ಜೈಪುರ: ಪತಿಯ ಚಿತಾಭಸ್ಮವನ್ನು ವಿಸರ್ಜನೆ ಮಾಡಿ ಹಿಂತಿರುಗುತ್ತಿದ್ದ ಸಮಯದಲ್ಲಿ ರಸ್ತೆ ಅಪಘಾತ ಸಂಭವಿಸಿ, ಮೃತರ ಪತ್ನಿ, ಮಗ ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ಘಟನೆ ಜೈಪುರ ಸಮೀಪದ ಕೋಟ್ಖಾವ್ಡಾದಲ್ಲಿ ನಡೆದಿರುವುದು ವರದಿಯಾಗಿದೆ.
ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮದನ್ ಗವಾರಿಯಾ ಇತ್ತೀಚೆಗೆ ನಿಧನರಾಗಿದ್ದಾರೆ. ಹರಿದ್ವಾರದಲ್ಲಿ ಪತಿಯ ಚಿತಾಭಸ್ಮವನ್ನು ಗಂಗಾ ನದಿಯಲ್ಲಿ ಮುಳುಗಿಸಿ ಹಿಂತಿರುಗುತ್ತಿದ್ದ ಪತ್ನಿ, ಮಗ ಹಾಗೂ ಕುಟುಂಬದ ಇತರೆ ಸದಸ್ಯರಿಗೆ ಭೀಕರ ರಸ್ತೆ ಅಪಘಾತವೊಂದು ಎದುರಾದ ಪರಿಣಾಮ ಈ ದುರಂತ ಘಟನೆ ನಡೆದಿದೆ.
ಕೋಟ್ಖಾವ್ಡಾಕ್ಕೆ ವಾಪಾಸ್ ಆಗುತ್ತಿದ್ದ ವೇಳೆ ತಮ್ಮ ಸಂಬಂಧಿಕರಿಗಾಗಿ ಕೆಲ ಕಾಲ ವಾಹನದಲ್ಲಿ ಕಾದು ಕುಳಿತ್ತಿದ್ದಾರೆ. ಈ ವೇಳೆ ಯವಸ್ವರೂಪಿಯಾಗಿ ಬಂದ ಜೀಪ್ ವೊಂದು ವಾಹನದ ಮೇಲೆ ಹರಿದಿದೆ. ಪರಿಣಾಮ ಸ್ಥಳದಲ್ಲೇ ಮದನ್ ಗವಾರಿಯಾ ಅವರ ಪತ್ನಿ ಸುನೀತಾ, ಮಗ ಗೋಲು, ಸೀತಾರಾಮ್ ಹಾಗೂ ಇವರ ಪತ್ನಿ ಅನಿತಾ ಮೃತಪಟ್ಟಿದ್ದಾರೆ. ಒಟ್ಟು ಏಳು ಮಂದಿ ವಾಹನದಲ್ಲಿದ್ದರು ಎನ್ನಲಾಗಿದ್ದು, ಗಾಯಗೊಂಡ ಇತರರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ವರದಿ ತಿಳಿಸಿದೆ.
ಜೀಪ್ ನ ಚಾಲಕ ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದು, ಜೀಪ್ ನ ಹಿಂಭಾಗದಲ್ಲಿ ಮದ್ಯದ ಬಾಟಲ್ ಗಳು ಪತ್ತೆಯಾಗಿದೆ. ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ವರದಿ ತಿಳಿಸಿದೆ.
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಘಟನೆಗೆ ಸಂತಾಪ ಸೂಚಿಸಿ,ಮೃತರ ಕುಟುಂಬಕ್ಕೆ ಪರಿಹಾರವನ್ನು ನೀಡುವುದಾಗಿ ಹೇಳಿದ್ದಾರೆ.