿಡಿಸಿ ಔಟಾದರೆ, ತಂಡವನ್ನು ಜಯದ ದಡ ಮುಟ್ಟಿಸುವ ಜವಾಬ್ದಾರಿ ಹೊತ್ತು ಬ್ಯಾಟ್ ಮಾಡಿದ ಗಿಲ್, ಸಿಕ್ಸರ್ ಸಿಡಿಸಿ ಶತಕ ಬಾರಿಸುವುದರ ಜೊತೆಗೆ ತಂಡಕ್ಕೆ 6 ವಿಕೆಟ್ಗಳ ಭರ್ಜರಿ ಜಯ ತಂದರು. 51 ಎಸೆತಗಳಲ್ಲಿ 5 ಫೋರ್ ಮತ್ತು 8 ಸಿಕ್ಸರ್ ಒಳಗೊಂಡ ಅಜೇಯ 104 ರನ್ ಸಿಡಿಸಿ ಟೈಟನ್ಸ್ ಜಯದ ರೂವಾರಿ ಎನಿಸಿದರು.
ವಿರಾಟ್ ಕೊಹ್ಲಿ ಶತಕ ವ್ಯರ್ಥ
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್ ಸಿಬಿ ತಂಡ ತನ್ನ 20 ಓವರ್ ಗಳಲ್ಲಿ 197/5 ರನ್ ಕೆಲಹಾಕಲು ವಿರಾಟ್ ಕೊಹ್ಲಿ ಕಾರಣರಾದರು. ಸ್ಟಾರ್ ಬ್ಯಾಟರ್ ಗಳ ವೈಫಲ್ಯದ ನಡುವೆಯೂ ಗರ್ಜಿಸಿದ ಕಿಂಗ್ ಕೊಹ್ಲಿ, ಎದುರಿಸಿದ 61 ಎಸೆತಗಳಲ್ಲಿ 13 ಫೋರ್ ಮತ್ತು 1 ಸಿಕ್ಸರ್ನೊಂದಿಗೆ 101 ರನ್ ಬಾರಿಸಿ ಔಟಾಗದೆ ಉಳಿದರು. ಇದು ಅವರ ಐಪಿಎಲ್ ವೃತ್ತಿಬದುಕಿನ 7ನೇ ಶತಕ ಕೂಡ. ಆದರೆ, ವಿರಾಟ್ ಬಾರಿಸಿದ ಈ ದಾಖಲೆಯ ಶತಕ ಆರ್ ಸಿಬಿಗೆ ಎದುರಾದ ಹೀನಾಯ ಸೋಲನ್ನು ತಪ್ಪಿಸಲು ಸಾಧ್ಯವಾಗಲಿಲ್ಲ.
ಸಂಕ್ಷಿಪ್ತ ಸ್ಕೋರ್:
ರಾಯಲ್ ಚಾಲೆಂಜರ್ಸ್ ಬೆಂಗಳೂರು: 20 ಓವರ್ ಗಳಲ್ಲಿ 5 ವಿಕೆಟ್ ಗೆ 197 ರನ್ (ವಿರಾಟ್ ಕೊಹ್ಲಿ 101*, ಫಾಫ್ ಡು ಪ್ಲೆಸಿಸ್ 28, ಮೈಕಲ್ ಬ್ರೇಸ್ವೆಲ್ 26, ಅನುಜ್ ರಾವತ್ 23*; ನೂರ್ ಅಹ್ಮದ್ 39ಕ್ಕೆ 2).
ಗುಜರಾತ್ ಟೈಟನ್ಸ್: 19.1 ಓವರ್ ಗಳಲ್ಲಿ 198/4 ರನ್ (ಶುಭಮನ್ ಗಿಲ್ 104*, ವಿಜಯ್ ಶಂಕರ್ 53; ಮೊಹಮ್ಮದ್ ಸಿರಾಜ್ 32ಕ್ಕೆ 2, ಹರ್ಷಲ್ ಪಟೇಲ್ 29ಕ್ಕೆ 1, ವೈಶಾಖ್ ವಿಜಯ್ ಕುಮಾರ್ 40ಕ್ಕೆ 1).
ಪಂದ್ಯಶ್ರೇಷ್ಠ: ಶುಭಮನ್ ಗಿಲ್