ಮನೆ ರಾಜ್ಯ ತಾಲೂಕು ಹಂತದಲ್ಲಿ ಕಂಟ್ರೋಲ್ ರೂಂ ತೆರೆಯಲು ಸೂಚನೆ

ತಾಲೂಕು ಹಂತದಲ್ಲಿ ಕಂಟ್ರೋಲ್ ರೂಂ ತೆರೆಯಲು ಸೂಚನೆ

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಎಫ್.ಐ.ಆರ್ ದಾಖಲಿಸಬೇಕಾದೀತು:ಡಿ.ಸಿ.ಎಚ್ಚರಿಕೆ

0

ಮೈಸೂರು: ಪೂರ್ವ ಮುಂಗಾರು ಮಳೆ ಆರಂಭವಾಗಿದ್ದು ಜಿಲ್ಲೆಯಲ್ಲಿ     ಯಾವುದೇ ಸಂದರ್ಭದಲ್ಲಿ ಜನ,ಜಾನುವಾರುಗಳ ಕ್ಲಿಷ್ಟಕರ ಪರಿಸ್ಥಿತಿ  ನಿಭಾಯಿಸಲು ಜಿಲ್ಲಾ ಹಾಗೂ ತಾಲೂಕು ಹಂತದ ಅಧಿಕಾರಿ, ಸಿಬ್ಬಂದಿಗಳು ಸನ್ನದ್ಧರಾಗಿರಬೇ ಕು, ಕರ್ತವ್ಯ ನಿರ್ಲಕ್ಷಿಸುವ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಬೇಕಾದೀತು, ಅದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದರು

Join Our Whatsapp Group

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಮಾನ್ಸೂನ್ ಸಿದ್ದತೆ ಕುರಿತ ಸಭೆಯಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿ ನಾವುಗಳು ಕಾರ್ಯನಿರ್ವಹಿಸುತ್ತಿದ್ದು, ಬಹಳ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು,   ಈ ಹಿಂದೆ ತೊಂದರೆಗೊಳಗಾಗಿದ್ದ ಪ್ರದೇಶಗಳನ್ನು ಗುರುತಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.ಕಾಳಜಿ ಕೇಂದ್ರಗಳನ್ನು ತೆರೆಯುವುದು,ಅಗತ್ಯವಿದ್ದಲ್ಲಿ ಜನರ ಸ್ಥಳಾಂತರಕ್ಕೆ ಸಿದ್ಧರಾಗಿರಬೇಕು,ಅಪಾಯಕಾರಿ ಮರಗಳನ್ನು, ವಿದ್ಯುತ್ ಕಂಬಗಳನ್ನು ಗುರುತಿಸಿ ತೆರವುಗೊಳಿಸುವುದು, ರಸ್ತೆಯಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ, ಶಿಥಿಲಾವಸ್ಥೆಯಲ್ಲಿರುವ ಮನೆಗಳು, ಶಾಲಾ ಕಟ್ಟಡಗಳಿಂದ ಯಾವುದೇ ತೊಂದರೆಯಾಗಬಾರದು ಎಂದರು.

ತಾಲೂಕು ಹಂತದಲ್ಲಿ ಕಂಟ್ರೋಲ್ ರೂಂ ತೆರೆದು 24*7 ಕಾರ್ಯ ನಿರ್ವಹಿಸಬೇಕು, ಯಾವುದೇ ಜೀವಹಾನಿ ಪ್ರಕರಣಗಳಿಗೆ 48 ಗಂಟೆಯೊಳಗೆ ಪರಿಹಾರ ಪಾವತಿಸಲು ವಿಳಂಬವಾಗಬಾರದು ಹಾಗೂ ಈಗಾಗಲೇ ತಾಲೂಕು ಮಟ್ಟದಲ್ಲಿರುವ ವಿಪತ್ತು ನಿರ್ವಹಣಾ ತಂಡಗಳನ್ನು  ಸಕ್ರಿಯಗೊಳಿಸಿ ಎಂದರು.

ಕೆರೆ ದಂಡೆಗಳನ್ನು ಪರೀಕ್ಷಿಸಿ ಎಲ್ಲಾದರು ಸೋರಿಕೆ ಇದ್ದರೆ ತಕ್ಷಣ ಸರಿಪಡಿಸಿ, ಕೆರೆಗಳ ಅಕ್ಕಪಕ್ಕದ ತಗ್ಗು ಪ್ರದೇಶಗಳಲ್ಲಿ ಇರುವ ಮನೆಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ತಿಳಿಸಿದರು.

ಬೆಳೆ ಹಾನಿಗೊಳಗಾದ ರೈತರಿಗೆ ತಕ್ಷಣ ಪರಿಹಾರ ನೀಡಲು ತಮ್ಮಲ್ಲಿ ಸಾಕಷ್ಟು ಹಣ ಇದ್ದು ಜಾಯಿಂಟ್ ಸರ್ವೆ ವರದಿ ಪಡೆದು ಪರಿಹಾರ ಪಾವತಿಸಲು ಕ್ರಮ ಕೈಗೊಳ್ಳಿ ಎಂದರು.

ಅಗ್ನಿ ಶಾಮಕ ಇಲಾಖೆ ಅಧಿಕಾರಿಗಳು ಅಗತ್ಯ ಬೋಟ್ ಗಳು,ಮುಳುಗು ತಜ್ಞರು ಹಾಗೂ ಅಗತ್ಯ ಪರಿಕರಗಳೊಂದಿಗೆ ಪರಿಸ್ಥಿತಿ ನಿಭಾಯಿಸಲು ಸಿದ್ದರಿರಬೇಕು ಹಾಗೂ ಸಿಡಿಲು ಸಂಭವಿಸಿದಾಗ ರಕ್ಷಿಸಿಕೊಳ್ಳಲು ಜಾಗೃತಿ ಮೂಡಿಸಬೇಕೆಂದರು.

ಮಹಾನಗರ ಪಾಲಿಕೆ ಆಯುಕ್ತರಾದ ಲಕ್ಷ್ಮೀಕಾಂತ ರೆಡ್ಡಿ ಮಾಹಿತಿ ನೀಡಿ ನಗರದ 65 ವಾರ್ಡ್ಗಗಳ ಪೈಕಿ 6 ವಾರ್ಡ್ಗಳ ಕೆಲವು ಕಡೆ ಸಮಸ್ಯೆಗಳಿದ್ದು ತಕ್ಷಣಕ್ಕೆ ಪರಿಹರಿಸಲಾಗಿದೆ ಎಂದರು.

ಸಭೆಯಲ್ಲಿ ಜಿ.ಪಂ.ಸಿಇಓ ಪೂರ್ಣಿಮಾ, ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ, ಉಪವಿಭಾಗಾಧಿಕಾರಿ ಕಮಲಾಬಾಯಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.